Site icon Vistara News

Hubli Ganesha | ಗುಂಪಿನಲ್ಲಿ ಹೀರೋ ಆಗಬೇಡಿ, ಕಾನೂನು ಪಾಲಿಸಿ ಹೀರೋ ಆಗಿ; ಪೊಲೀಸ್‌ ಅಧಿಕಾರಿ ವಿಡಿಯೊ ವೈರಲ್‌

hubli ganesh

ಹುಬ್ಬಳ್ಳಿ: ಇಲ್ಲಿನ ಬಿಡನಾಳದ ಅಂಚಟಗೇರಿ ಫ್ಲ್ಯಾಟ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ (Hubli Ganesha) ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಶಿವರಾಜ್ ಸಜ್ಜನರ್ ಹಾಗೂ ಪಾಲಿಕೆ ಸದಸ್ಯ ನಿರಂಜನ‌ ಹಿರೇಮಠ ಮಧ್ಯೆ ವಾಗ್ವಾದ ನಡೆದಿದೆ. ಮೆರವಣಿಗೆಯಲ್ಲಿ ಡಿಜೆ ಹಾಕುವ ವಿಚಾರವಾಗಿ ಈ ಇಬ್ಬರ ನಡುವೆ ನಡೆದ ಜಟಾಪಟಿಯ ವಿಡಿಯೊ ವೈರಲ್ ಆಗಿದೆ.

ರಾತ್ರಿ ಹತ್ತು ಗಂಟೆಯ ನಂತರವೂ ಸ್ಥಳೀಯರು ಡಿಜೆ ಹಾಕಿಕೊಂಡು ಮೆರವಣಿಗೆ ಹೊರಟಿದ್ದರು. ಈ ವೇಳೆ ಕಾನೂನು ಉಲ್ಲಂಘನೆ ಮಾಡದಂತೆ ತಡೆದ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಾರೆ. ಇದರಿಂದ ಕೆರಳಿದ ಯುವಕರು ಪಾಲಿಕೆ ಸದಸ್ಯರೊಬ್ಬರನ್ನು ಕರೆಸಿ ಪೊಲೀಸರ ಜತೆಗೆ ಮಾತನಾಡಲು ತಿಳಿಸಿದ್ದಾರೆ.

ಪೊಲೀಸರ ನಡೆಯನ್ನು ಖಂಡಿಸಿದ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ, ಡಿಜೆ ಹಾಕಿಕೊಂಡು ಮೆರವಣಿಗೆ ಮಾಡಲು ಅವಕಾಶ ಕೊಡುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಠಾಣೆಯ ಎದುರೇ ಗಣೇಶನನ್ನು ಬಿಟ್ಟು ಹೋಗುವುದಾಗಿ ಆವಾಜ್ ಹಾಕಿದ್ದಾರೆ.

ಇದರಿಂದ ಸಿಟ್ಟಾದ ಪೊಲೀಸ್ ಅಧಿಕಾರಿ ಸಜ್ಜನರ್, “ಗುಂಪಿನಲ್ಲಿ ಬಂದು ಹೀರೋ ಆಗಬೇಡಿ, ಕಾನೂನು ಪಾಲಿಸಿ ಹೀರೋ ಆಗಿ” ಪಾಲಿಕೆ ಸದಸ್ಯ‌ ನಿರಂಜನ್ ಹಿರೇಮಠ ಅವರಿಗೆ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಡಿಜೆ ಹಾಕಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಶಾಂತಿ ಸಭೆಯಲ್ಲಿ ನೀಡಿದ್ದ ಎಚ್ಚರಿಕೆಯನ್ನು ಪುನರುಚ್ಛರಿಸಿದ್ದಾರೆ. ಪೊಲೀಸರ ಮುಂದೆ ನಿಮ್ಮ ದರ್ಪ ತೋರುವುದು ಬೇಡ. ಕಾನೂನು ಪಾಲನೆ ಎಲ್ಲರ ಹೊಣೆ ಎಂದು ಖಡಕ್‌ ಸೂಚನೆ ನೀಡಿ ಯುವಕರನ್ನು ಮರಳಿ ಕಳಿಸಿದ್ದಾರೆ.

ಇದನ್ನೂ ಓದಿ | ಗಣೇಶೋತ್ಸವ ಭದ್ರತೆಗೆ ಹೋಗಿದ್ದ ಪೊಲೀಸರು ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದು ನಿಜ, ಸಿಕ್ಕಿತು ಮೃತದೇಹ

Exit mobile version