Site icon Vistara News

Security Breach in Lok Sabha: ಮನೋರಂಜನ್ ಕುಟುಂಬಸ್ಥರ ತೀವ್ರ ವಿಚಾರಣೆ; ಮಹತ್ವದ ದಾಖಲೆ ವಶಕ್ಕೆ

Manoranjan

ಮೈಸೂರು: ಸಂಸತ್ ಭವನಕ್ಕೆ‌ ನುಗ್ಗಿ ದಾಂಧಲೆ ಪ್ರಕರಣ (Security Breach in Lok Sabha) ಸಂಬಂಧ ಆರೋಪಿ ಮನೋರಂಜನ್ ಕುಟುಂಬಸ್ಥರನ್ನು ಸತತ 7 ತಾಸು ವಿಚಾರಣೆ ನಡೆಸಿದ ಬಳಿಕ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ದೆಹಲಿ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಮನೋರಂಜನ್‌ಗೆ ಮನೆಗೆ ಬಂದಿದ್ದ ತಂಡ, ಸಂಜೆ 6.35ರವರೆಗೆ ಸುದೀರ್ಘ ವಿಚಾರಣೆ ನಡೆಸಿ, ಮನೋರಂಜನ್ ರೂಮ್‌ನಲ್ಲಿದ್ದ ಪುಸ್ತಕಗಳು, ಕಡತಗಳನ್ನು ಕೊಂಡೊಯ್ದಿದೆ.

ವಿಜಯನಗರ ಎರಡನೇ ಹಂತದಲ್ಲಿರುವ ಮನೋರಂಜನ್ ಮನೆಯಲ್ಲಿ ದೆಹಲಿ ಪೊಲೀಸರು ತನಿಖೆ ನಡೆಸಿದ್ದು, ದೆಹಲಿಯ ಸ್ಪೆಷಲ್ ಸೆಲ್‌ನ ಮಹಿಳಾ ಪೊಲೀಸ್ ಸೇರಿ ಇಬ್ಬರು ಅಧಿಕಾರಿಗಳು ಮತ್ತು ಇಟಲಿಜನ್ಸ್‌ ಬ್ಯೂರೋ ವಿಭಾಗದ ಇಬ್ಬರು ಅಧಿಕಾರಿಗಳು, ಆರೋಪಿಯ ಕುಟುಂಬಸ್ಥರ ವಿಚಾರಣೆ ನಡೆಸಿದರು.

ಇದನ್ನೂ ಓದಿ | Murder Case : ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದ ಪೊಲೀಸರು, ಸ್ಥಳೀಯ ಭಾಷಾಂತರಕಾರರ ಸಹಕಾರದಿಂದ ಕುಟುಂಬಸ್ಥರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಸಾಗರ್ ಶರ್ಮಾ ಪರಿಚಯ ನಿಮಗಿದೆಯಾ.? ಎಷ್ಟು ದಿನಗಳ ಹಿಂದೆ ಸಾಗರ್ ಶರ್ಮಾ ಬಂದಿದ್ದ.? ಸಾಗರ್ ಶರ್ಮಾನನ್ನು ಮನೋರಂಜನ್ ಏನೆಂದು ಪರಿಚಯಿಸಿದ್ದ? ಆತ ಒಬ್ಬನೇ ಬಂದಿದ್ದನಾ, ಜತೆಗೆ ಇನ್ಯಾರು ಬಂದಿದ್ದರು.? ಇಂಜಿನಿಯರಿಂಗ್ ಯಾಕಾಗಿ ಅರ್ಧಕ್ಕೆ ನಿಲ್ಲಿಸಿದ? ಕೆಲಸ‌ ಮಾಡದಿದ್ದ ಮೇಲೆ ಅವನಿಗೆ ಹಣ ಎಲ್ಲಿಂದ ಬರುತ್ತಿತ್ತು? ನೀವು ಮನೋರಂಜನ್‌ಗೆ ಏನೂ ಪ್ರಶ್ನೆ ಮಾಡುತ್ತಿರಲಿಲ್ಲವೇ? ಮತ್ತಿತರ
ಪ್ರಶ್ನೆಗಳನ್ನು ಮನೋರಂಜನ್ ತಂದೆ ದೇವರಾಜೇಗೌಡ ಮತ್ತು ತಾಯಿ ಶೈಲಜಾ ಅವರನ್ನು ಕೇಳಲಾಗಿದೆ.

ಸ್ಥಳೀಯ ಹೋರಾಟಗಾರರಿಗೂ ಲಿಂಕ್‌?

ದಾಳಿ ಕುರಿತು ನಡೆಸಿದ ತನಿಖಾ ವರದಿಯನ್ನು‌ ರಾಜ್ಯ ಗುಪ್ತಚರ ಇಲಾಖೆಯು ಕೇಂದ್ರಕ್ಕೆ ಸಲ್ಲಿಕೆ ಮಾಡಿದೆ. ಸದನದೊಳಗೆ ಪ್ರವೇಶಿಸಿ ಕಲರ್‌ ಗ್ಯಾಸ್‌ ಸಿಡಿಸಿದ ಮುಖ್ಯ ಆರೋಪಿಗಳಾದ ಮನೋರಂಜನ್ ಹಾಗೂ ಸಾಗರ್ ಶರ್ಮಾರ ಚಲನವಲನಗಳ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಪ್ರಾಥಮಿಕ‌ ವರದಿಯ ಬಳಿಕವೂ ಮತ್ತೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಲಖನೌದ ಸಾಗರ್‌ ಶರ್ಮಾ ಐದು ವರ್ಷಗಳಿಂದ ಬೆಂಗಳೂರು ಒಡನಾಟ ಹೊಂದಿದ್ದಾನೆ. ಸಾಗರ್‌ ಶರ್ಮಾ ಉತ್ತರ ಪ್ರದೇಶದವನಾದರೂ ಆತನ ತಂದೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಾಗರ್‌ ಶರ್ಮಾನ ತಂದೆ ಶಂಕರ್‌ ಲಾಲ್‌ ಶರ್ಮಾ ಅವರೇ ಮಗನಿಗೆ ಸಂಸತ್‌ ಭೇಟಿಯ ಪಾಸ್‌ ತೆಗೆಸಿ ಕೊಟ್ಟಿದ್ದರು. ಆರೋಪಿಗಳ ಮೊದಲ ಮೀಟಿಂಗೇ ಮೈಸೂರಿನಲ್ಲಿ ನಡೆದಿತ್ತು. ʼಭಗತ್‌ ಸಿಂಗ್‌ ಫ್ಯಾನ್ಸ್‌ ಕ್ಲಬ್ʼ ಎಂಬ ಸೋಶಿಯಲ್‌ ಮೀಡಿಯಾ ಅಕೌಂಟ್‌ ಮೂಲಕ ಆರು ಮಂದಿ ಆರೋಪಿಗಳು ಲಿಂಕ್‌ ಆಗಿದ್ದರು.

ಇದನ್ನೂ ಓದಿ | Security Breach In Lok Sabha: ಜೀವಂತ ದಹನ, ರಾಜಕೀಯ ಪಕ್ಷ ಸ್ಥಾಪನೆ; ಆರೋಪಿಗಳ ಯೋಜನೆ!

ಕ್ರಾಂತಿಕಾರಿ ವ್ಯಕ್ತಿಗಳ ಪುಸ್ತಕ ಓದುತ್ತಿದ್ದ ಮನೋರಂಜನ್

ಮೈಸೂರಿನ ಮೂಲದ ಮನೋರಂಜನ್‌ ಕುಟುಂಬ, ಮನೋರಂಜನ್‌ನ ಶೈಕ್ಷಣಿಕ, ಸಂಘಟನೆ ಮತ್ತಿತರ ವಿವರಗಳನ್ನು ಗುಪ್ತಚರ ಇಲಾಖೆ ಕಲೆಹಾಕಿದೆ. ಮನೋರಂಜನ್‌ ಮನೆಗೆ ಭೇಟಿ ನೀಡಿದ್ದ ಗುಪ್ತಚರ ಇಲಾಖೆ ಸಿಬ್ಬಂದಿ, ಆತ ಹೊಂದಿದ್ದ ಪುಸ್ತಕ, ಗ್ಯಾಜೆಟ್‌ ಇತ್ಯಾದಿಗಳನ್ನು ಪರಿಶೀಲಿಸಿತ್ತು. ಚೆಗುವೆರಾ ಸೇರಿದಂತೆ ಹಲವಾರು ಕ್ರಾಂತಿಕಾರಿ ವ್ಯಕ್ತಿಗಳ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಮನೋರಂಜನ್‌ ಓದುತ್ತಿದ್ದುದು ಪತ್ತೆಯಾಗಿತ್ತು.

Exit mobile version