ಹುಬ್ಬಳ್ಳಿ: ಆಗಿಂದಾಗ್ಗೆ ಹೇಳಿಕೆಗಳನ್ನು ನೀಡುತ್ತ ಸರ್ಕಾರ ಹಾಗೂ ನಾಯಕರಿಗೆ ಮುಜುಗರ ಉಂಟುಮಾಡುವ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕ ಅಲ್ಲ ಎಂದು ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಹುಬ್ಬಳ್ಳಿಗೆ ಭೇಟಿ ನೀಡಿರುವ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಪಸಂಖ್ಯಾತರ ಮೀಸಲಾತಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಬೇಕು ಎಂಬ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ.
ಯತ್ನಾಳ್ ಬಿಜೆಪಿ ಕೋರ್ ಕಮಿಟಿಯಲ್ಲಿ ಇಲ್ಲ, ಅವರ ಹೇಳಿಕೆ ಪಕ್ಷದ ಹೇಳಿಕೆಯಲ್ಲ. ನಾವು ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿ ಉತ್ತರ ಪಡೆದಿದ್ದೇವೆ. ಯತ್ನಾಳ್ ಸ್ವಭಾವವೇ ಹಾಗಿದೆ, ಏನೂ ಮಾಡಲು ಆಗುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಪಸಂಖ್ಯಾತ ಮೀಸಲಾತಿ ಬಗ್ಗೆ ಅರವಿಂದ ಬೆಲ್ಲದ್ ಮತ್ತು ಯತ್ನಾಳ್ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಪಕ್ಷ ಸೈಡ್‌ಲೈನ್ ಮಾಡಿಲ್ಲ, ಅವರು ಕೋರ್ ಕಮಿಟಿಯಲ್ಲಿದ್ದಾರೆ, ಅವರಿಗೂ ಟಿಕೆಟ್ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಎಸ್‌ಸಿಎಸ್‌ಟಿ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡುವಂತಹದ್ದು ಏನು ಮಾಡಿದ್ದಾರೆ ಕಾಂಗ್ರೆಸ್‌ನವರು ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಉತ್ತರ ಕೊಡಲಿ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಏನು ಮಾಡಿದ್ದಾರೆ?
ಕಾಂಗ್ರೆಸ್ ಪಕ್ಷ ಎಸ್‌ಸಿಎಸ್‌ಟಿ ಸಮಾಜವನ್ನು ಭ್ರಮೆಯಲ್ಲಿಟ್ಟಿದೆ. ಕಾಂಗ್ರೆಸ್‌ನವರು ಎಸ್‌ಸಿಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಯಾವುದೇ ಕೆಲಸವನ್ನು ಮಾಡಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಎಸ್‌ಸಿಎಸ್‌ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿ ನೈಜ ಕಾಳಜಿ ಪ್ರದರ್ಶಿಸಿದೆ ಎಂದಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ಹಗರಣಗಳಾಗಿವೆ ಎಂದಿರುವ ಅರುಣ್ ಸಿಂಗ್, ಕಾಂಗ್ರೆಸ್‌ನ ಪಾದಯಾತ್ರೆ ಕೇವಲ ಡಿಕೆಶಿ ಮತ್ತು ಸಿದ್ದರಾಮಯ್ಯನವರನ್ನು ಜೋಡಿಸುವ ಯಾತ್ರೆಯಾಗಿದೆ. ರಾಹುಲ್ ಗಾಂಧಿ ಇಬ್ಬರನ್ನೂ ಬಲವಂತವಾಗಿ ಕೂಡಿಸಲು ಹೊರಟಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಪರಸ್ಪರ ಐದು ನಿಮಿಷ ಕಣ್ಣಲ್ಲಿ ಕಣ್ಣಿಟ್ಟು ಮತನಾಡುವುದಿಲ್ಲ. ಪರಸ್ಪರ ಕಚ್ಚಾಟ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಯಾತ್ರೆ ಪ್ಲಾಪ್ ಆಗಿದೆ ಎಂದರು.
ರಾಜ್ಯದ ವಿವಿಧೆಡೆ ಬಿಜೆಪಿ ನಡೆಸುತ್ತಿರುವ ಜನಸಂಕಲ್ಪ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಘ್, ಸಂಪೂರ್ಣ ಶಕ್ತಿಯೊಂದಿಗೆ ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ. ರಾಜ್ಯದಲ್ಲಿ 150 ಸೀಟುಗಳೊಂದಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ದೇಶದ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಕಚ್ಚಾಡುವ ಸರ್ಕಾರ ನಡೆಸುತ್ತಿದೆ. ದೇಶದಲ್ಲಿ ಬಿಜೆಪಿಯಿಂದ ಪುನಃ ಸರ್ಕಾರ ರಚಿಸುವ ಟ್ರೆಂಡ್ ನಡೆಯುತ್ತಿದೆ ಎಂದರು.
ಮೂರು ಸಾವಿರ ಮಠಕ್ಕೆ ಭೇಟಿ
ಹುಬ್ಬಳ್ಳಿಯ ಪ್ರಸಿದ್ಧ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ ಅರುಣ್ ಸಿಂಗ್, ಕರ್ತೃ ಗದ್ದುಗೆ ದರ್ಶನ ಪಡೆದರು. ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳ ಆಶಿರ್ವಾದ ಪಡೆದ ಅರುಣ್ ಸಿಂಗ್, ಸ್ವಾಮೀಜಿಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿದರು. ಮೋದಿ ಮೇಲೆ ಜನರಿಗೆ ನಂಬಿಕೆ ಇದೆ. ನಮ್ಮ ದೇಶ ಆಧ್ಯಾತ್ಮಿಕವಾಗಿ ಒಂದಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದರು. ಸ್ವಾಮೀಜಿಗಳು, ಸಂತರ ಆಶೀರ್ವಾದದಿಂದ ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮಗೆ ಬಹಳ ಖುಷಿಯಿದೆ ಎಂದು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ | ಶಾಸಕ ಯತ್ನಾಳ್ ವಿಜಯಪುರದ ಹುಲಿ ಎಂದ ಸಿಎಂ; ದ್ರಾಕ್ಷಿ ಮಾರುಕಟ್ಟೆ ಅಭಿವೃದ್ಧಿಗೆ ₹100 ಕೋಟಿ ಕೊಡಲೂ ಬದ್ಧ