ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಕರ್ನಾಟಕದ ಒಬ್ಬ ಹಿರಿಯ ಐಪಿಎಸ್ ಹಾಗೂ ಮತ್ತೊಬ್ಬ ಐಎಎಸ್ ಅಧಿಕಾರಿಯನ್ನು ರಾಜ್ಯ ಸರ್ಕಾರ ಸೋಮವಾರ ಅಮಾನತು ಮಾಡಿದೆ.
545 ಪಿಎಸ್‌ಐ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಎಡಿಜಿಪಿ ರ‍್ಯಾಂಕ್ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಹಾಗೂ ಈ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅಮಾನತಾದವರು. ಇಬ್ಬರನ್ನೂ ಆಮಾನತುಗೊಳಿಸಿ ಪ್ರತ್ಯೇಕ ಆದೇಶಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಅಮೃತ್ ಪಾಲ್ ಅಮಾನತು ಆದೇಶ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಪಿಎಸ್‌ಐ ಆಯ್ಕೆ ಹಗರಣದಲ್ಲಿ ಅಮೃತ್ ಪಾಲ್ ಪಾತ್ರ ಇರುವುದು ಕಂಡು ಬಂದಿದೆ ಎಂದು ಸಿಐಡಿ, ಸರ್ಕಾರಕ್ಕೆ ವರದಿ ನೀಡಿದೆ. ವಿಚಾರಣೆ ಸಮಯದಲ್ಲಿ ಈ ವಿಚಾರ ತಿಳಿದು ಬಂದಿದ್ದರಿಂದ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಯಿತು. ಜುಲೈ 13ರವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿಸಲಾಗಿದೆ.
ಮುಂದಿನ ಆದೇಶದವರೆಗೆ ಹಾಗೂ ಸಿಐಡಿ ವಿಚಾರಣೆ ಮುಗಿಯುವವರೆಗೆ ಅಮೃತ್ ಪಾಲ್ ಅವರನ್ನು ಅಮಾನತು ಮಾಡಲಾಗಿದೆ. ಈ ಅಮಾನತು ಅವಧಿಯಲ್ಲಿ, ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ವ್ಯಾಪ್ತಿಯನ್ನು ಬಿಟ್ಟು ಹೊರಹೋಗುವಂತಿಲ್ಲ ಎಂದು ತಿಳಿಸಲಾಗಿದೆ.
ಪಿಎಸ್‌ಐ ಹಗರಣದಲ್ಲಿ ನೇಮಕಾತಿ ಅಧಿಕಾರಿಯಾಗಿದ್ದ ಅಮೃತ್ ಪಾಲ್, ತಮ್ಮ ಕೊಠಡಿ ಪಕ್ಕದಲ್ಲೆ ಇದ್ದ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗಿದ್ದ ಉತ್ತರ ಪತ್ರಿಕೆಗಳನ್ನು ತಿದ್ದಿದ್ದರು ಎಂಬ ಆರೋಪವಿದೆ. ಇದಕ್ಕೆ ಪ್ರತಿ ಅಭ್ಯರ್ಥಿಯಿಂದ ಸುಮಾರು 30-50 ಲಕ್ಷ ರೂ.ವರೆಗೆ ಲಂಚ ಪಡೆಯುತ್ತಿದ್ದರು ಎನ್ನಲಾಗುತ್ತಿದೆ. ಈ ಹಿಂದೆ ಮೂರು ಬಾರಿ ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು ಸೋಮವಾರ ನಾಲ್ಕನೇ ಬಾರಿ ವಿಚಾರಣೆಗೆ ಆಹ್ವಾನಿಸಿದರು. ಇದೇ ವೇಳೆ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ; ಎಡಿಜಿಪಿ ಅಮೃತ್ ಪಾಲ್ ಬಂಧನ
ಮಂಜುನಾಥ್ ಅಮಾನತು
ಭೂವ್ಯಾಜ್ಯಕ್ಕೆ ಸಂಬಂಧಿಸಿ ಲಂಚ ಪಡೆದ ಆರೋಪದಲ್ಲಿ, ಈ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸೋಮವಾರ ಬಂಧಿಸಿದ ನಂತರ ಸರ್ಕಾರ ಅಮಾನತು ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಬೆಂಗಳೂರಿನ ಬೇಗೂರಿನ ನಿವಾಸಿ ಅಂಜುಮ್ ಪಾಷಾ ಎಂಬರು ತಮ್ಮ ಜಮೀನು ವ್ಯಾಜ್ಯವನ್ನು ಬಗೆಹರಿಸಿಕೊಡುವಂತೆ 2020-21ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದರು. ಈ ಸಮಸ್ಯೆ ಪರಿಹಾರಕ್ಕಾಗಿ 15 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು. ನಂತರ 5 ಲಕ್ಷ ರೂ. ಲಂಚ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಜಿಲ್ಲಾಧಿಕಾರಿ ಕಚೇರಿಯ ಮಹೇಶ್ ಎಂಬಾತನನ್ನು ಬಂಧಿಸಿದ್ದರು.
ಜಿಲ್ಲಾಧಿಕಾರಿಯವರ ಆಪ್ತ ಸಹಾಯಕನಾಗಿದ್ದ ಮಹೇಶ್ ಹಾಗೂ ಚೇತನ್ ಕುಮಾರ್ ಅಲಿಯಾಸ್ ಚಂದು ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಅಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ಸಮಯದಲ್ಲಿ, ಆಗಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರೇ ಇಬ್ಬರು ಆರೋಪಿಗಳ ಜತೆ ಶಾಮೀಲಾಗಿ ಪರೋಕ್ಷವಾಗಿ ಲಂಚ ಸ್ವೀಕರಿಸುತ್ತಿದ್ದರು ಎಂದು ಎಸಿಬಿ ಅಧಿಕಾರಿಗಳಿಗೆ ತಿಳಿದುಬಂದಿತ್ತು. ಇದೀಗ ಮಂಜುನಾಥ್ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ. ಮುಂದಿನ ಆದೇಶದವರೆಗೆ ಹಾಗೂ ಎಸಿಬಿ ವಿಚಾರಣೆ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ಈ ಅಮಾನತು ಅವಧಿಯಲ್ಲಿ, ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ವ್ಯಾಪ್ತಿಯನ್ನು ಬಿಟ್ಟು ಹೊರಹೋಗುವಂತಿಲ್ಲ ಎಂದು ತಿಳಿಸಲಾಗಿದೆ.
ಬಂಧನದ ನಂತರ ಮಂಜುನಾಥ್ ಅವರನ್ನು ಎಸಿಬಿ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು 14 ದಿನ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ನನ್ನ ತಪ್ಪಿಲ್ಲ ಎಂದ ಅಧಿಕಾರಿ
ಮಂಜುನಾಥ್ ಅವರನ್ನು ಪೊಲೀಸರು ಬಂದಿಸಿ ಕರೆದೊಯ್ಯವಾಗ ಮಾಧ್ಯಮಗಳ ಕ್ಯಾಮರಾಗಳನ್ನು ಕಂಡ ಮಂಜುನಾಥ್ ಹತ್ತಿರ ಬಂದಿದ್ದಾರೆ. ʻನಾನು ನಿರಪರಾಧಿ. ನಾನು ಯಾವುದೇ ತಪ್ಪು ಮಾಡಿಲ್ಲʼ ಎಂದು ಇಂಗ್ಲಿಷ್‌ನಲ್ಲಿ ಹೇಳಿ ಮುಂದೆ ಹೋದರು.
ಇದನ್ನೂ ಓದಿ | ಭೂವ್ಯಾಜ್ಯದಲ್ಲಿ ಲಂಚ: ಬೆಂಗಳೂರು ನಗರ ಡಿಸಿಯಾಗಿದ್ದ ಜೆ. ಮಂಜುನಾಥ್ ಬಂಧನ
ಸಿಎಂ ಭೇಟಿ ಮಾಡಿದ ಸೀಮಂತ್ ಕುಮಾರ್ ಸಿಂಗ್
ಪಿಎಸ್‌ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಬಂಧನವಾಗುತ್ತಿದ್ದಂತೆಯೇ ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಿಐಡಿ ಸಿಐಡಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರನ್ನು ಆರ್.ಟಿ. ನಗರದ ನಿವಾಸದಲ್ಲಿ ಭೇಟಿ ಮಾಡಿದ ಸಿಂಗ್, ಅಮೃತ ಪಾಲ್ ಬಂಧನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಸಿಎಂ ಜತೆ ಚರ್ಚೆ ಮಾಡಿ ಅಲ್ಲಿಂದ ತೆರಳಿದರು.