ಚಾಮರಾಜನಗರ: ವರುಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಭೇಟಿ ನೀಡಿದ ಬಗ್ಗೆ ನನಗೆ ಗೊತ್ತಿಲ್ಲ. ಸಂತೋಷ್ ಅವರು ನಮ್ಮ ರಾಷ್ಟ್ರೀಯ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ ಎಂದು ಸಚಿವ, ಚಾಮರಾಜನಗರ ಹಾಗೂ ವರುಣ ವಿಧಾನಸಭಾ (Karnataka Election 2023) ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹೇಳಿದರು.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತೋಷ್ ಅವರು ನನಗೆ ಸಿಕ್ಕಿಲ್ಲ, ನಾವು ಮಾತನಾಡಿಯೂ ಇಲ್ಲ. ಸಾಧ್ಯವಾದರೆ ದೂರವಾಣಿ ಮೂಲಕ ಇಂದು ಅವರ ಜತೆಗೆ ಮಾತನಾಡುತ್ತೇನೆ. ನನಗೆ ಜಾತಿ ರಾಜಕಾರಣ ಗೊತ್ತಿಲ್ಲ. ಜಾತಿ ಸಮೀಕರಣ, ವಿಶ್ಲೇಷಣೆ ನನಗೆ ಗೊತ್ತಿಲ್ಲ. ಆ ರೀತಿಯ ಚಿಲ್ಲರೆ ಬುದ್ಧಿ ನನಗಿಲ್ಲ. ಎಲ್ಲ ವರ್ಗದವರ ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಡಿಕೆಶಿ ಹಗಲು ಕನಸು ಕಾಣುತ್ತಿದ್ದಾರೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಬಿಜೆಪಿಯ ಲಿಂಗಾಯತ ಡ್ಯಾಂ ಒಡೆದಿದೆ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸೋಮಣ್ಣ, ಡಿ.ಕೆ. ಶಿವಕುಮಾರ್ ಅವರು ಲಿಂಗಾಯತ ಸಮುದಾಯದ ಪರ ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿ ವೀರಶೈವ, ಲಿಂಗಾಯತರನ್ನು, ಅನ್ಯ ಪಕ್ಷದವರನ್ನು ಒಂದೇ ರೀತಿ ಕಾಣುತ್ತಿದೆ. ಇತಿಹಾಸ ಏನು ಎಂದು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತರು ಕಾಂಗ್ರೆಸ್‌ನಲ್ಲೂ ಇಲ್ವಾ? ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಜತೆಯಲ್ಲಿ ನಿಂತಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಿಗೆ ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ಒಳಮೀಸಲಾತಿ ಆಯ್ತು, ಲಿಂಗಾಯತರನ್ನು ಡಿವೈಡ್ ಮಾಡಲು ನೋಡಿದಿರಿ, ಅದೂ ಹೋಯ್ತು. ನೀವು ಯಾವುದರಲ್ಲಿ ಸಕ್ಸಸ್ ಆಗಿದ್ದೀರ? 125 ವರ್ಷ ಇತಿಹಾಸವಿರುವ ರಾಷ್ಟ್ರೀಯ ಪಕ್ಷದಲ್ಲಿದ್ದುಕೊಂಡು ಈ ರೀತಿಯ ಹೇಳಿಕೆಯನ್ನು ಏಕೆ ನೀಡುತ್ತೀರಿ?
ವರುಣದಲ್ಲಿ ಹೆದರಿ ಸಿದ್ದರಾಮಯ್ಯ ಪ್ರಚಾರಕ್ಕೆ ಹೆಚ್ಚು ದಿನ ಬರುತ್ತಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಕರ್ತವ್ಯವಾಗಿದ್ದು, ಅದನ್ನು ಅವರು ಮಾಡುತ್ತಿದ್ದಾರೆ. ನಾನು ಭೂತವೂ ಅಲ್ಲ, ಪಿಶಾಚಿಯೂ ಅಲ್ಲ. ನಾನೊಬ್ಬ ಮನುಷ್ಯನಾಗಿದ್ದೇನೆ. ಸಿದ್ದರಾಮಯ್ಯ ನಾನು ಜತೆಯಲ್ಲಿ ಕೆಲಸ ಮಾಡಿದವರು. ಅವರು ನನಗಿಂತ ದೊಡ್ಡ ನಾಯಕರು. ಅವರು ಪ್ರಚಾರಕ್ಕೆ ಎಷ್ಟು ಬಾರಿ ಬೇಕಾದರೂ ಬರುತ್ತಾರೆ. ಅದನ್ನು ನಾನ್ಯಾಕೆ ಪ್ರಶ್ನೆ ಮಾಡಲಿ? ಅವರು ಬರುವುದರಿಂದ ಮತದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದರು.
ಬೇರೆ ಕ್ಷೇತ್ರಗಳನ್ನು ಕಡೆಗಣಿಸಿ ಸಂಸದ ಪ್ರತಾಪ ಸಿಂಹ ಅವರು ವರುಣಾದಲ್ಲಿ ಹೆಚ್ಚು ಪ್ರಚಾರ ನಡೆಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಪ್ರತಾಪ ಸಿಂಹ ಅವರಿಗೆ ಎಲ್ಲಿಗೆ ಆದ್ಯತೆ ನೀಡಬೇಕು ಎಂದು ಗೊತ್ತಿದೆ. ನಾನು ಚಾಮರಾಜನಗರದಲ್ಲಿದ್ದೇನೆ. ಅವರು ವರುಣಾದಲ್ಲಿದ್ದಾರೆ. ಪ್ರತಾಪ್ ಸಿಂಹ ಒಬ್ಬ ಶಿಸ್ತಿನ ಸಿಪಾಯಿ, ಭವಿಷ್ಯದ ನಾಯಕರಾಗಿದ್ದಾರೆ. ಪ್ರತಾಪ್ ಸಿಂಹನ ದೂರದೃಷ್ಟಿ ಬೇರೆಯವರಿಗೂ ಬಂದರೆ ಹೈಕ್ಲಾಸ್ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Elections : ಶಿಕಾರಿಪುರದಲ್ಲಿ ಫಿಕ್ಸಿಂಗ್ ಇಲ್ಲ, ಬಿಎಸ್‌ವೈ ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದ ವಿಜಯೇಂದ್ರ
ಸಿಎಂ ಆಗುವ ಬಗ್ಗೆ ನಾನು ಭ್ರಮೆ ಇಟ್ಟುಕೊಂಡಿಲ್ಲ
ಬಿಜೆಪಿಯಿಂದ ಲಿಂಗಾಯತ ಸಿಎಂ ಅಸ್ತ್ರ ಬಳಕೆ ಮಾಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವರ್ಷದ ಹಿಂದೆಯೇ ಗೃಹ ಸಚಿವ ಅಮಿತ್ ಷಾ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಎಂದು ಹೇಳಿದ್ದಾರೆ. ಇದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಸಿಎಂ ಆಗುವ ಬಗ್ಗೆ ನಾನು ಭ್ರಮೆ ಇಟ್ಟುಕೊಂಡಿಲ್ಲ. ಇನ್ನು ಇಪ್ಪತ್ತು ದಿನ ಕಾಯಿರಿ, ಎಲ್ಲ ಸರಿಹೋಗತ್ತೆ. ತಾಯಿ ಚಾಮುಂಡಿ ಏನು ಹೇಳ್ತಾಳೋ ಅದನ್ನು ಕೇಳ್ತೀನಿ ಎಂದು ಹೇಳಿದರು.