Site icon Vistara News

R Dhruvanarayana: ಅಂತಿಮ ದರ್ಶನಕ್ಕೆ ಜನಸಾಗರ; ನಾಳೆ ಮಧ್ಯಾಹ್ನ 2 ಗಂಟೆಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

Huge crowds for the last tributes Funeral to be held tomorrow march 12 at 2 pm in R Dhruvanarayana hometown

ಚಾಮರಾಜನಗರ/ಮೈಸೂರು: ತೀವ್ರ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ (R Dhruvanarayana) ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ಹುಟ್ಟೂರಾದ ಹೆಗ್ಗವಾಡಿಯಲ್ಲಿ ನೆರವೇರಲಿದೆ. ಶನಿವಾರ (ಮಾ. 11) ಸಂಜೆ 4 ಗಂಟೆವರೆಗೆ ಮೈಸೂರಿನ ವಿಜಯನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಧ್ರುವನಾರಾಯಣ ಅವರು ಪತ್ನಿ ವೀಣಾ, ಪುತ್ರರಾದ ದರ್ಶನ್, ಧೀರನ್ ಅವರನ್ನು ಅಗಲಿದ್ದಾರೆ. ವಿಜಯನಗರ ಮನೆಯಲ್ಲಿ ಧ್ರುವ ನಾರಾಯಣ ಕುಟುಂಬಸ್ಥರು ಪೂಜೆ ಪೂರೈಸಿದ ಬಳಿಕ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಸದ್ಯ ಧ್ರುವ ನಾರಾಯಣ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದೆ. ಅವರ ವಿಜಯನಗರ ನಿವಾಸಕ್ಕೆ ಅಂತಿಮ ದರ್ಶನಕ್ಕಾಗಿ ಈಗಾಗಲೇ ಸಾಗರೋಪಾದಿಯಲ್ಲಿ ಜನ ಸೇರಿದ್ದಾರೆ. ಮತ್ತಷ್ಟು ಜನ ಸೇರುತ್ತಿದ್ದಾರೆ. ಈ ವೇಳೆ ನಿವಾಸದ ಬಳಿ ಜನರ ನೂಕುನುಗ್ಗಲು ಉಂಟಾಗಿದೆ. ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಅಭಿಮಾನಿಗಳು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧಿಕ್ಕಾರವನ್ನೂ ಕೂಗಲಾಗಿದೆ. ಜನದಟ್ಟಣೆ ತಡೆಯಲು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹಾಗೂ ಪೊಲೀಸರು ಹೆಣಗಾಡುತ್ತಿದ್ದಾರೆ.

ಇದನ್ನೂ ಓದಿ: R Dhruvanarayana : ಯಾರನ್ನೂ ನೋಯಿಸದ ನಾಯಕ ಇಲ್ಲ ಅಂದರೆ ನಂಬೋದು ಹೇಗೆ? ; ಕಣ್ಣೀರಿಟ್ಟ ಡಿಕೆಶಿ

ಮೈಸೂರಿನ ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಧ್ರುವನಾರಾಯಣ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಯವರೆಗೆ ಸಾರ್ವಜನಿಕರು ವೀಕ್ಷಣೆ ಮಾಡಬಹುದು ಎಂದು ಮೈಸೂರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್ ಹಾಗೂ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ ತಿಳಿಸಿದ್ದಾರೆ.

ರೋಧಿಸುತ್ತಿರುವ ಧ್ರುವನಾರಾಯಣ ಅವರ ಕುಟುಂಬಸ್ಥರು

ಸ್ವಗ್ರಾಮಕ್ಕೆ ಪಾರ್ಥಿವ ಶರೀರ

ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ಅಲ್ಲಿಂದ ಧ್ರುವನಾರಾಯಣ ಅವರ ಹುಟ್ಟೂರು ಹೆಗ್ಗವಾಡಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಈ ವೇಳೆ ನಂಜನಗೂಡಿನ ಹುಲ್ಲಹಳ್ಳಿ ಸರ್ಕಲ್‌ನಿಂದ ಆರ್‌ಪಿ ರಸ್ತೆವರೆಗೆ ಮೆರವಣಿಗೆ ನಡೆಸಿ, ಬಳಿಕ ಚಾಮರಾಜನಗರ ಕಾಂಗ್ರೆಸ್ ಕಚೇರಿ ಮುಂದೆ ಸಾರ್ವಜನಿಕ ದರ್ಶನಕ್ಕೆ ಅವಕಾಶ‌ ಕಲ್ಪಿಸಲಾಗುವುದು. ಅಲ್ಲಿಂದ ಹೆಗ್ಗವಾಡಿಗೆ ಸ್ಥಳಾಂತರ ಮಾಡಲಾಗುವುದು. ಹೆಗ್ಗವಾಡಿಯಲ್ಲಿ ಶನಿವಾರ ರಾತ್ರಿಯಿಡೀ ಹಾಗೂ ಭಾನುವಾರ ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ಹೆಗ್ಗವಾಡಿ ಗ್ರಾಮದ ಜಮೀನಿನಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುವುದು. ಧ್ರುವನಾರಾಯಣ ತಂದೆ-ತಾಯಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರವನ್ನು ನೆರವೇರಿಸುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಹೆಗ್ಗವಾಡಿ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂತ್ಯಕ್ರಿಯೆ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಹೆಗ್ಗವಾಡಿ ಸರ್ಕಾರಿ ಶಾಲೆಗೆ ರಜೆ ಘೋಷಣೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ಸ್ವಗ್ರಾಮದ ಸರ್ಕಾರಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಗ್ರಾಮಸ್ಥರ ಕೋರಿಕೆಯ ಮೇರೆಗೆ ಮುಖ್ಯ ಶಿಕ್ಷಕರು ರಜೆ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: R. Dhruvanarayana : ನನ್ನ ಮಾರ್ಗದರ್ಶಕ, ಸ್ನೇಹಿತ, ಹಿತೈಷಿಯಾಗಿದ್ದ ಧ್ರುವ ನಾರಾಯಣ; ಹರಿಪ್ರಕಾಶ್‌ ಕೋಣೆಮನೆ ಕಂಬನಿ

ಪೂಜಾ ವಿಧಿವಿಧಾನ ನೆರವೇರಿಸಿದ ಕುಟುಂಬಸ್ಥರು

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಹಿರಿಯ ಸಜ್ಜನ ರಾಜಕಾರಣಿಯಾಗಿರುವ ಧ್ರುವನಾರಾಯಣ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Exit mobile version