ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. 18 ಷರತ್ತುಗಳನ್ನು ವಿಧಿಸಿ ಗಣೇಶ ಪ್ರತಿಷ್ಠಾಪನೆಗೆ (Ganesh Chaturthi) ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ಅನುಮತಿ ನೀಡಿದ್ದಾರೆ. ಹೈಕೋರ್ಟ್ ಹಸಿರು ನಿಶಾನೆ ತೋರಿದರೂ ಪಾಲಿಕೆ ಅನುಮತಿ ನೀಡದ ಕಾರಣ ಬಿಜೆಪಿಯು ಪ್ರತಿಭಟನೆ ನಡೆಸುತ್ತಿತ್ತು. ಇದೀಗ ಪಾಲಿಕೆಯಿಂದ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೋರಾಟ ಕೈಬಿಟ್ಟಿದ್ದಾರೆ.
ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಪಾಲಿಕೆ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಶಾಸಕ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಜತೆ ಚರ್ಚೆ ನಡೆಸಿದ ಬಳಿಕ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಾಗಿ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರಕಟಿಸಿದರು. ಆಯುಕ್ತರ ಆದೇಶ ಪತ್ರ ಪಡೆದ ನಂತರ ಬಿಜೆಪಿ ಮುಖಂಡರು ಪ್ರತಿಭಟನೆ ಕೈಬಿಟ್ಟರು.
ಈದ್ಗಾ ಮೈದಾನದಲ್ಲಿ ಸೆಪ್ಟೆಂಬರ್ 19 ರಂದು ಬೆಳಗ್ಗೆ 6 ಗಂಟೆಯಿಂದ 21 ರಂದು ಮಧ್ಯಾಹ್ನ 12 ಗಂಟೆಯವರೆಗೆ ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಸಮಿತಿಗೆ ಗಣೇಶ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ | Top 10 Ganesh Temple In India: ಒಮ್ಮೆ ನೋಡಲೇಬೇಕಾದ ದೇಶದ ಪ್ರಸಿದ್ಧ ಗಣೇಶ ಮಂದಿರಗಳಿವು
ಪಾಲಿಕೆ ಷರತ್ತುಗಳೇನು?
- ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಪೊಲೀಸ್ ಆಯುಕ್ತರಿಂದ ಎನ್ಒಸಿ ಪಡೆಯಬೇಕು
- ಸೆಪ್ಟೆಂಬರ್ 19 ರಂದು ಬೆಳಗ್ಗೆ 6 ಗಂಟೆಯಿಂದ 21 ರಂದು ಮಧ್ಯಾಹ್ನ 12 ಗಂಟೆಯವರೆಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ
- ಮೈದಾನದಲ್ಲಿ 30X30 ಅಳತೆಯ ಪೆಂಡಾಲ್ ಹಾಕಲು ಮಾತ್ರ ಅವಕಾಶ
- ಯಾವುದೇ ಬಾವುಟ, ಭಿತ್ತಿಪತ್ರ, ವಿವಾದಿತ ಪೋಟೋ ಪ್ರದರ್ಶನ ನಿಷೇಧ
- ಮನರಂಜನಾ ಕಾರ್ಯಕ್ರಮಗಳಿಗೂ ನಿಷೇಧ.
- ಅನವಶ್ಯಕ ಗಲಭೆ, ಗಲಾಟೆಗಳಿಗೆ ಆಯೋಜಕರೆ ಹೊಣೆ.
- ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ
ವಿಜೃಂಭಣೆಯಿಂದ ಗಣೇಶ ಉತ್ಸವ: ಶಾಸಕ ಮಹೇಶ್ ಟೆಂಗಿನಕಾಯಿ
ಪಾಲಿಕೆ ಆದೇಶದ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹಿಂಬಾಗಿಲಿನಿಂದ ಅಂಜುಮನ್ ಸಂಸ್ಥೆ ಮೂಲಕ ಗಣೇಶ್ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಕೊನೆ ಕ್ಷಣದಲ್ಲಿಯಾದರೂ ಸರ್ಕಾರ ಎಚ್ಚೆತ್ತುಕೊಂಡು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಮುಂದೆ ಕೂಡ ಹಿಂದು ಹಬ್ಬಗಳ ಆಚರಣೆಗೆ ಅಡೆತಡೆಗಳನ್ನು ಒಡ್ಡಬಾರದು. ನ್ಯಾಯಾಲಯ ಅತ್ಯುತ್ತಮ ತೀರ್ಪು ಕೊಟ್ಟಿದೆ, ನಮಗೆ ದೊಡ್ಡ ಜಯ ಸಿಕ್ಕಿದೆ. ಈದ್ಗಾ ಮೈದಾನದಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Hubballi Idgah Maidan) ಮುಂದಿನ ಐದು ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಮಹಾನಗರಪಾಲಿಕೆಯಲ್ಲಿ ಠರಾವು (City Muncipality resolution) ಮಾಡಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ (Anjuman Islam Institute) ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ನ (Karnataka High Court) ಧಾರವಾಡ ಪೀಠ ತಿರಸ್ಕರಿಸಿದೆ. ಈ ಠರಾವಿಗೆ ತಡೆಯಾಜ್ಞೆ ನೀಡಬೇಕು ಎಂದು ಅಂಜುಮಾನ್ ಇಸ್ಲಾಂ ಮನವಿಯನ್ನು ತಳ್ಳಿ ಹಾಕಿದೆ (High court dismisses Anujuman plea).
ಇದನ್ನೂ ಓದಿ | Ganesh Chaturthi: ರಾಜ್ಯಾದ್ಯಂತ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ
ಹುಬ್ಬಳ್ಳಿಯ ಪ್ರತಿಷ್ಠಿತ ರಾಣಿ ಕಿತ್ತೂರು ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿ ಮಹಾನಗರ ಪಾಲಿಕೆ ಠರಾವನ್ನು ತೆಗೆದುಕೊಂಡಿತ್ತು. ಮುಂದಿನ ಐದು ವರ್ಷಗಳ ಕಾಲ ಇಲ್ಲಿ ಗಣೇಶೋತ್ಸವ ನಡೆಸಲು ಈ ಠರಾವು ಅವಕಾಶ ನೀಡುತ್ತಿತ್ತು. ಆದರೆ, ಅಂಜುಮನ್ ಇಸ್ಲಾಂ ಸಂಸ್ಥೆ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು. ವಿಚಾರಣೆ ನಡೆಸಿದ ನ್ಯಾ. ಸಚಿನ ಮಗದುಮ್ಮ ಅವರಿದ್ದ ಏಕಸದಸ್ಯ ಪೀಠವು ಮೇಲ್ಮನವಿ ಅರ್ಜಿ ತಿರಸ್ಕರಿಸಿ ತೀರ್ಪು ನೀಡಿದೆ.