Site icon Vistara News

Hubballi news : ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ; ಎನ್‌ಐಎಯಿಂದ ಹಿಂಪಡೆವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರಲ್ಹಾದ ಜೋಶಿ ಆಕ್ರೋಶ

Old Hubballi riot case Union Minister Pralhad Joshi expresses displeasure over nia's decision to withdraw

ಹುಬ್ಬಳ್ಳಿ: ರಾಜ್ಯದಲ್ಲಿ ಸಿಬಿಐ ತನಿಖೆಗೆ ನಿರ್ಬಂಧ ಹೇರಿದ ಕಾಂಗ್ರೆಸ್ ಸರ್ಕಾರ ಈಗ ಭಯೋತ್ಪಾದನಾ ಪ್ರಕರಣಗಳ ಎನ್‌ಐಎ (NIA) ತನಿಖೆಗೂ ತಡೆವೊಡ್ಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾದ್ಯಮದೊಂದಿಗೆ ಮಾತನಾಡಿದ ಅವರು ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು (Hubballi Case) ಎನ್‌ಐಎ ( NIA) ತನಿಖೆಯಿಂದ ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.

ಹುಬ್ಬಳ್ಳಿ ಗಲಭೆ ಪ್ರಕರಣ NIA ತನಿಖೆಯಿಂದ ವಾಪಸ್‌ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ನಿರ್ಧರಿಸಿರುವುದು ಅವರ ಮತಾಂಧತೆಯ ಪರಮಾವಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆಕ್ರೋಶ ಹೊರ ಹಾಕಿದರು. ಹಳೇ ಹುಬ್ಬಳ್ಳಿ ಗಲಭೆ ಭಯೋತ್ಪಾದನಾ ಚಟುವಟಿಕೆಗೆ ಸಮಾನವಾದ ಘಟನೆಯಾಗಿದ್ದು, ಪ್ರಕರಣ ಎನ್ಐಎ ನ್ಯಾಯಾಲಯದಲ್ಲಿದೆ. ಹಾಗಿದ್ದಾಗ್ಯೂ ಸರ್ಕಾರ ಈ ನಿಲುವು ತಳೆದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಹೈಕೋರ್ಟ್, ಸುಪ್ರಿಂಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ಆರೋಪಿಗಳ ಜಾಮೀನು ತಿರಸ್ಕೃತಗೊಂಡಿದೆ. ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳು ಪ್ರಕರಣ ಹಿಂಪಡೆಯಲು ವಿರೋಧಿಸಿದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆ ಗಲಭೆಕೋರರಿಗೆ ಕುಮ್ಮಕ್ಕು ಕೊಡುವಂತಿದೆ ಎಂದು ಪ್ರಲ್ಹಾದ ಜೋಶಿ ಹರಿ ಹಾಯ್ದರು. ರಾಜ್ಯ ಸರ್ಕಾರ, ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗುವವರನ್ನು ಬೆಂಬಲಿಸುವಂಥ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದ ಸಚಿವರು, ಹಳೇ ಹುಬ್ಬಳ್ಳಿ ಗಲಭೆ ಅತ್ಯಂತ ಗಂಭೀರ ಪ್ರಕರಣ. NIA ಯಿಂದ ಹಿಂಪಡೆಯುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತಾಂಧ ಶಕ್ತಿಗಳ, ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದಕ್ಕೆ ತದ್ವಿರುದ್ಧವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು NIA ಯಿಂದ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ಪರಾಕಾಷ್ಟೆ ಮೆರೆಯುತ್ತಿದೆ ಎಂದು ಜೋಶಿ ವಾಗ್ದಾಳಿ ಮಾಡಿದರು. ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣದಲ್ಲಿ ಹಿಂದೂ-ಮುಸ್ಲಿಂ ಪ್ರಶ್ನೆಯಲ್ಲ. ದೇಶದ್ರೋಹಿ, ಸಮಾಜ ದ್ರೋಹಿಗಳ ವಿರುದ್ಧದ ಹೋರಾಟ, ಭಾರತದ ಸಂವಿಧಾನ, ಕಾನೂನು ಮಧ್ಯೆ ಆಗಿರೋ ಹೋರಾಟ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version