Site icon Vistara News

Inhuman police | ಪುಟ್ಟ ಮಗುವಿನ ಜತೆ ಆಸ್ಪತ್ರೆಗೆ ಹೊರಟಿದ್ದ ದಂಪತಿಯ ಬೈಕ್‌ ತಡೆದು ಪೊಲೀಸ್‌ ಕಿರುಕುಳ

Mandya bike

ಬೆಂಗಳೂರು: ಮಗುವಿನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯ ಬೈಕನ್ನು ಅಡ್ಡಗಟ್ಟಿ ಪೊಲೀಸರು ಕಿರುಕುಳ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದ್ದು ಇದರ ವಿಡಿಯೊ ವೈರಲ್‌ ಆಗಿದೆ.
ಆಸ್ಪತ್ರೆಗೆ ಬೈಕ್‌ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ ಇಲ್ಲ ಎನ್ನುವ ಕಾರಣಕ್ಕೆ ಬೈಕಿನ ಕೀಯನ್ನೇ ಕಿತ್ತುಕೊಂಡು ಪೊಲೀಸರು ಕಿರುಕುಳ ನೀಡಿದ್ದಾರೆ. ಹಣವಿಲ್ಲ, ಆಮೇಲೆ ತಂದು ಕೊಡುತ್ತೇನೆ ಎಂದು ಹೇಳಿದರೂ ಕೇಳದೆ ಬಳಿಕ ಹಣ ತಂದು ಕೊಟ್ಟ ಮೇಲೆಯೇ ಮುಂದೆ ಸಾಗಲು ಬಿಟ್ಟ ಈ ವಿದ್ಯಮಾನ ಹಲವರನ್ನು ಕೆರಳಿಸಿದೆ. ಬೈಕ್‌ನ ಕೀಯನ್ನು ಕಿತ್ತುಕೊಂಡಾಗ ಯುವಕ ಗೋಗರೆಯುತ್ತಿರುವುದು, ಕೊನೆಗೆ ದಿಕ್ಕು ಕಾಣದೆ ಎಲ್ಲಿಂದಾದರೂ ಹಣ ತರಲು ಹೊರಟು ಹೋಗುವುದು ಮತ್ತು ಆ ಹೊತ್ತಿನಲ್ಲಿ ಬೀದಿ ಬದಿಯಲ್ಲಿ ಪುಟ್ಟ ಮಗುವನ್ನು ಹಿಡಿದುಕೊಂಡು ಕುಳಿತ ಮಹಿಳೆಯ ಚಿತ್ರಗಳು ಮನ ಕಲಕುವಂತಿವೆ. ಹಣ ತಂದು ಕೊಟ್ಟ ಬಳಿಕ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಬೈಕ್‌ ಕೀ ಮರಳಿಸಿದ್ದಾರೆ.

ಅಸಹಾಯಕರಾಗಿ ಕಾಯುತ್ತಿರುವ ತಾಯಿ ಮತ್ತು ಮಗು

ಕುಮಾರಸ್ವಾಮಿ ಆಕ್ರೋಶ
ಮಂಡ್ಯದಲ್ಲಿ ನಡೆದ ಈ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರ ಅಮಾನವೀಯ ನಡೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಹಾಳು ಮಾಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
-ಆಸ್ಪತ್ರೆಗೆ ಬೈಕ್‌ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ ಇಲ್ಲ ಎನ್ನುವ ಕಾರಣಕ್ಕೆ ಬೈಕಿನ ಕೀ ಕಿತ್ತುಕೊಂಡು ಪೊಲೀಸರು ಕಿರುಕುಳ ನೀಡಿದ ಘಟನೆಯ ಘಟನೆಯ ವಿಡಿಯೋ ತುಣುಕುಗಳನ್ನು ನೋಡಿ ನನಗೆ ಬಹಳ ಸಂಕಟವಾಯಿತು.

– ಮಗುವಿನ ಅನಾರೋಗ್ಯದಿಂದ ಆತಂಕಗೊಂಡಿದ್ದ ದಂಪತಿಯೊಂದಿಗೆ ಪೊಲೀಸರು ಹೀಗೆ ನಡೆದುಕೊಂಡಿದ್ದು ಅಕ್ಷಮ್ಯ ಮತ್ತು ಹೇಯ. “ದಮ್ಮಯ್ಯ, ನಮ್ಮಲ್ಲಿ ಹಣವಿಲ್ಲ, ದಯವಿಟ್ಟು ಬಿಟ್ಟುಬಿಡಿ” ಎಂದು ಬೇಡಿಕೊಂಡರೂ ಪೊಲೀಸರು ದಯೆ ತೋರಿಸಿಲ್ಲ. ದಂಡದ ಮಾತು ಹೇಳುತ್ತಲೇ ಪೊಲೀಸರು ಹಣಕ್ಕಾಗಿ ಪೀಡಿಸಿರುವುದು ಪೈಶಾಚಿಕ ನಡವಳಿಕೆ, ಇಲಾಖೆಯೇ ತಲೆ ತಗ್ಗಿಸುವಂತದ್ದು.

-ಹಣವಿಲ್ಲದೇ ದಂಪತಿ ರಸ್ತೆಯಲ್ಲೇ ಪರದಾಡಿದ್ದಾರೆ. ಆ ಮಗುವಿನ ತಂದೆ ಹಣಕ್ಕಾಗಿ ಒದ್ದಾಡಿದ್ದಾರೆ, ಆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ರಸ್ತೆ ನಡುವೆಯೇ ಮಡಿಲಲ್ಲಿಟ್ಟುಕೊಂಡು ಅನುಭವಿಸಿದ ವೇದನೆ ಬಿಜೆಪಿ ಸರಕಾರದ ಕೆಟ್ಟ ಆಡಳಿತಕ್ಕೆ ಹಿಡಿದ ಕನ್ನಡಿ, ಮನುಷ್ಯತ್ವ ಸತ್ತ ಸರಕಾರದ ಇನ್ನೊಂದು ಕರಾಳಮುಖ ಎನ್ನದೇ ವಿಧಿ ಇಲ್ಲ.

ಆ ಮಗುವಿನ ತಂದೆ ಕೊನೆಗೂ ಗೆಳೆಯರೊಬ್ಬರಿಂದ ಹಣ ಪಡೆದು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ದಂಡ ಕಟ್ಟಿದ ಮೇಲೆ ಪೊಲೀಸರು ಬೈಕ್ ಬಿಟ್ಟು ಕಳಿಸಿದ್ದಾರೆ. ಬದಲಿಗೆ ದಂಡದ ರಸೀತಿ ಕೊಟ್ಟು, ಆ ನಂತರ ದಂಡ ಕಟ್ಟಿ ಎಂದು ಪೊಲೀಸರು ಹೇಳಬಹುದಿತ್ತು. ಹಾಗೆ ಮಾಡದೇ ದಂಡಪ್ರಯೋಗದ ಹೆಸರಿನಲ್ಲಿ ಪೊಲೀಸರು ಹಿಂಸೆ ನೀಡಿದ್ದಾರೆ.

ಹೆಲ್ಮೆಟ್‌ ಹಾಕಿಲ್ಲವೆಂದು ದಂಡ ವಿಧಿಸಿದ ಪೊಲೀಸ್‌

-ಕೂಡಲೇ ಆ ಪೊಲೀಸ್ ಸಿಬ್ಬಂದಿಯ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ವಹಿಸಬೇಕು ಹಾಗೂ ಇಂಥ ಮನಃಸ್ಥಿತಿಯ ಪೊಲೀಸ್ ಸಿಬ್ಬಂದಿಯ ಮನಃಪರಿವರ್ತನೆ ಮಾಡಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ, ಎಚ್ಚರಿಕೆ ವಹಿಸಬೇಕು.

-ಅಲ್ಲದೆ, ಗೃಹ ಸಚಿವರು ಈ ಬಗ್ಗೆ ಜನರಿಗೆ ಉತ್ತರ ನೀಡಬೇಕಲ್ಲದೆ, ನೊಂದ ದಂಪತಿಗೆ ಸಾಂತ್ವನ ಹೇಳಲೇಬೇಕು. ಇಂಥ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು.

Exit mobile version