Site icon Vistara News

Karnataka Election 2023: ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಗುಡ್‌ಬೈ

Karnataka Is Not Gujarat, Hubballi Is Not Ahmedabad; Jagadish Shettar Taunts BJP

ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗಾಗಿ ಪಟ್ಟುಹಿಡಿದಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ ಜತೆ ಬಿಜೆಪಿ ನಾಯಕರು ಶನಿವಾರ ರಾತ್ರಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ಭಾನುವಾರ (ಏ.16) ಬೆಳಗ್ಗೆ 10 ಗಂಟೆಗೆ ಬಿಜೆಪಿಗೆ ರಾಜೀನಾಮೆ ನೀಡಲು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ನಿರ್ಧಾರ ಮಾಡಿದ್ದಾರೆ.

ಹುಬ್ಬಳ್ಳಿಯ ನಿವಾಸದಲ್ಲಿ ಜಗದೀಶ್‌ ಶೆಟ್ಟರ್‌ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಬೊಮ್ಮಾಯಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್‌ ಜೋಶಿ ಅವರು ನಡೆಸಿದ ಮಾತುಕತೆ ವಿಫಲವಾಗಿದೆ. ಸಭೆ ಬಳಿಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ನಾನು ಯಾವತ್ತೂ ಹಠ ಮಾಡಿದವನಲ್ಲ. ನನಗೆ ಬೇಜಾರು ಆಗಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಶಿರಸಿಗೆ ಹೋಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಪತ್ರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ನನ್ನ ಕೆಟ್ಟ ದಿನಗಳಾಗಿವೆ. ಪಕ್ಷವನ್ನು ಕೆಳಮಟ್ಟದಿಂದ ಕಟ್ಟುವ ಕೆಲಸ ಮಾಡಿದ್ದೇನೆ. ಅಭ್ಯರ್ಥಿ ಸಿಗಲಾರದ ಸಂದರ್ಭದಲ್ಲಿ ಹುಡುಕಾಡಿ ಅಭ್ಯರ್ಥಿ ಮಾಡಿದ್ದೇನೆ. ತಾವು ಜನಸಂಘ, ಆರ್‌ಎಸ್‌ಎಸ್‌ ಮೂಲದವರಾಗಿದ್ದು, ಎಂದೂ ಪೂರ್ಣಾವಧಿ ಅಧಿಕಾರ ಸಿಕ್ಕಿಲ್ಲ. ಅಂತಹುದರಲ್ಲಿ ಉತ್ತಮ ಆಡಳಿತ ಕೊಡುವ ಕೆಲಸ ಮಾಡಿದ್ದೇನೆ. ಶಿಸ್ತುಬದ್ಧವಾಗಿ ನನ್ನ ರಾಜಕೀಯ ಜೀವನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

7ನೇ ಬಾರಿ ನಾನು ನಿಲ್ಲುತ್ತೇನೆ ಅಂದಾಗ ಹೈಕಮಾಂಡ್ ಮಾಡಿದ ಸಮೀಕ್ಷೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬಾರದಿದ್ದಾಗ ತೀವ್ರ ಆಘಾತವಾಗಿತ್ತು. ನನಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ, ಕರಪ್ಷನ್ ಚಾರ್ಜ್ ಇದೆಯಾ, ಸೆಕ್ಸ್ ಸ್ಕ್ಯಾಂಡಲ್ ಇದೆಯಾ ಅಂತ ನಾಯಕರನ್ನು ಕೇಳಿದ್ದೆ. ಯಾವುದಕ್ಕೂ ಸಮರ್ಪಕವಾಗಿ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡುವಂತೆ ಜಗದೀಶ್ ಶೆಟ್ಟರ್‌ ಪಟ್ಟು ಹಿಡಿದಿದ್ದರು. ಟಿಕೆಟ್‌ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ರಾಜೀನಾಮೆ ಘೋಷಣೆ ಮಾಡುವುದಾಗಿ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದರು. ಟಿಕೆಟ್‌ ಬಗ್ಗೆ ನಿರ್ಧಾರ ತಿಳಿಸುವಂತೆ ಜಗದೀಶ್‌ ಶೆಟ್ಟರ್‌, ಬಿಜೆಪಿ ಹೈಕಮಾಂಡ್‌ಗೆ ಶನಿವಾರ ರಾತ್ರಿ 8.30ಕ್ಕೆ ಡೆಡ್‌ಲೈಲ್‌ ನೀಡಿದ್ದರು. ಆದರೆ ಬಿಜೆಪಿ ನಾಯಕರು ನಡೆಸಿದ ಸಂಧಾನ ಸಭೆ ವಿಫಲವಾದ ಕಾರಣ ಅವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಧಾರವಾಡ ಸೆಂಟ್ರಲ್‌ ಶಾಸಕರಾಗಿರುವ ಜಗದೀಶ್‌ ಶೆಟ್ಟರ್‌ ಅವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿತ್ತು. ಅವರನ್ನು ಸ್ವಯಂ ನಿವೃತ್ತಿ ಘೋಷಿಸುವಂತೆ ಹೈಕಮಾಂಡ್‌ ಸೂಚಿಸಿತ್ತು. ಆದರೆ, ನಿವೃತ್ತಿ ಸ್ವೀಕರಿಸಲು ಒಪ್ಪದ ಜಗದೀಶ್‌ ಶೆಟ್ಟರ್‌ ಅವರು ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದರು. ಶನಿವಾರ ರಾತ್ರಿಯೊಳಗೆ ತಮಗೆ ಟಿಕೆಟ್‌ ನೀಡುವ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ರಾಜೀನಾಮೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು.

ಶೆಟ್ಟರ್‌ಗೆ ಅವರಿಗೆ ಆಫರ್‌ ಬಂದಿದೆಯಾ?

ಶನಿವಾರ ಸಂಜೆ ಮಾತನಾಡಿದ ಜಗದೀಶ್‌ ಶೆಟ್ಟರ್‌ ತಮ್ಮ ಹಳೇ ಮಾತುಗಳನ್ನೆ ಪುನರಾವರ್ತಿಸಿದ್ದರು. ಮುಂದಿನ ಒಂದು ಅವಧಿಗೆ ತನಗೆ ಅವಕಾಶ ಕೊಡಲೇಬೇಕು. ಬಿಜೆಪಿ ತನಗೆ ಸ್ಪರ್ಧೆಗೆ ಅವಕಾಶ ನೀಡದೆ ಇದ್ದರೂ ತಾನು ಕಣಕ್ಕಿಳಿಯುವುದು ಖಚಿತ ಎಂದು ತಿಳಿಸಿದ್ದರು.

ನನ್ನನ್ನು ಬಿಟ್ಟು ಬೇರೆ ಯಾರಿಗೇ ಅವಕಾಶ ನೀಡಿದರೂ ನಾನು ಒಪ್ಪುವುದಿಲ್ಲ. ಚುನಾವಣೆಯಲ್ಲಿ ನಾನೇ ಸ್ಪರ್ಧಿಸಬೇಕು, ನನ್ನ ಕುಟುಂಬದ ಬೇರೆ ಯಾರೋ ಸ್ಪರ್ಧಿಸುವುದೆಲ್ಲ ನಡೆಯಲ್ಲ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶೆಟ್ಟರ್‌ ಹೇಳಿದ್ದರು.

ಜಗದೀಶ್‌ ಶೆಟ್ಟರ್‌ ಅವರು ಮುಂದೆ ಪಕ್ಷೇತರನಾಗಿ ಕಣಕ್ಕಿಳಿಯುವ ಸಾಧ್ಯತೆ ಒಂದೆಡೆಯಾದರೆ ಇನ್ನೊಂದೆಡೆ ಕಾಂಗ್ರೆಸ್‌ಗೆ ಸೇರ್ಪಡೆಯಾದರೂ ಅಚ್ಚರಿ ಇಲ್ಲ ಎಂಬ ಮಾತೂ ಕೇಳಿಬರುತ್ತಿದೆ.

Exit mobile version