Site icon Vistara News

Pralhad Joshi: ರಾಜಕೀಯ ಒತ್ತಡಕ್ಕೆ ಒಳಗಾಗಿ ಹುಚ್ಚಾಟ ಮಾಡ್ಬೇಡಿ; ಮಂಡ್ಯ ಎಸ್‌ಪಿಗೆ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ

Minister Pralhad Joshi warns Mandya SP not to come under political pressure

ಹುಬ್ಬಳ್ಳಿ: ಮಂಡ್ಯದ ನಾಗಮಂಗಲ ಗಲಭೆ (Nagamangala Case) ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೆ ಒಳಗಾಗಿ ಏನೇನೋ ಹುಚ್ಚಾಟ ಮಾಡಬೇಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಮಂಡ್ಯ ಎಸ್‌ಪಿಗೆ ಎಚ್ಚರಿಕೆ ನೀಡಿದ್ದಾರೆ. ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಇದ್ದಂತಿದೆ. ನಿಜವಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸೂಚಿಸಿದರು. ನಾಗಮಂಗಲದಲ್ಲಿ ಗಣಪತಿ ಪ್ರತಿಷ್ಠಾಪನೆ, ಮೆರವಣಿಗೆ ಎಲ್ಲದೂ ಸರ್ಕಾರದ ನಿಯಮ ಮತ್ತು ಪೊಲೀಸ್ ಇಲಾಖೆ ಅನುಮತಿ ಮೇರೆಗೆ ನಡೆದಿದೆ. ಗಲಭೆ ಖಂಡಿಸಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಮಸೀದಿ ಇರುವುದೇ ರಸ್ತೆಯಲ್ಲಿ. ಇನ್ನು, ಇಲ್ಲಿ ಓಡಾಡಬೇಡಿ, ವಾದ್ಯ ಬರಿಸಬೇಡಿ ಎಂದರೆ ಹೇಗೆ? ಇದನ್ನೇನು ಪಾಕಿಸ್ತಾನ ಮಾಡಿದ್ದಾರೆಯೇ? ಎಂದು ಜೋಶಿ ಹರಿ ಹಾಯ್ದರು. ಗಲಭೆಯಲ್ಲಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದವರನ್ನು ಬಿಟ್ಟು ಗಣಪತಿ ಇಟ್ಟವರನ್ನು, ಸಿಕ್ಕ ಸಿಕ್ಕವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿ ಕ್ರಮ ಜರುಗಿಸುವುದು ಸರಿಯಲ್ಲ ಎಂದು ಖಂಡಿಸಿದರು.

ಮಮತಾ ಬ್ಯಾನರ್ಜಿ ಡ್ರಾಮಾ ಬಿಟ್ಟು ರಾಜೀನಾಮೆ ನೀಡೋದು ಒಳ್ಳೇದು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವುದೇ ಒಳ್ಳೆಯದು ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಮತಾ ಅವರು ರಾಜೀನಾಮೆಯ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಆಗಿ ಸರ್ಕಾರ ಮುನ್ನಡೆಸಲು ಅವರು ಸಮರ್ಥರಿಲ್ಲ. ಸಮರ್ಪಕ ಆಡಳಿತ ನೀಡುವಲ್ಲಿ ಅವರು ಅಸಮರ್ಥರಾಗಿದ್ದಾರೆ ಎಂದು ಪ್ರಕ್ರಿಯಿಸಿದರು. ಅಧಿಕಾರ ನೀಡಿದ ಜನರಿಗೆ ನ್ಯಾಯ ಒದಗಿಸುವಲ್ಲಿ ಸಹ ವೈಫಲ್ಯ ಕಂಡಿದ್ದಾರೆ. ಸಮುದಾಯಕ್ಕೆ ಅವಮಾನ ಮಾಡುತ್ತಲೆ ಬಂದಿದ್ದಾರೆ. ಇದೇ ಪ್ರವೃತ್ತಿ ಮುಂದುವರಿಸುವ ಬದಲು ರಾಜೀನಾಮೆ ನೀಡುವುದೇ ಸೂಕ್ತ ಎಂದರು. ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ಹೇಳಿಕೆ ಕೇವಲ ಡ್ರಾಮಾ. ಜನರೆದುರು ಈ ರೀತಿ ಕಣ್ಣಾ ಮುಚ್ಚಾಲೆ ಆಡುವುದು ಬೇಡ. ಬದಲಿಗೆ ರಾಜೀನಾಮೆ ನೀಡಲಿ ಎಂದರು.

ಅರವಿಂದ ಕೇಜ್ರಿವಾಲ್ ದೋಷಮುಕ್ತರಾಗಿಲ್ಲ

ದೆಹಲಿ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ಅವರಿನ್ನೂ ದೋಷಮುಕ್ತರಾಗಿ ಹೊರ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು. ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದೆ. ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರಿಗೂ ಬೇಲ್ ಸಿಕ್ಕಿತ್ತು ಆಮೇಲೆ ಶಿಕ್ಷೆಗೆ ಗುರಿಯಾದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ನ್ಯಾಯಾಲಯ ಅವರನ್ನು ಇನ್ನೂ ಆರೋಪಮುಕ್ತ ಮಾಡಿಲ್ಲ. ಬಿಜೆಪಿಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ಹೇಳಿದರು. ಹಿಂದೆ ಲಾಲೂ ಪ್ರಸಾದ ಯಾದವ್ ಅವರಿಗೂ ಬೇಲ್ ಸಿಕ್ಕಿತ್ತು. ಸಮಗ್ರ ವಿಚಾರಣೆ ಬಳಿಕ ಆರೋಪ ಸಾಬೀತಾಗಿ ಶಿಕ್ಷೆಗೆ ಒಳಗಾದರು ಎಂದು ಪ್ರಲ್ಹಾದ ಜೋಶಿ ವಿಶ್ಲೇಷಿಸಿದರು. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಅತ್ಯುನ್ನತವಾಗಿದೆ ಮತ್ತು ಅತ್ಯಂತ ಶ್ರೇಷ್ಠವಾಗಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದರು.
ದೇಶದಲ್ಲಿ ಕೋರ್ಟ್‌ಗಳು ನ್ಯಾಯಯುತವಾಗಿ, ಅತ್ಯಂತ ನಿಷ್ಪಕ್ಷವಾಗಿ ಕೆಲಸ ಮಾಡುತ್ತಿವೆ ಎಂದು ಸಚಿವರು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅರಿಯಲಿ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Nagamangala Case : ನಾಗಮಂಗಲ ಗಲಭೆ; ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿದ್ದ ಕುಟುಂಬಗಳು

ದೇಶವಿರೋಧಿಗಳ ಜತೆ ಕೈ ಜೋಡಿಸುವುದೇ ರಾಹುಲ್ ಗಾಂಧಿ ನಡೆ

ಭಾರತದ ವಿರೋಧಿಗಳ ಜತೆ ಕೈ ಜೋಡಿಸುವುದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಅವಹೇಳನ ಮಾಡುವುದು ದೇಶದ್ರೋಹದ ಕೆಲಸ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶದ್ರೋಹಿಗಳ ಜತೆ, ಭಾರತದ ವಿರೋಧಿಗಳ ಜತೆ ರಾಹುಲ್ ಗಾಂಧಿ ದೇಶದ ವಿರುದ್ಧವಾಗಿ, ಪ್ರಜಾಪ್ರಭುತ್ವವನ್ನು ವಿರೋಧಿಸುವ ರೀತಿ ಮಾತನಾಡುತ್ತಾರೆ ಎಂದು ಹರಿ ಹಾಯ್ದರು. ವಿದೇಶದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎನ್ನುವ ರಾಹುಲ್ ಗಾಂಧಿ, ತುರ್ತು ಪರಿಸ್ಥಿತಿ ಹೇರಿದವರು ಯಾರು? ಎಂಬುದನ್ನು ಅರಿತುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು. ಪ್ರಜಾಪ್ರಭುತ್ವ, ಸಮಾನತೆ ಎಂದು ಭಾಷಣ ಬಿಗಿಯುವ ರಾಹುಲ್ ಗಾಂಧಿ ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಇನ್ನು, ಚುನಾವಣಾ ಆಯೋಗದ ಬಗ್ಗೆ ಆರೋಪ ಮಾಡುತ್ತಾರೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಗೆದ್ದಿಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್‌ನವರಿಗೆ ಪ್ರಜಾಪ್ರಭುತ್ವ, ಚುನಾವಣಾ ಆಯೋಗ, ನ್ಯಾಯಾಂಗ ಹೀಗೆ ಸಾಂವಿಧಾನಿಕವಾಗಿ ಇರುವ ಯಾವುದರ ಮೇಲೂ ನಂಬಿಕೆಯೇ ಇಲ್ಲ. ಅನುಕೂಲ ಸಿಂಧುಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನೂ ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ. ಹಾಗಾಗಿ ಪ್ರಧಾನಿ ಮೋದಿ ಸಿಜೆ ಅವರ ಮನೆಯಲ್ಲಿ ಗಣಪತಿ ಪೂಜೆ ಮಾಡಿದ್ದಕ್ಕೆ ವಿರೋಧ ಮಾಡುತ್ತಿದೆ ಎಂದು ಟೀಕಿಸಿದರು. ಹಿಂದೆ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು ಸಿಜೆಯವರ ಇಫ್ತೀಯಾರ್ ಕೂಟದಲ್ಲಿ ಭಾಗವಹಿಸಿದ್ದರಲ್ಲ. ಆಗೇಕೆ ಆಕ್ಷೇಪಿಸಲಿಲ್ಲ? ಎಂದು ಪ್ರಶ್ನಿಸಿದರು. ಇಲ್ಲಿ ಪ್ರಧಾನಿ ಮೋದಿ ಅವರು ಸಿಜೆ ಮನೆಗೆ ಹೋಗಿದ್ದಕ್ಕಲ್ಲ ವಿರೋಧ. ಗಣಪತಿ ಪೂಜೆ ಮಾಡಿದ್ದಕ್ಕೆ ಅವರ ವಿರೋಧ. ಹೀಗೆ ಯಾವತ್ತೂ ಹಿಂದೂ ವಿರೋಧಿಯಾಗೆ ವರ್ತಿಸುತ್ತಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಪ್ರಲ್ಹಾದ ಜೋಶಿ ಕಿಡಿ ಕಾರಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version