Site icon Vistara News

ಗಣೇಶ ಕೂರಿಸಲು ಬಿಡಲ್ಲ ಅಂದರೆ, ನಮಾಜ್‌ ಮಾಡಲು ಬಿಡಬೇಕಾ ಅನ್ನೋ ಪ್ರಶ್ನೆ ಬರುತ್ತೆ ಅಂದ ಸಿ.ಟಿ ರವಿ

chamarajpet maidan

ಬೆಂಗಳೂರು: ಚಾಮರಾಜ ಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ ಜಾಗ. ಕಂದಾಯ ಇಲಾಖೆಯ ಅಧಿಕಾರಿಗಳು ನಿರ್ಣಯ ತೆಗೆದುಕೊಳ್ಳಬೇಕು. ಗಣೇಶೋತ್ಸವವನ್ನು ಆಚರಿಸಲು ಅವಕಾಶ ನೀಡಬೇಕು ಎಂದರು. ನನ್ನ ಪ್ರಕಾರ ಇಲ್ಲಿ ಗಣೇಶ ಮೂರ್ತಿ ಕೂರಿಸಿ ಪೂಜೆ ಮಾಡಬೇಕು. ಗಣೇಶೋತ್ಸವ ಸಮಿತಿಗಳು ನೀಡುವ ಮನವಿಯನ್ನು ಸರಕಾರ ಪುರಸ್ಕರಿಸಬೇಕು ಎಂದರು.

ʻʻಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂರಿಸಲು ಬಿಡಲ್ಲ ಅಂತ ಯಾರಾದರೂ ಹೇಳಿದರೆ ಒಂದು ಪ್ರಶ್ನೆ ಬರುತ್ತದೆ. ನೀವು ನಮಾಜ್ ಮಾಡಲು ನಾವು ಬಿಡೋದಿಲ್ಲ ಅನ್ನುವ ವಿಚಾರ ಬರುತ್ತದೆ. ನಮಾಜ್ ಮಾಡೋಕೆ ಬಿಡುತ್ತೀರಿ ಅಂದ ಮೇಲೆ ಗಣಪತಿ ಇಡಲೂ ಅವಕಾಶ ನೀಡಬೇಕುʼʼ ಎಂದು ಹೇಳಿದ ಸಿ.ಟಿ. ರವಿ, ಗಣಪತಿ ಕೂರಿಸಿದ್ರೆ ಜಾತಿ ಕೆಡುತ್ತಾ? ಹಾಗೆ ಜಾತಿ ಕೆಡುತ್ತೆ ಅಂತ ಯಾರಾದರೂ ಹೇಳಿದರೆ ಅವರು ಸಂವಿಧಾನ ವ್ಯವಸ್ಥೆ ಒಪ್ಪಿಲ್ಲ ಅನ್ನುವಂತಾಗುತ್ತೆ. ಸಂವಿಧಾನ ಒಪ್ಪುವವರು ಗಣಪತಿ ಕೂರಿಸಲು ಒಪ್ಪಬೇಕುʼʼ ಎಂಬ ವಾದವನ್ನು ಮಂಡಿಸಿದ್ದಾರೆ ಸಿ.ಟಿ. ರವಿ.

ಚಾಮರಾಜ ಪೇಟೆ ಮೈದಾನವನ್ನು ಇದು ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ಘೋಷಿಸಿದ ಮೇಲೆ ಇಲ್ಲಿ ಗಣೇಶೋತ್ಸವ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೂ ಅವಕಾಶ ನೀಡಬೇಕು ಎನ್ನುವ ವಾದ ಜೋರಾಗಿದೆ. ಆಗಸ್ಟ್‌ ೧೫ರಂದು ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಸರಕಾರದ ಮುಂದೆ ಈಗ ಗಣೇಶೋತ್ಸವ ವಿಚಾರ ನಿಂತಿದೆ. ಈ ನಡುವೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎನ್ನುವ ಕೂಗು ಜೋರಾಗಿದೆ. ಬುಧವಾರ ಸ್ಥಳೀಯ ಗಣಪತಿ ಪೂಜನಾ ಸಮಿತಿಗಳು ಮಹಾನಗರ ಪಾಲಿಕೆಯ ಆಯಕ್ತರು ಮತ್ತು ಸಿಎಂ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಉತ್ತರ ನೀಡಲು ಮೂರು ದಿನದ ಗಡುವು ನೀಡಿದ್ದಾರೆ.

ಇದನ್ನೂ ಓದಿ| ಮುಸ್ಲಿಂ ಏರಿಯಾ ಅಂದ್ರೇನು ಅದು ಪಾಕಿಸ್ತಾನವಾ? ಅಲ್ಲಿ ಜಿನ್ನಾ ಫೋಟೊ ಹಾಕ್ಬೇಕಾ?: ಸಿದ್ದುಗೆ ಸಿ.ಟಿ ರವಿ ತರಾಟೆ

Exit mobile version