ಹುಬ್ಬಳ್ಳಿ : ಆರತಕ್ಷತೆಗೆ ಸಿದ್ದವಾಗುತ್ತಿದ್ದ ಯುವತಿಯನ್ನು ಅಪಹರಿಸಿದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೌಡಿ ಕಾರ್ಪೊರೇಟರ್ ವಿರುದ್ಧ ಅಪಹರಣ ಪ್ರಕರಣ ದಾಖಲು ಮಾಡಲಾಗಿದೆ.
ಸಹನಾ ಎಂಬ ಯುವತಿ ಎರಡು ತಿಂಗಳ ಹಿಂದೆ ಮನೆಯವರ ವಿರೋಧ ಲೆಕ್ಕಿಸದೆ ನಿಖಿಲ್ ದಾಂಡೇಲಿ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ನಾಳೆ (ಭಾನುವಾರ) ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ನಿಖಿಲ್ ಕುಟುಂಬಸ್ಥರು ಹಮ್ಮಿಕೊಂಡಿದ್ದರು.
ಇದನ್ನು ಓದಿ| ಜಮೀನು ಮಾರಾಟ ವಿಚಾರಕ್ಕೆ ಉದ್ಯಮಿಯ ಕಿಡ್ನಾಪ್
ಈ ನಡುವೆಯೇ ಯುವತಿ ಪೋಷಕರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಹೋಗಿದ್ದಳು. ಈ ವೇಳೆ ನಗರದ ಅಕ್ಷಯ್ ಪಾರ್ಕ್ ಬಳಿ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ನಿಖಿಲ್ ದಾಂಡೇಲಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಕಾರ್ಪೊರೇಟರ್ ಚೇತನ ಹಿರೇಕೆರೂರು ಹಾಗೂ ಯುವತಿಯ ತಂದೆ ಶಿವು ಹಿರೇಕೆರೂರು ಕುಟುಂಬಸ್ಥರ ವಿರುದ್ಧ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಪೊರೇಟರ್ ಚೇತನ ಹಿರೇಕೆರೂರು ಸೇರಿ ಮೂವರ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ಕಾರ್ಪೊರೇಟರ್ ಚೇತನ ಹಿರೇಕೆರೂರು ರೌಡಿ ಹಿನ್ನೆಲೆ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.