Site icon Vistara News

AzaadiSAT| ಪುಟ್ಟ ಹೆಣ್ಮಕ್ಕಳು ತಯಾರಿಸಿದ, ಪುಟ್ಟ ಪೇಲೋಡ್‌ಗಳ ಹೊತ್ತುಹಾರಲು ರೆಡಿಯಾಗಿದೆ ಪುಟ್ಟ ರಾಕೆಟ್‌

isro

ನವ ದೆಹಲಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಸ್ರೋ ಸಿದ್ಧಪಡಿಸಿರುವ ಅತಿ ಸಣ್ಣ ವಾಣಿಜ್ಯ ರಾಕೆಟ್‌ ಎಸ್‌ಎಸ್‌ಎಲ್‌ವಿ (Small Satellite Launch Vehicle (SSLV) ಉಡಾವಣೆಗೆ ಅಣಿಯಾಗಿದೆ. ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ೯.೧೮ಕ್ಕೆ 75 ಗ್ರಾಮೀಣ ಸರಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ತಯಾರಿಸಿದ 75 ಪೇಲೋಡ್‌ಗಳನ್ನು ಹೊತ್ತಿರುವ ಉಪಗ್ರಹ ನಭಕ್ಕೆ ಚಿಮ್ಮಲಿದೆ.

ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಾಹ್ಯಾಕಾಶದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಲಾಗುತ್ತದೆ ಎಂದಿದ್ದರು. ಅವರ ಆಶಯವನ್ನು ನಿಜಗೊಳಿಸಲು ಇಸ್ರೋ ಶ್ರಮಿಸಿದೆ. ಎಸ್‌ಎಸ್‌ಎಲ್‌ವಿ ಮೂಲಕ AzaadiSAT ಎಂಬ ಉಪಗ್ರಹವನ್ನು ಉಡಾಯಿಸಲಾಗುತ್ತಿದೆ.

ಏನಿದರ ಪ್ರಮುಖ ವಿಶೇಷಗಳು?

– AzaadiSAT ಉಪಗ್ರಹವು ದೇಶದ 75 ಗ್ರಾಮೀಣ ಸರಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸಿದ್ಧಪಡಿಸಿದ 75 ಪೇಲೋಡ್‌ಗಳನ್ನು ಹೊಂದಿದೆ. ಒಂದೊಂದು ಪೇಲೋಡ್‌ಗಳ ತೂಕ ೫೦ ಗ್ರಾಂ ಮಾತ್ರ. ಗ್ರಾಮೀಣ ಭಾಗದ ಮಕ್ಕಳಿಗೆ ಪೇಲೋಡ್‌ ನಿರ್ಮಾಣದ ತರಬೇತಿಯನ್ನು ನೀಡಿ ಇವುಗಳನ್ನು ಸಿದ್ಧಪಡಿಸಲಾಗಿದೆ.
– ಈ ಪೇಲೋಡ್‌ಗಳಲ್ಲಿ ದೂರಗಾಮಿ ಟ್ರಾನ್ಸ್‌ಪಾಂಡರ್‌ಗಳು ಮತ್ತು ಸೆಲ್ಫಿ ಕ್ಯಾಮೆರಾಗಳಿವೆ. ಒಮ್ಮೆ ಇವು ನಿಗದಿತ ಕಕ್ಷೆಗೆ ಹೋದ ಬಳಿಕ ಅವುಗಳಿಂದ ಬರುವ ಸಂದೇಶಗಳನ್ನು ಸ್ವೀಕರಿಸುವ ಕೆಲಸವನ್ನು ಸ್ಪೇಸ್‌ ಕಿಡ್ಸ್‌ ಇಂಡಿಯಾದ ʻವಿದ್ಯಾರ್ಥಿ ತಂಡಗಳು ನಿಭಾಯಿಸಲಿವೆ.
– ವಿಶ್ವಸಂಸ್ಥೆಯ ಈ ವರ್ಷದ ಥೀಮ್‌ ಕೂಡ ʼಬಾಹ್ಯಾಕಾಶದಲ್ಲಿ ಮಹಿಳೆಯರುʼ. ಇದಕ್ಕೆ ಭಾರತ ಅಪೂರ್ವವಾಗಿ ಸ್ಪಂದಿಸಿದಂತಾಗಿದೆ.
– ಆಜಾದಿ ಸ್ಯಾಟ್‌ನ ಜತೆಗೆ ಇಒಎಸ್‌-೨ ಎಂಬ ಭೂಸರ್ವೇಕ್ಷಣಾ ಉಪಗ್ರಹವನ್ನು ಕೂಡಾ ಹಾರಿಬಿಡಲಾಗುತ್ತಿದೆ. ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಯ ಕೆಲಸಗಳಲ್ಲಿ ಸಹಕಾರ ನೀಡಲಿದೆ.
– ಈಗ ಹಾರಲು ಸಿದ್ಧವಾಗಿರುವ SSLVಯು 120 ಟನ್‌ ತೂಕವಿದ್ದು, 500 ಕಿಲೋ ಭಾರವನ್ನು ಹೊರಬಲ್ಲುದು. ಇದರ ಎತ್ತರ 34 ಮೀಟರ್.‌
– ಎಸ್‌ಎಸ್‌ಎಲ್‌ವಿ ೧೦ ಕೆಜಿಯಿಂದ ೧೫೦ ಕೆಜಿವರೆಗಿನ ಸಣ್ಣ, ಅತಿ ಸಣ್ಣ, ನ್ಯಾನೋ ಮತ್ತು ಮೈಕ್ರೋ ಉಪಗ್ರಹಗಳನ್ನು ಹಾರಿಬಿಡಲು ಅತ್ಯಂತ ಉಪಯುಕ್ತ ವಾಹಕವಾಗಿದೆ.
– ಸಣ್ಣ ಉಪಗ್ರಹ ಉಡಾವಣೆ ರಾಕೆಟ್‌ಗಳು ಭವಿಷ್ಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾತ್ರ ವಹಿಸಲಿವೆ. ಅಲ್ಪವೆಚ್ಚದ ಈ ವೆಹಿಕಲ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಿದ್ಧಪಡಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ.

Exit mobile version