ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವುದರಿಂದ ಎಲ್ಲರಿಗೂ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವಗಿರಿ ಹೊಣೆಯ ಬಗ್ಗೆ ಇರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಭಾನುವಾರ (ಫೆ. ೧೯) ಬೆಳಗ್ಗೆ ಸಚಿವ ನಾರಾಯಣ ಗೌಡ ಮಾತನಾಡಿ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದರು. ಅಲ್ಲದೆ, ತಾವು ಯಾವುದೇ ಕಾರಣಕ್ಕೂ ಮಂಡ್ಯ ಉಸ್ತುವಾರಿ ಹೊಣೆಯನ್ನು ಹೊತ್ತುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈಗ ಈ ಬಗ್ಗೆ ಈ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು, ಈ ಹೊಣೆ ನಿಭಾಯಿಸಲು ಪಕ್ಷದಲ್ಲಿ ಎಲ್ಲರೂ ಸಮರ್ಥರಿದ್ದಾರೆ. ಆಗ ನಾನೇ ನನಗೆ ಹೆಚ್ಚುವರಿ ಜವಾಬ್ದಾರಿ ಬೇಡ ಎಂದು ಹೇಳಿದ್ದೆ ಎಂಬುದಾಗಿ ಹೇಳಿದ್ದಾರೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಂಡ್ಯ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಗೊಂದಲ ಏನಿಲ್ಲ. ಕಂದಾಯ ಸಚಿವರಾದ ಆರ್. ಅಶೋಕ್ ಅವರನ್ನೇ ಮೊದಲು ಮುಖ್ಯಮಂತ್ರಿಗಳು ನೇಮಕ ಮಾಡಿದ್ದರು. ಕಾರ್ಯ ಒತ್ತಡದಿಂದ ಅವರು ಹೋಗಿರಲಿಲ್ಲ. ಬಳಿಕ ನನ್ನನ್ನು ಕರೆದು ಕೆಲವು ದಿನ ಉಸ್ತುವಾರಿ ನೋಡಿಕೊಳ್ಳಲು ಹೇಳಿದ್ದರು. ನಾನಿದ್ದಂತಹ ಸಂದರ್ಭದಲ್ಲಿ ಹಾಸನದಂತೆ ಮಂಡ್ಯದಲ್ಲಿಯೂ ಎಲ್ಲರ ಜತೆ ಬೆರೆತು ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಇರುವ ಎಲ್ಲರೂ ಸಮರ್ಥರೇ ಆಗಿದ್ದಾರೆ. ಈ ಹಿಂದೆ ನಾರಾಯಣಗೌಡರು ಸಹ ಉಸ್ತುವಾರಿಯಾಗಿ ಸಮರ್ಥವಾಗಿಯೇ ಕಾರ್ಯನಿರ್ವಹಣೆ ಮಾಡಿದ್ದರು. ಸಚಿವ ಆರ್. ಅಶೋಕ್ ಅವರು ಬಿಜೆಪಿಯಲ್ಲಿ ಹಿರಿಯರು. ನಮಗಿಂತ ದೊಡ್ಡವರು. ಅಲ್ಲದೆ, ದೊಡ್ಡದಾದ ಕಂದಾಯ ಖಾತೆಯನ್ನೇ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ. ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಫೆ. 20ಕ್ಕೆ ಉಡುಪಿಗೆ ಜೆ.ಪಿ. ನಡ್ಡಾ; ಫ್ಲೆಕ್ಸ್ ಹರಿದ ಕಿಡಿಗೇಡಿಗಳ ವಿರುದ್ಧ ಬಿಜೆಪಿ ದೂರು
ನಾನು ಹಾಸನ ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹೀಗಾಗಿ ಮಂಡ್ಯ ಜಿಲ್ಲೆ ಉಸ್ತುವಾರಿ ನನಗೆ ಬೇಡ ಎಂದು ನಾನೇ ಸ್ವತಃ ಕೇಳಿಕೊಂಡಿದ್ದೆ. ನನಗೆ ಒಂದೇ ಜಿಲ್ಲೆಯ ಜವಾಬ್ದಾರಿ ಸಾಕು ಎಂದು ಹೇಳಿದ್ದೆ. ಅಲ್ಲಿ ಯಾರು ಬೇಕಾದರೂ ನಿರ್ವಹಣೆ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಸಚಿವ ಸಂಪುಟದ ಎಲ್ಲ ಸಚಿವರು ಸಮರ್ಥರಿದ್ದಾರೆ ಎಂದು ಸಹ ಅವರು ಪ್ರತಿಕ್ರಿಯೆ ನೀಡಿದರು.
ಮಂಡ್ಯ ಉಸ್ತುವಾರಿ ನನಗೆ ಬೇಡ; ಸಿಎಂ ವಿರುದ್ಧ ನಾರಾಯಣಗೌಡ ಗರಂ
ನಾನು ಮಂಡ್ಯ ಉಸ್ತುವಾರಿಯನ್ನು ಪಡೆದುಕೊಳ್ಳುವುದಿಲ್ಲ. ಮೂರು ಮೂರು ತಿಂಗಳಿಗೆ ಬದಲಾವಣೆ ಮಾಡುತ್ತಿದ್ದರೆ ನಾನು ಉಸ್ತುವಾರಿ ಹೊಣೆ ಹೊತ್ತುಕೊಳ್ಳಲು ಆಗುತ್ತಾ ಎಂದು ಸಚಿವ ನಾರಾಯಣಗೌಡ (Narayana Gowda) ಪ್ರಶ್ನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆಗೆ ಭಾನುವಾರ (ಫೆ.೧೯) ಬೆಳಗ್ಗೆ ಮಂಡ್ಯದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರಾದ ಆರ್. ಅಶೋಕ್, ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ ಅವರಲ್ಲಿಯೇ ಯಾರದರೂ ಒಬ್ಬರನ್ನು ಉಸ್ತುವಾರಿಯನ್ನಾಗಿ ಮಾಡಲಿ. ಅವರು ಚುನಾವಣೆಯನ್ನು ಗೆಲ್ಲಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಅವರಲ್ಲಿಯೇ ಒಬ್ಬರಿಗೆ ಹೊಣೆ ನೀಡಲಿ. ನಾನು ಅವರ ಜತೆ ಇರುತ್ತೇನೆ. ಗೋಪಾಲಯ್ಯಗೆ ಜವಾಬ್ದಾರಿ ಕೊಟ್ಟಾಗ ನಾನು ಅವರ ಜತೆ ನಿಂತು ಓಡಾಡಿದ್ದೇನೆ. ಮುಂದೆಯೂ ಉಸ್ತುವಾರಿಯಾದವರಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿದ್ದರು.
ನನಗೆ ಶಿವಮೊಗ್ಗದ ಉಸ್ತುವಾರಿ ಹೊಣೆ ಕೊಟ್ಟಿದ್ದಾರೆ. ನನಗೆ ಈ ಹೊತ್ತಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಕೊಟ್ಟರೆ ಒಪ್ಪಿಕೊಳ್ಳಲಾರೆ. ನಾನು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲಸವನ್ನು ಅರ್ಧಕ್ಕೆ ಬಿಟ್ಟು, ಇಲ್ಲಿ ಅರ್ಧಕ್ಕೆ ಬಿಟ್ಟು ಕೆಲಸ ಮಾಡುವುದು ಕಷ್ಟ ಎಂದು ಹೇಳಿದ್ದರು.
ಇದನ್ನೂ ಓದಿ: Sindhuri Vs Roopa : ರವಿ ಜತೆಗಿನ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ: ಸಿಂಧೂರಿಯನ್ನು ಮತ್ತೆ ಕೆಣಕಿದ ರೂಪಾ
ಮಂಡ್ಯ ಉಸ್ತುವಾರಿ ಪಡೆಯಲು ಯಾರು ಒಪ್ಪುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ನಾರಾಯಣ ಗೌಡ, ಮುಖ್ಯಮಂತ್ರಿಗಳು ಒಪ್ಪಿಸಬೇಕು. ಕೆ. ಗೋಪಾಲಯ್ಯ ಅವರಿಗೆ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಗೋಪಾಲಯ್ಯ ಅವರಿಗೆ ಮಂಡ್ಯ ಉಸ್ತುವಾರಿ ಕೊಡಿಸಲು ನಾರಾಯಣಗೌಡ ಪ್ರಯತ್ನ ಮಾಡುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.