ಮೂಡಬಿದಿರೆ, ದಕ್ಷಿಣ ಕನ್ನಡ: ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದ್ದು, ಬಿಜೆಪಿಗೆ ಚುನಾವಣೆಯಲ್ಲಿ ಅತಿದೊಡ್ಡ ಅಸ್ತ್ರ ನೀಡಿದಂತಾಗಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಈ ವಿಷಯವನ್ನು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಜೈ ಬಜರಂಗಬಲಿ ಎಂದು ಘೋಷಣೆ ಮೊಳಗಿಸುವ ಮೂಲಕವೇ ಆರಂಭಿಸಿದರು. ಅಲ್ಲದೇ ತಮ್ಮ ಮಾತನ್ನೂ ಅವರು ಜೈ ಬಜರಂಗಬಲಿ ಎಂದು ಘೋಷಣೆ ಕೂಗುವ ಮೂಲಕವೇ ಪೂರ್ತಿ ಮಾಡಿದರು. ತುಳುವಿನಲ್ಲೂ ಅವರು ಮಾತನಾಡಿ, ಅವಳಿ ಜಿಲ್ಲೆಯ ಸಾಧು, ಸಂತರ ಹೆಸರನ್ನು ಸ್ಮರಿಸುವ ಮೂಲಕ ಜನರ ಮೆಚ್ಚುಗೆ ಕಾರಣವಾದರು(Karnataka Election 2023).
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಹೊಸ ಮತದಾರರು ಇದ್ದಾರೆ. 18 ವರ್ಷದ ಪೂರೈಸಿದ ಈ ಯುವಕರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಅವರು ನಮ್ಮ ದೇಶದ ಭವಿಷ್ಯ ಜತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಹಾಗಾಗಿ, ಹೊಸ ಮತದಾರರು ಕಾಂಗ್ರೆಸ್‌ಗೆ ವೋಟ್ ಮಾಡಿದರೆ, ಭವಿಷ್ಯವೇ ಹೊರಟು ಹೋಗಲಿದೆ. ನಿಮ್ಮ ಭವಿಷ್ಯ ಮತ್ತು ದೇಶದ ಭವಿಷ್ಯ ಉಜ್ವಲವಾಗಬೇಕಾದರೆ ಬಿಜೆಪಿಗೆ ಮತ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಪ್ರಧಾನಿ ಮೋದಿ ಭಾಷಣ
ಕಾಂಗ್ರೆಸ್‌ಗೆ ಶಾಂತಿ, ಸಮೃದ್ಧಿಯೇ ಬೇಕಾಗಿಲ್ಲ. ಅದು ಅಶಾಂತಿಯನ್ನು ಹುಟ್ಟು ಹಾಕುತ್ತದೆ. ಉಗ್ರರನ್ನು ಪೋಷಣೆ ಮಾಡುತ್ತದೆ. ತುಷ್ಟಿಕರಣ ನೀತಿಯನ್ನು ಅನುಸರಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ, ದೇಶಕ್ಕೆ ಆತಂಕವನ್ನು ಉಂಟು ಮಾಡಿದವರ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿತು. ಅಷ್ಟೇ ಅಲ್ಲೇ ಅವರನ್ನು ಸುಮ್ಮನೆ ಬಿಟ್ಟು ಬಿಟ್ಟಿತು ಎಂದು ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜಸ್ಥಾನದಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕರ ವಿಫಲವಾಗಿರುವ ಉದಾಹರಣೆಯನ್ನು ನೀಡಿದರು.
ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ
ಬಿಜೆಪಿಯು ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯವನ್ನಾಗಿ ಮಾಡಲು ಹೊರಟಿದೆ. ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವುದು ಬಿಜೆಪಿಯ ಪ್ರಯತ್ನವಾಗಿದೆ. ಆದರೆ, ಕಾಂಗ್ರೆಸ್ ಏನು ಮಾಡಲು ಹೊರಟಿದೆ ಅಂದರೆ, ದಿಲ್ಲಿಯಲ್ಲಿರುವ ರಾಜ ಕುಟುಂಬಕ್ಕೆ ಕರ್ನಾಟಕವನ್ನು ನಂ.1 ಎಟಿಎಂ ಮಾಡಲು ಹೊರಟಿದೆ. ಎಲ್ಲ ಯೋಜನೆಗಳಲ್ಲಿ ಶೇ.85ರಷ್ಟು ಕಮಿಷನ್ ಕಾಂಗ್ರೆಸ್ ಹೊಡೆಯಲಿದೆ. ಕರ್ನಾಟಕವನ್ನು ಹತ್ತು ವರ್ಷಗಳ ಹಿಂದಕ್ಕೆ ಒಯ್ಯಲಿದೆ. ಹಾಗಾಗಿ, ಕಾಂಗ್ರೆಸ್ ಬಗ್ಗೆ ಕರ್ನಾಟಕದ ಜನರು ಎಚ್ಚರದಿಂದ ಇರಬೇಕು ಎಂದು ಹೇಳಿದರು.