ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಎಲ್ಲ ಕಡೆ ಆಯಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಆಸ್ತಿ ಘೋಷಣೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಯಾದಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದೊಂದು ರೂಪಾಯಿಯ ನಾಣ್ಯಗಳನ್ನು ಸಂಗ್ರಹಿಸಿ ಠೇವಣಿ ಹಣವನ್ನು ಭರಿಸಿದ್ದಾರೆ. ಇದನ್ನು ಎಣಿಕೆ ಮಾಡಲು ಚುನಾವಣಾ ಅಧಿಕಾರಿಗಳಿಗೆ ಬರೋಬ್ಬರಿ ಎರಡು ಗಂಟೆ ಬೇಕಾಯಿತು.
ಯಂಕಪ್ಪ ದೇವಿಂದ್ರಪ್ಪ ಎಂಬ ಪಕ್ಷೇತರ ಅಭ್ಯರ್ಥಿಯೇ ಹೀಗೆ ಒಂದು ರೂಪಾಯಿಗಳ ನಾಣ್ಯಗಳ ಮೂಟೆಯನ್ನು ತಂದಿಟ್ಟು ಚುನಾವಣಾ ಅಧಿಕಾರಿಗಳಿಗೆ ಫಜೀತಿಯನ್ನು ತಂದೊಡ್ಡಿದವರು. ಇವರು ಚುನಾವಣೆಗೂ ಮೊದಲು ಕ್ಷೇತ್ರದ ಕೆಲವು ಕಡೆ ಪಾದಯಾತ್ರೆ ನಡೆಸಿದ್ದು, ಈ ವೇಳೆ ಮತದಾರರಿಂದ ಒಂದು ರೂಪಾಯಿ ನಾಣ್ಯವನ್ನು ಸಂಗ್ರಹ ಮಾಡುತ್ತಾ ಬಂದಿದ್ದರು. ಈಗ ಅದನ್ನು ಠೇವಣಿ ಹಣವಾಗಿ ನೀಡಿದ್ದಾರೆ.
ಇದನ್ನೂ ಓದಿ: Karnataka Election: ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ಆಸ್ತಿ ಐದು ವರ್ಷಗಳಲ್ಲಿ 9.81 ಕೋಟಿ ರೂ. ಇಳಿಕೆ
ಯಾದಗಿರಿ ಜಿಲ್ಲೆಯ ರಾಮ ಸಮುದ್ರ ನಿವಾಸಿಯಾಗಿರುವ ದೇವಿಂದ್ರಪ್ಪ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಒಂದು ರೂಪಾಯಿಯಲ್ಲಿ ಒಂದು ಮತದಾನ, ಒಂದು ದಿನ ಎಂದು ಹೇಳಿಕೊಳ್ಳುವ ಇವರು, “ನನಗೆ ಮತ ನೀಡಿ ಬಡತನದಿಂದ ಸ್ವಾತಂತ್ರ್ಯ ಕೊಡಿಸುವೆ” ಎನ್ನುವ ಘೋಷದೊಂದಿಗೆ ರಥ ಯಾತ್ರೆಯನ್ನೂ ಮಾಡಿದ್ದರು.
ಇನ್ನು ದೇವೇಂದ್ರಪ್ಪ ಅವರು ಅನಕ್ಷರಸ್ಥರೇನಲ್ಲ. ಇವರು ಸುಶಿಕ್ಷಿತರಾಗಿದ್ದು, ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂಎ ಮಾಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿ ವಿವಿಯಲ್ಲಿ ವ್ಯಾಸಂಗ ಮಾಡಿ ಜ್ಞಾನ ಸಂಪಾದನೆ ಮಾಡಿದ್ದಾರೆ.
ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯಗೆ ಚಿನಕುರುಳಿ ಗ್ರಾಮಸ್ಥರಿಂದ 3.25 ಲಕ್ಷ ರೂ. ದೇಣಿಗೆ
ಮಂಡ್ಯ: ಹಿಂದಿನ ಕಾಲದಲ್ಲಿ ಕೆಲವು ಅಭ್ಯರ್ಥಿಗಳಿಗೆ ಜನರೇ ದುಡ್ಡು ಸಂಗ್ರಹಿಸಿಕೊಟ್ಟು ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂಬ ಸುದ್ದಿಯನ್ನು ಕೇಳಿದ್ದೇವೆ. ಅಂಥ ಕೆಲವು ಘಟನೆಗಳು ಈಗಲೂ ನಡೆಯುತ್ತಿವೆ. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸುತ್ತಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಈ ರೀತಿಯ ಗೌರವ ಸಂದಿದೆ.
ಇದನ್ನೂ ಓದಿ: Karnataka Election 2023: ನಾನು, ಡಿಕೆಶಿ ಸಿಎಂ ಆಕಾಂಕ್ಷಿಗಳು; ಪೈಪೋಟಿಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ
ಚುನಾವಣಾ ವೆಚ್ಚಕ್ಕಾಗಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಚಿನಕುರುಳಿ ಗ್ರಾಮಸ್ಥರು 3.25 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಚಿನಕುರುಳಿ ಎಂದರೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಒಂದು ಗ್ರಾಮ. ಇದು ಮೇಲುಕೋಟೆಯ ಹಾಲಿಯ ಶಾಸಕ, ಜೆಡಿಎಸ್‌ನ ಸಿ.ಎಸ್ ಪುಟ್ಟರಾಜು ಹುಟ್ಟೂರು.
ದೇವನೂರು ಮಹಾದೇವ ಅವರು ರೈತರ ಸಂಘ ಮತ್ತಿತರ ಸಂಘಟನೆಗಳನ್ನು ಸೇರಿಸಿಕೊಂಡು ಸ್ಥಾಪಿಸಿದ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣಯ್ಯ ಕಣದಲ್ಲಿದ್ದಾರೆ. ಇವರು ರೈತ ಸಂಘದ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ. ತಂದೆಯ ಮರಣಾನಂತರ ರಾಜಕೀಯ ಪ್ರವೇಶಿಸಿದ್ದಾರೆ.
ದರ್ಶನ್ ಅವರು ಪ್ರಚಾರಕ್ಕೆ ಬಂದ ಕೂಡಲೇ ಗ್ರಾಮದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಸಂಗ್ರಹಿಸಿದ್ದ ದೇಣಿಗೆಯನ್ನು ಅವರಿಗೆ ನೀಡಿದ್ದಾರೆ. ಮತ್ತು ಚುನಾವಣೆಯಲ್ಲಿ ಗೆದ್ದು ಬರುವಂತೆ ಗ್ರಾಮದ ಹಿರಿಯರು ಹಾರೈಸಿದ್ದಾರೆ.
ಮೇಲುಕೋಟೆಯಲ್ಲಿ ಕಾಂಗ್ರೆಸ್ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸರ್ವೋದಯ ಪಕ್ಷವು ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರನ್ನು ಬೆಂಬಲಿಸಿತ್ತು. ಈಗ ಸುಮಲತಾ ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಅವರು ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುತ್ತಾರಾ ಎನ್ನುವ ಕುತೂಹಲವಿದೆ.
ಇದನ್ನೂ ಓದಿ: Heart Attack: ಹೃದಯಾಘಾತದಿಂದ ಮೃತಪಟ್ಟ ಎಂದು ವೈದ್ಯರಿಂದ ಘೋಷಣೆ; ಮರಣೋತ್ತರ ಪರೀಕ್ಷೆಗೆ ಹೋಗುವಾಗ ಎದ್ದು ಕುಳಿತ ವ್ಯಕ್ತಿ!
2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಿ.ಎಸ್. ಪುಟ್ಟರಾಜು ಅವರಿಗೆ 96003 ಮತಗಳು ಬಂದಿದ್ದರೆ, ದರ್ಶನ್ ಪುಟ್ಟಣ್ಣಯ್ಯ ಅವರಿಗೆ 73,779 ಮತಗಳು ಬಂದಿದ್ದವು.