ಅಭಿಷೇಕ್ ಬಿ.ವಿ., ಬೆಂಗಳೂರು
ಹೃದಯದ ರಕ್ತನಾಳಗಳಲ್ಲಿ ರಕ್ತ ಪರಿಚಲನೆಗೆ ತೊಂದರೆ ಉಂಟು ಮಾಡುವ ತಡೆಗಳಿದ್ದಾಗ, ಹೃದಯಾಘಾತವಾದಾಗ ವೈದ್ಯರು ಆಂಜಿಯೋಪ್ಲಾಸ್ಟಿ ಮೂಲಕ ಸಮಸ್ಯೆಯನ್ನು ಬಗೆಹರಿಸುವುದು ಸಾಮಾನ್ಯ. ಆದರೆ, ವೃದ್ಧರಲ್ಲಿ, ಬೇರೆ ಕಾಯಿಲೆಗಳು ಇದ್ದವರಲ್ಲಿ ಅಂಥ ಪರಿಸ್ಥಿತಿಯಲ್ಲಿ ಆಂಜಿಯೊಪ್ಲಾಸ್ಟಿ ಮಾಡುವುದು ಅಪಾಯಕಾರಿಯಾಗುವ ಸಾಧ್ಯತೆಯೂ ಇರುತ್ತದೆ. ಒಂದೋ ಬಂಧುಗಳ ನೆಮ್ಮದಿಗೆ ಆಂಜಿಯೋಪ್ಲಾಸ್ಟಿ ಮಾಡುವುದು, ಇಲ್ಲವೇ ಈ ಸಮಸ್ಯೆಗೆ ಈ ವಯಸ್ಸಲ್ಲಿ ಪರಿಹಾರವಿಲ್ಲ. ಏನಾಗುತ್ತದೋ ಕಾದು ನೋಡೋಣ ಎಂದು ಹೇಳುವುದೇ ಇದುವರೆಗಿನ ಉತ್ತರವಾಗಿತ್ತು. ಕೆಲವೊಮ್ಮೆ ಒತ್ತಾಯಪೂರ್ವಕವಾಗಿ ಆಂಜಿಯೊಪ್ಲಾಸ್ಟಿ ಮಾಡಿದಾಗ ಪ್ರಾಣವೇ ಹೋದ ಉದಾಹರಣೆಗಳು ಸಾಕಷ್ಟಿವೆ.
ಆದರೆ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಅತ್ಯಂತ ಅಪರೂಪದ, ಅತ್ಯಾಧುನಿಕ ಸಾಧನವನ್ನು ಬಳಸಿ ದೀರ್ಘ ಕಾಲದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯರಲ್ಲೂ ಆಂಜಿಯೋಪ್ಲಾಸ್ಟಿ ನಡೆಸಿ ಜೀವ ಉಳಿಸಿದ್ದಾರೆ, ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಈ ರೀತಿ ಜೀವ ರಕ್ಷಣೆಗೆ ಬಳಸಿದ್ದು.. ಇಂಪೆಲ್ಲಾ ಹಾರ್ಟ್ ಪಂಪ್!
ಈ ಕುರಿತು ಹೃದಯ ತಜ್ಞ ಡಾ. ವಿವೇಕ್ ಜವಳಿ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಈ ಸಾಧನವನ್ನು 81 ಮತ್ತು 85 ವರ್ಷದ ಪುರುಷ, ಹಾಗೂ 71 ವರ್ಷದ ವೃದ್ಧ ಮಹಿಳೆಯರ ಮೇಲೆ ಪ್ರಯೋಗಿಸಿದ್ದು, ಅವರನ್ನು ಬದುಕುಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಈ ಮೂರು ವೃದ್ಧರು ಕೋಮಾರ್ಬಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕೆಲವು ವರ್ಷಗಳ ಹಿಂದೆಯೇ ಹೃದಯ ಸಮಸ್ಯೆಗೆ ಒಳಗಾಗಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿತ್ತು. ಇದಾದ ಬಳಿಕವೂ ಸಹ ಅವರಿಗೆ ಗಂಭೀರ ಹೃದಯಾಘಾತ ಸಂಭವಿಸಿತ್ತು, ಅವರನ್ನು ಉಳಿಸಲು ಮತ್ತೊಮ್ಮೆ ಆಂಜಿಯೋಪ್ಲಾಸ್ಟಿ ಮಾಡುವುದು ಅಸಾಧ್ಯದ ಕೆಲಸ. ಹೀಗಾಗಿ ಇಂಪೆಲ್ಲಾ ಹಾರ್ಟ್ ಪಂಪ್ ಬಳಸಿ ನಾವು ಅವರನ್ನು ರಕ್ಷಿಸಿದೆವು ಎನ್ನುತ್ತಾರೆ ವಿವೇಕ್ ಜವಳಿ.
ಇಂಪೆಲ್ಲಾ ಬಗ್ಗೆ ಡಾ. ವಿವೇಕ್ ಜವಳಿ ಅವರು ವಿವರಿಸಿದ್ದು ಹೀಗೆ..
ನಾವು ಆಂಜಿಯೋಪ್ಲಾಸ್ಟಿಯನ್ನು ೧೯೭೭ರಿಂದ ಮಾಡುತ್ತಿದ್ದೇವೆ. ೧೯೯೦ರ ಅವಧಿಯಿಂದಿ ಸ್ಟಂಟ್ ಬಳಸುತ್ತಿದ್ದೇವೆ. ಈಗ ಬಂದಿರುವುದು ಇಂಪೆಲ್ಲಾ ಹಾರ್ಟ್ ಪಂಪ್. ಮೊದಲು ಕೃತಕ ಹಾರ್ಟ್ ಪಂಪ್ ಬಳಸಲಾಗುತ್ತಿತ್ತು. ಎದೆ ಭಾಗದಲ್ಲಿ ಆಪರೇಟ್ ಮಾಡಿ ಹಾಕಬೇಕಾಗಿತ್ತು. ಇಲ್ಲವೇ ಕಾಲಿನಿಂದ ಹಾಕಬೇಕಾಗಿತ್ತು. ಇದಕ್ಕೆ ಕನಿಷ್ಠ ೩ ಗಂಟೆ ಅವಧಿ ಬೇಕಾಗುತ್ತಿತ್ತು. ಇಂಪೆಲ್ಲಾವನ್ನು ನಾವು ಕೇವಲ ೧೫ ನಿಮಿಷದಲ್ಲಿ ಅಳವಡಿಸಲು ಸಾಧ್ಯವಾಗುತ್ತದೆ. ಕಾಲಿನಿಂದಲೇ ಅಳವಡಿಸಬಹುದು.
ನಿಜವೆಂದರೆ, ಇಂಪೆಲ್ಲಾ ೨೦ ವರ್ಷದಿಂದಲೇ ಇದೆ. ಭಾರತಕ್ಕೆ ಬಂದೇ ಹತ್ತು ವರ್ಷ ಆಗಿದೆ. ಆದರೆ, ಇದು ಅತಿ ಸುಲಭದಲ್ಲಿ ಸಿಗುತ್ತಿಲ್ಲ. ಈಗ ಎರಡು ಮೂರು ವರ್ಷದಿಂದ ಲಭಿಸುತ್ತಿದೆ. ಇಂಪೆಲ್ಲಾ ಹಾರ್ಟ್ ಪಂಪ್‌ನ ಕೆಲಸವೇನೆಂದರೆ ಹೃದಯಕ್ಕೆ ತಾತ್ಕಾಲಿಕವಾಗಿ ಮೂರು ಲೀಟರ್‌ನಷ್ಟು ರಕ್ತವನ್ನು ನಿರಂತರವಾಗಿ ಪಂಪ್ ಮಾಡುತ್ತಿರುವುದು.
ಇದನ್ನು ಎರಡು ರೀತಿಯ ರೋಗಿಗಳಿಗೆ ಹಾಕಬಹುದು. ಒಂದು ಹೃದಯಾಘಾತಕ್ಕೆ ಒಳಗಾದವರಿಗೆ, ಶಾಕ್‌ನಲ್ಲಿರುವ ರೋಗಿಗಳಿಗೆ. ಇನ್ನೊಂದು ಹೈ ರಿಸ್ಕ್ ರೋಗಿಗಳಿಗೆ. ಅಂದರೆ, ಸಾಮಾನ್ಯ ಆಂಜಿಯೋಪ್ಲಾಸ್ಟಿ ಮಾಡಿದರೆ ಪರಿಸ್ಥಿತಿ ಹದಗೆಟ್ಟೀತು ಎಂದು ಭಾವಿಸುತ್ತೇವೋ ಅವರಿಗೆ. ಅಂದರೆ, ಕಿಡ್ನಿ ದುರ್ಬಲವಾಗಿದೆ. ಶ್ವಾಸಕೋಶಗಳು ಸಮಸ್ಯೆಯಲ್ಲಿವೆ. ಹೃದಯದಲ್ಲಿ ಮೂರು ರಕ್ತನಾಳಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು. ಅದರೆ, ಕೆಲವರಲ್ಲಿ ಒಂದೇ ಒಂದು ಸರಿಯಾಗಿರುತ್ತದೆ. ಅದೂ ಈ ಸಮಯದಲ್ಲಿ ಕೈಕೊಟ್ಟಿದೆ ಎಂಬ ಪರಿಸ್ಥಿತಿಯಲ್ಲಿ ಇರುವವರಿಗೆ ಇದನ್ನು ಮಾಡಬಹುದು. ಸಾಮಾನ್ಯವಾಗಿ ಹಾರ್ಟ್ ಫಂಕ್ಷನಿಂಗ್ ೫೦% ಇರಬೇಕು, ಕೆಲವರಿಗೆ ೩೦% ಮಾತ್ರ ಇರುತ್ತದೆ. ಇಂಥವರನ್ನು ಹೈರಿಸ್ಕ್ ಅಂತೇವೆ. ಇವರಲ್ಲಿ ಆಂಜಿಯೊಪ್ಲಾಸ್ಟಿ ಮಾಡಿದರೆ ಕಾಂಪ್ಲಿಕೇಶನ್ಸ್ ಆಗುವ, ಬಿಪಿ ಇಳಿಯುವ ಅಪಾಯ ಜಾಸ್ತಿ. ಅವರಿಗೆ ಇಂಪೆಲ್ಲಾ ಹಾಕಿದರೆ ರಕ್ತದ ಒತ್ತಡವನ್ನು ಸರಿಯಾದ ಪ್ರಮಾಣದಲ್ಲಿ ಕಾಯ್ದುಕೊಳ್ಳಬಹುದು, ಹೃದಯಕ್ಕೆ ಬೇಕಾದ ಪ್ರಮಾಣದಲ್ಲಿ ರಕ್ತ ಪಂಪ್ ಆಗುವಂತೆ ನೋಡಿಕೊಳ್ಳಬಹುದು.
ಮೊದಲೆಲ್ಲ ನಾವು ಹೈ ರಿಸ್ಕ್ ಪೇಷೆಂಟ್‌ಗಳಿಗೆ ನಾವು ಆಂಜಿಐೊಪ್ಲಾಸ್ಟಿ ಮಾಡುತ್ತಲೇ ಇರಲಿಲ್ಲ. ಈಗ ಹಾಕಿಲ್ಲ ಒಂದು ಹಂತದಲ್ಲಿ ಹೃದಯ ತಾತ್ಕಾಲಿಕವಾಗಿ ಕೆಲಸವನ್ನೇ ನಿಲ್ಲಿಸಿದರೂ ದೇಹದ ಬೇರೆ ಬೇರೆ ಭಾಗಗಳಿಗೆ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ಇಂಪೆಲ್ಲಾ ಮಾಡುತ್ತದೆ. ಇಂಪೆಲ್ಲಾ ಬಳಕೆಯಿಂದ ಒಟ್ಟಾರೆ ಪ್ರೊಸೀಜರ್ ಫಲಿತಾಂಶ ಚೆನ್ನಾಗಿರುತ್ತದೆ. ಹೀಗಾಗಿ ಇದು ಸುರಕ್ಷಿತ ವಿಧಾನ. ಹಿರಿಯರ ಪಾಲಿಗಂತೂ ಸಂಜೀವಿನಿ. ನಾವು ಆಪರೇಟ್ ಮಾಡಿದ ರೋಗಿಗಳೆಲ್ಲರೂ ೪೮ ಗಂಟೆಗಳಲ್ಲಿ ಮನೆಗೆ ಹೋಗಿದ್ದಾರೆ. ಮೊದಲಿಗಿಂತಲೂ ಚೆನ್ನಾಗಿದ್ದಾರೆ.
ರಕ್ತದೊತ್ತಡ ನಾರ್ಮಲ್ ಇದೆ, ಒಂದೇ ರಕ್ತನಾಳದಲ್ಲಿ ಬ್ಲಾಕ್ ಇದೆ ಅಂತಿದ್ದರೆ ಇಂಪೆಲ್ಲ ಬಳಸಬೇಕಾಗಿಲ್ಲ. ನಾರ್ಮಲ್ ಆಂಜಿಯೊಪ್ಲಾಸ್ಟಿ ಸಾಕಾಗುತ್ತದೆ. ಕಾಂಪ್ಲಿಕೇಶನ್ಸ್ ಇದ್ದಾಗ, ರೋಗಿಗಳಿಗೆ ತುಂಬ ವಯಸ್ಸಾಗಿದ್ದಾಗ, ಬೇರೆ ಆರೋಗ್ಯ ಸಮಸ್ಯೆಗಳು ಇದ್ದಾಗ ಇಂಪೆಲ್ಲಾ ತುಂಬ ಸಹಾಯಕಾರಿ ಎಂದು ಅವರು ವಿವರಿಸಿದರು.
ಫೊರ್ಟಿಸ್ ಆಸ್ಪತ್ರೆ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ ನಿರ್ದೇಶಕ ಡಾ. ಆರ್. ಕೇಶವ್ ಮಾತನಾಡಿ, ಇಂಪೆಲ್ಲಾ ಹೃದಯ ಪಂಪ್‌ನನ್ನು ವಯಸ್ಸಾದವರಿಗೆ ಅದರಲ್ಲೂ ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಅಪರೂಪದ ಹೃದಯಾಘಾತದಂಥ ಪ್ರಕರಣಗಳಿಗೆ ಬಳಸಲಾಗುತ್ತದೆ. ಆದರೆ ಈ ಸಾಧನ ಬಳಕೆಯಿಂದ ಶೇ.೧೦೦ರಷ್ಟು ಪ್ರಾಣ ಉಳಿಯುವುದು ಗ್ಯಾರಂಟಿ. ಏಕೆಂದರೆ, ಎಂಥಹ ಬ್ಲಾಕಿಂಗ್ ಆಗಿದ್ದರೂ ಈ ಪಂಪ್ ಮೂಲಕಹೃದಯದ ರಕ್ತಸಂಚಾರವನ್ನು ಸರಾಗಗೊಳಿಸಬಹುದು. ಈ ಸಾಧನವನ್ನು ದೇಹದೊಳಗೆ ಹಾಕಲು ಕೇವನ ೧೫ ನಿಮಿಷ ಸಾಕು ಎಂದು ವಿವರಿಸಿದರು.
ಇದನ್ನೂ ಓದಿ| Heart Attack | 19 ವರ್ಷದ ಯುವಕನಿಗೆ ಹೃದಯಾಘಾತ, ಸಣ್ಣ ವಯಸ್ಸಿನಲ್ಲೇ ಏಕೆ ಹೀಗೆ?