ಮಂಡ್ಯ: ಮಳವಳ್ಳಿಯಲ್ಲಿ ಟ್ಯೂಷನ್ ಶಿಕ್ಷಕನೊಬ್ಬ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಕೊಲೆ ಮಾಡಿದ ಹೇಯ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕೃತ್ಯದಿಂದ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಅನಧಿಕೃತ ಟ್ಯೂಷನ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಇನ್ನು ಮುಂದೆ ಯಾರೂ ಅನಧಿಕೃತವಾಗಿ ಟ್ಯೂಷನ್ ನೀಡುವಂತಿಲ್ಲ ಎಂದು ಮಂಡ್ಯ ಜಿಲ್ಲೆಯ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಜವರೇಗೌಡ ಅವರು ಆದೇಶ ನೀಡಿದ್ದಾರೆ.
ಸರ್ಕಾರಿ ಶಿಕ್ಷಕರು ಟ್ಯೂಷನ್ ನೀಡುವಂತಿಲ್ಲ
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕರು ಯಾವ ಕಾರಣಕ್ಕೂ ಟ್ಯೂಷನ್ ನೀಡಬಾರದು ಎಂದು ಅವರು ಸೂಚನೆ ನೀಡಿದ್ದು ಯಾರಾದರೂ ಅನಧಿಕೃತವಾಗಿ ಟ್ಯೂಷನ್ ನೀಡುವುದು ಗೊತ್ತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಅನಧಿಕೃತ ಟ್ಯೂಷನ್ ಸೆಂಟರ್‌ಗಳು ನಾಯಿಕೊಡೆಗಳಂತೆ ಎದ್ದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಈ ಆದೇಶ ಮಹತ್ವವವನ್ನು ಪಡೆದುಕೊಂಡಿದೆ. ಮನೆಗಳಲ್ಲೇ ಟ್ಯೂಷನ್ ನೀಡುವುದು, ಒಂಟಿ ಮಕ್ಕಳಿಗೆ, ಕೆಲವೇ ಮಕ್ಕಳಿಗೆ ಮನೆ ಪಾಠ ಮಾಡುವುದು ನೊಂದಾಯಿಸಿಕೊಳ್ಳದೆ ಟ್ಯೂಷನ್ ಕೇಂದ್ರ ತೆರೆಯುವುದು ಮೊದಲಾದವು ಈ ಸೂಚನೆಯಂತೆ ಅನಧಿಕೃತ ಎಂದು ಪರಿಗಣಿಸಲ್ಪಡುತ್ತವೆ.
ಸಾಮಾನ್ಯವಾಗಿ ಮನೆಯ ಆಸುಪಾಸಿನಲ್ಲೇ ಒಳ್ಳೆಯ ಶಿಕ್ಷಣ ಪಡೆದವರ ಬಳಿ ಮಕ್ಕಳನ್ನು ಕಳುಹಿಸಿ ಮನೆ ಪಾಠ ಮಾಡಿಸುವುದು, ಮನೆಯಲ್ಲೇ ಇರುವ ವ್ಯಕ್ತಿಗಳು ಬಿಡುವಿನ ವೇಳೆ ಟ್ಯೂಷನ್ ನೀಡುವುದು ಇವೆಲ್ಲ ಸಾಮಾನ್ಯವಾಗಿದೆ. ಆದರೆ, ಇನ್ನು ಮುಂದೆ ಈ ರೀತಿ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಇಂಥ ಅನಧಿಕೃತ ಕೇಂದ್ರಗಳಲ್ಲಿ ಲೈಂಗಿಕ ಶೋಷಣೆ ನಡೆಯುವ ಸಾಧ್ಯತೆ ಹೆಚ್ಚು ಎನ್ನುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ಮನೆಗೆ ಕರೆಸಿಕೊಂಡು ದೌರ್ಜನ್ಯ ನಡೆಸಿದ್ದ
ಮಳವಳ್ಳಿಯ ಈ ಪುಟ್ಟ ಹುಡುಗಿಯನ್ನು ಟ್ಯೂಷನ್ ಶಿಕ್ಷಕ ಕಾಂತರಾಜು ಟ್ಯೂಷನ್ ಕೊಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಕೃತ್ಯ ನಡೆಸಿದ ಬಳಿಕ ಆಕೆ ಮನೆಯಲ್ಲಿ ಹೇಳಿಬಿಟ್ಟರೆ ಎಂದು ಭಾವಿಸಿದ ಆತ ಆಕೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಪ್ರಜ್ಞೆ ತಪ್ಪಿದ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಮನೆಯ ಪಕ್ಕದಲ್ಲಿದ್ದ ನೀರಿನ ಸಂಪ್‌ನೊಳಕ್ಕೆ ಆಕೆಯ ಶವವನ್ನು ಎಳೆದೊಯ್ದು ಹಾಕಿದ್ದಾನೆ.
ಮಗಳು ಇನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಿದ ಹೆತ್ತವರಿಗೆ ಆಕೆಯ ಶವ ಸಂಪ್‌ನಲ್ಲಿ ಸಿಕ್ಕಿತ್ತು. ಆರೋಪಿಯನ್ನು ಬಂಧಿಸಲಾಗಿದ್ದು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮೃತ ಬಾಲಕಿಗೆ ನ್ಯಾಯ ಒದಗಿಸುವಂತೆ, ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸಾರ್ವಜನಿಕರಿಂದ ಕ್ಯಾಂಡಲ್ ಮೆರವಣಿಗೆ ನಡೆದಿತ್ತು. ಸಾರ್ವಜನಿಕ ಜಾಲತಾಣಗಳಲ್ಲಿಯೂ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಮಳವಳ್ಳಿಗೆ ಎಡಿಜಿಪಿ ಭೇಟಿ
ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆಗಿರುವ ಅಲೋಕ್ ಕುಮಾರ್ ಅವರು ಸೋಮವಾರ ಮಳವಳ್ಳಿಯಲ್ಲಿರುವ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೃತ ಬಾಲಕಿಯು ಹೋಗುತ್ತಿದ್ದ ಟ್ಯೂಷನ್ ಕೇಂದ್ರಕ್ಕೂ ಭೇಟಿ ನೀಡಿ ಮಾಹಿತಿ ಪಡೆದರು. ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಆದಷ್ಟು ಶೀಘ್ರವಾಗಿ ಮತ್ತು ಬಲಿಷ್ಠವಾದ ಚಾರ್ಜ್‌ಶೀಟ್ ಹಾಕಲಾಗುವುದು ಎಂದು ಅವರು ತಿಳಿಸಿದರು.