Site icon Vistara News

Karnataka Election 2023 : ಕಾಂಗ್ರೆಸ್‌ ಸೇರಿರುವ ಶೆಟ್ಟರ್‌ರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದ ಯಡಿಯೂರಪ್ಪ

B S Yediyurappa lashes out at Jagadish Shettar

ಹುಬ್ಬಳ್ಳಿ : ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ. (Karnataka Election 2023)

ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರಿ ವಿಶ್ವಾಸದ್ರೋಹ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವುದಿಲ್ಲ. ಅವರನ್ನು ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದು, ʻʻ ನಾನು ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ ನಿಜ. ನಾನು ಬಿಜೆಪಿ ಬಿಟ್ಟಿದ್ದರೂ ಶೆಟ್ಟರ್ ಅವರಂತೆ ಕಾಂಗ್ರೆಸ್ ಸೇರಿರಲಿಲ್ಲ. ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಸಹ ಕೇಳಿದ್ದೇನೆʼʼ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪಕ್ಷದ ಸೂಚನೆಯಂತೆ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಲು ತಂತ್ರ ರೂಪಿಸಲೆಂದೇ ಇಲ್ಲಿಗೆ ಆಗಮಿಸಿರುವ ಯಡಿಯೂರಪ್ಪ, ಹಲವು ನಾಯಕರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಲಿಂಗಾಯಿತ ನಾಯಕರೊಂದಿಗೂ ಅವರು ಸಭೆ ನಡೆಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸುವ ಉದ್ದೇಶದಿಂದಲೇ ಸಭೆ ಕರೆಯಲಾಗಿತ್ತು. ಶತಾಯಗತಾಯ ಅವರನ್ನು ಸೋಲಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಪಕ್ಷ ವಿರೋಧಿಗೆ ತಕ್ಕ ಪಾಠ ಕಲಿಸುವಂತೆ ವೀರಶೈವ ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಸೋಲು ಖಚಿತ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಜಗದೀಶ್‌ ಶೆಟ್ಟರ್‌ ಸೋಲಿಸಲು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ನಾನೇ ರೋಡ್‌ ಶೋ ನಡೆಸುತ್ತೇನೆ ಎಂದು ಹೇಳಿದ ಯಡಿಯೂರಪ್ಪ, ಮುಂದೆ ಪ್ರಧಾನಿ ಮೋದಿ‌ ಸಹ ಹುಬ್ಬಳ್ಳಿಗೆ ಬಂದು ಬಿಜೆಪಿ ಪರವಾಗಿ ಪ್ರಚಾರ ನಡೆಸುವ ಸಾಧ್ಯತೆಗಳಿವೆ ಎಂದು ಯಡೀಯೂರಪ್ಪ ಪ್ರಕಟಿಸಿದರು.

ಅವರಿಗೆ ಏನು ಅನ್ಯಾಯ ಮಾಡಿದ್ದೇವೆ?

ಇಂದು ಬೆಳಗ್ಗೆ ನಡೆದ ವೀರಶೈವ ಲಿಂಗಾಯಿತ ನಾಯಕರ ಸಭೆಯಲ್ಲಿ ಮಾತನಾಡಿದ ಬಿ ಎಸ್‌ ಯಡಿಯೂರಪ್ಪ ʻʻನಾನು ನಿಮ್ಮನ್ನು ಈ ಸಭೆಗೆ ಕರೆದಿರೋದು ಸ್ಪಷ್ಟ ಕಾರಣಕ್ಕಾಗಿ. ಜಗದೀಶ್ ಶೆಟ್ಟರ್ ಬಗ್ಗೆ ನಡೆದ ಸತ್ಯ ಸಂಗತಿ ಹೇಳಲು ಈ ಸಭೆ ಕರೆದಿದ್ದಾರೆ. ಅವರನ್ನು ಪಕ್ಷ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಾನೇ ನಿಂತು ‌ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು?ʼʼ ಎಂದು ಪ್ರಶ್ನಿಸಿದರು.

ಜಗದೀಶ್‌ ಶೆಟ್ಟರ್‌ ಅವರೊಂದಿಗೆ ಸ್ವತಃ ಪ್ರಧಾನಿ ಮೋದಿಯವರೇ ಮಾತನಾಡಿದ್ದಾರೆ. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ‌, ಅವರಿಗೆ ಟಿಕೇಟ್ ಕೊಡ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ಕೂಡ ನೀಡಲಾಗಿತ್ತು. ಇಷ್ಟೆಲ್ಲ ಆದಮೇಲೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.

ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ನನ್ನ ರಕ್ತದಲ್ಲಿ ಬರೆದುಕೊಡ್ತೇನೆ. ಶೆಟ್ಟರ್‌ ಈ ಬಾರಿ ಗೆಲ್ಲಲ್ಲ ಎಂದು ಹೇಳಿದ ಯಡಿಯೂರಪ್ಪ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸುವ ಮೂಲಕ ಪಕ್ಷಾಂತರಿಗಳಿಗೆ ಕ್ಷಮಿಸೋದಿಲ್ಲ ಅನ್ನೋ‌ ಸುದ್ದಿ ಎಲ್ಲೆಡೆ ಹೋಗಬೇಕು ಎಂದರು.

ಪಕ್ಷದ ಸೂಚನೆಯಂತೆ ಅಖಾಕ್ಕಿಳಿದ ಯಡಿಯೂರಪ್ಪ

ಸಂತೋಷ್‌ ತೀರ್ಮಾನವಲ್ಲ ಎಂದ ಕಟೀಲ್‌

ಜಗದೀಶ್‌ ಶೆಟ್ಟರ್‌ ಆರೋಪಿಸಿದಂತೆ ಅವರಿಗೆ ಟಿಕೆಟ್‌ ತಪ್ಪಲು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಮಾತ್ರ ಕಾರಣರಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಒಬ್ಬ ವ್ಯಕ್ತಿ ಎಲ್ಲವನ್ನೂ ತೀರ್ಮಾನಿಸಲ್ಲ, ಅವರ ಬಗ್ಗೆ ಆರೋಪ ಆಧಾರ ರಹಿತ. ಪ್ರಧಾನಿ ಮೋದಿ ಸೇರಿದಂತೆ ಮೋದಿ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖರು ಟಿಕೆಟ್ ಬಗ್ಗೆ ನಿರ್ಧರಿಸಿದ್ದಾರೆ ಎಂದರು.

ಜಗದೀಶ್‌ ಶೆಟ್ಟರ್ ಪಾರ್ಟಿಯಲ್ಲಿ ಇದ್ದಾಗ ಎಲ್ಲರಿಗೂ ಟಿಕೆಟ್ ಕೊಟ್ಟಿದ್ದರಾ ಎಂದು ಪ್ರಶ್ನಿಸಿದ್ದ ಕಟೀಲ್‌, ಪಾರ್ಟಿ ಬಿಟ್ಟು ಹೋದ ಮೇಲೆ ಪಕ್ಷದ ಮೇಲಿನ ಕೋಪದಿಂದ ಹೀಗೆಲ್ಲಾ ಆರೋಪ ಮಾಡುವುದು ಸರಿಯಲ್ಲ. ಪಾರ್ಟಿಯಲ್ಲಿ ಎಲ್ಲಾ ನಿರ್ಧಾರಗಳನ್ನು ಕೋರ್ ಕಮಿಟಿ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಡಿಕೆಶಿ, ಸಿದ್ದು ಜಾತಿವಾದಿ; ರಾಷ್ಟ್ರವಾದಿ ಸಿ ಟಿ ರವಿ ಸಿಎಂ ಆಗಲಿ! ಈಶ್ವರಪ್ಪ ಪುನರುಚ್ಚಾರ

Exit mobile version