Site icon Vistara News

ಮುಸ್ಲಿಂ ಏರಿಯಾ ಅಂದ್ರೇನು ಅದು ಪಾಕಿಸ್ತಾನವಾ? ಅಲ್ಲಿ ಜಿನ್ನಾ ಫೋಟೊ ಹಾಕ್ಬೇಕಾ?: ಸಿದ್ದುಗೆ ಸಿ.ಟಿ ರವಿ ತರಾಟೆ

C T Ravi

ಬೆಂಗಳೂರು: ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತದಲ್ಲಿ ವೀರ ಸಾವರ್ಕರ್‌ ಫೋಟೊ ಹಾಕಿದ್ದು ತಪ್ಪು, ಅದು ಮುಸ್ಲಿಂ ಏರಿಯಾ, ಮುಸ್ಲಿಂ ಏರಿಯಾದಲ್ಲಿ ಫ್ಲೆಕ್ಸ್‌ ಹಾಕುವ ಮೂಲಕ ಬಿಜೆಪಿಯವರೇ ಕಿತಾಪತಿ ಮಾಡಲು ಮುಂದಾಗಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೌಂಟರ್‌ ಕೊಟ್ಟಿದ್ದಾರೆ.

ʻʻಮುಸ್ಲಿಂ ಏರಿಯಾ ಅಂದ್ರೇನು? ಅದು ಪಾಕಿಸ್ತಾವಾ? ಮುಸ್ಲಿಂ ಏರಿಯಾದಲ್ಲಿ ಜಿನ್ನಾ ಫೋಟೊ ಹಾಕಬೇಕಾ? ಅಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಫೋಟೊ ಹಾಕಬಾರದಾ?ʼʼ ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಇಂಥ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಅವರು ದೇಶವಿರೋಧಿಗಳಿಗೆ ಪ್ರಚೋದನೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನೋಸ್ಥಿತಿಯೇ ದೇಶವಿರೋಧಿಗಳಿಗೆ ಪ್ರಚೋದನೆ ನೀಡುವಂಥದ್ದು ಎಂದಿದ್ದಾರೆ ಸಿ.ಟಿ. ರವಿ.

ʻʻಸಿದ್ದರಾಮಯ್ಯ ಅವರ ಇಂಥ ಹೇಳಿಕೆಗಳು ತುಂಬಾ ಅಪಾಯಕಾರಿ. ಅವರು ಇಂಥ ಹೇಳಿಕೆಗಳ ಮೂಲಕ ಪ್ರಚೋದನೆ ಕೊಡುತ್ತಿದ್ದಾರೆ. ಮುಸಲ್ಮಾನರು ಬೇರೆ ಹಿಂದೂಗಳೇ ಬೇರೆ ಅನ್ನೋ ಮಾನಸಿಕತೆ ನಿರ್ಮಾಣ ಮಾಡ್ತಿದ್ದಾರೆ. ಈ ಮಾನಸಿಕತೆಯಿಂದಲೇ ಗಾಂಧಾರ ಬಲೂಚಿಸ್ತಾನ ಆಗಿದ್ದು. ಬಂಗಾಳ ಬಾಂಗ್ಲಾದೇಶ ಆಗಿದ್ದುʼʼ ಎಂದು ಹೇಳಿದ ಸಿ.ಟಿ. ರವಿ, ಹಾಗಿದ್ದರೆ, ಮುಸಲ್ಮಾನರು ಬೇರೆ ಏರಿಯಾಗೆ ಕಾಲಿಡಲು ಬಿಡಬಾರದು ಅಂತ ಹೇಳಿದ್ರೆ ಆಗುತ್ತಾ?ʼʼ ಎಂದು ಪ್ರಶ್ನಿಸಿದ್ದಾರೆ.

ʻʻಸಿದ್ದರಾಮಯ್ಯ ಅಂಥವರೇ ಈ ರೀತಿ ಹೇಳಿಕೆ ನೀಡಿದರೆ ದೇಶದ ಸಂವಿಧಾನಕ್ಕೆ ಯಾವ ಬೆಲೆ ಇದೆ. ಇಂಥ ಹೇಳಿಕೆಗಳು ಅಪಾಯಕಾರಿ. ಹೀಗಾಗಿ ಅವರು ಈ ಹೇಳಿಕೆಯನ್ನು ವಾಪಸ್‌ ಪಡೆಯಬೇಕುʼʼ ಎಂದು ಆಗ್ರಹಿಸಿದರು.

ಸಾವರ್ಕರ್ ಒಂದು ನೆಪ ಎಂದ ರವಿ
ʻʻವಿರೋಧಿಸುವವರಿಗೆ ಸಾವರ್ಕರ್‌ ಒಂದು ನೆಪ ಮಾತ್ರ. ಇಂದು ಸಾವರ್ಕರ್‌ರನ್ನು ವಿರೋಧಿಸುತ್ತಾರೆ. ನಾಳೆ ಅಂಬೇಡ್ಕರ್, ನಾಡಿದ್ದು ಗಾಂಧಿ ಹೀಗೆ ಎಲ್ಲರನ್ನೂ ವಿರೋಧಿಸ್ತಾರೆ. ಅವರು ದೇಶ ವಿಭಜಕರು, ಪ್ರತ್ಯೇಕತಾವಾದಿಗಳುʼʼ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ʻʻಸಾವರ್ಕರ್ ಅವರಿಗೆ ಸರ್ಟಿಫಿಕೇಟ್ ಕೊಡಲು ಈ ನನ್ನ ಮಕ್ಕಳು ಯಾರುʼʼ ಎಂದು ಕೇಳಿದರು.

ಸಿದ್ದರಾಮಯ್ಯ ಹೇಳಿದ್ದೇನು? ಈ ಲಿಂಕ್‌ ನೋಡಿ| Shimogga Clash| ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ಯಾಕೆ? ಪ್ರಚೋದಿಸಲು ಅಲ್ವೆ ಎಂದ ಸಿದ್ದು

Exit mobile version