Site icon Vistara News

Jain Muni Murder : ಸರ್ಕಾರದಿಂದ ಪ್ರಮುಖ ಆರೋಪಿ ರಕ್ಷಣೆ; ಇಲ್ಲಿ ಕೊಲೆಯೂ ಫ್ರೀ ಎಂದ ಶಾಸಕ

Jain muni and Jain mutt

ಚಿಕ್ಕೋಡಿ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಅವರನ್ನು ಬರ್ಬರವಾಗಿ ಹತ್ಯೆ (Jain muni Murder) ಮಾಡಿರುವ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್‌ ಎಂಎಲ್‌ಸಿ ಪ್ರಕಾಶ್‌ ಹುಕ್ಕೇರಿ ತಿರುಗೇಟು ನೀಡಿದ್ದು, ಸೋಮವಾರ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ. ಇನ್ನು ಜೈನ ಮಠದಲ್ಲಿ ಸೂತಕ ಛಾಯೆ ಮೂಡಿದ್ದು, ಭಕ್ತಾದಿಗಳು, ಮಠದ ಸಿಬ್ಬಂದಿ, ಮಕ್ಕಳು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಬೆಳಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಜೈನಮುನಿಯ ಮೃತದೇಹವನ್ನು ಆಶ್ರಮಕ್ಕೆ ಹಸ್ತಾಂತರಿಸಲಾಗುತ್ತದೆ. ಈಗಾಗಲೇ ಜೈನಮುನಿಗಳು ಹಾಗೂ ರಾಜಕೀಯ ನಾಯಕರು ದಂಡು ದಂಡಾಗಿ ಜೈನಮಠಕ್ಕೆ ಭೇಟಿ ನೀಡುತ್ತಿದ್ದಾರೆ.

ಶಾಸಕ ಅಭಯ್ ಪಾಟೀಲ್ ಗಂಭೀರ ಆರೋಪ

ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ನಿಜವಾದ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ಆ ಆರೋಪಿಯ ಹೆಸರು ಹೇಳುತ್ತಿಲ್ಲ, ಕೇವಲ ‌ನಾರಾಯಣ ಮಾಳಿ ಹೆಸರನ್ನು ಮಾತ್ರ ಹೇಳುತ್ತಿದ್ದಾರೆ. ನಾರಾಯಣ ಮಾಳಿ ಪ್ರಕರಣದಲ್ಲಿ ಭಾಗಿಯಾಗಿರಬಹುದು. ಆದರೆ, ಪ್ರಮುಖ ಆರೋಪಿಯ ಹೆಸರನ್ನು ಸರ್ಕಾರ, ಪೊಲೀಸ್ ಇಲಾಖೆ ಹೇಳುತ್ತಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Anganawadi workers : ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಂಗನವಾಡಿ ಕಾರ್ಯಕರ್ತೆಯರು; ನಾಳೆ ರಾಜ್ಯಾದ್ಯಂತ ಪ್ರತಿಭಟನೆ

ಜೈನ ಆಶ್ರಮದ ಆವರಣದಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಅವರ ಕಟೌಟ್‌ ಅನ್ನು ನಿಲ್ಲಿಸಲಾಗುತ್ತಿದೆ.

ಮತ್ತೋರ್ವ ಪ್ರಮುಖ ಆರೋಪಿಯ ಹೆಸರು ಬಹಿರಂಗಪಡಿಸಬೇಕು. ಆತನ ವಿರುದ್ಧ ಕ್ರಮ ಆಗಬೇಕು. ಇಷ್ಟು ಕ್ರೂರ ಕೃತ್ಯವಾದ ಬಳಿಕವೂ ಸರ್ಕಾರ ಒಬ್ಬರನ್ನು ಉಳಿಸಿ ಒಂದು ಸಮುದಾಯಕ್ಕೆ ಅನುಕೂಲ ಮಾಡಿಕೊಡುವುದು ತಪ್ಪು. ನಾನು ಕೆಲವು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದೆ. ಹೀಗೆ ತನಿಖೆ ಮಾಡಬೇಕು ಎಂದು ನಮಗೆ ಮೇಲಿಂದ ಒತ್ತಡ ಇದೆ ಎಂದು ಹೇಳುತ್ತಿದ್ದಾರೆ. ಯಾರು ಅಂತಾ ಹೆಸರು ಕೇಳಿದರೆ ಅವರೂ ಬಾಯಿಬಿಡುತ್ತಿಲ್ಲ. ಇದು ಗಂಭೀರ ವಿಷಯವಾಗಿದೆ. ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಒಬ್ಬ ಆರೋಪಿ ಬಗ್ಗೆ ಮಾತ್ರವೇ ಹೇಳುತ್ತಿದ್ದಾರೆ. ಮತ್ತೋರ್ವ ಆರೋಪಿ ಬಗ್ಗೆ ಏಕೆ ಹೇಳುತ್ತಿಲ್ಲ? ಪ್ರಕರಣದಲ್ಲಿ ಇಬ್ಬರು ಇದ್ದಾಗ ಒಬ್ಬರದ್ದೇ ಹೆಸರು ಹೇಳುತ್ತಿದ್ದೀರಿ, ಇನ್ನೂ ಎಷ್ಟು ಜನ ಇದ್ದಾರೆ ಯಾರಿಗೆ ಗೊತ್ತು? ಎಂದು ಅಭಯ್‌ ಪಾಟೀಲ್‌ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗುತ್ತಿದೆ

ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡಬೇಕು. ಯಾರದ್ದೋ ಮಂತ್ರಿಗಳ ಮಾತು ಕೇಳಿ ಒತ್ತಡಕ್ಕೆ ಮಣಿಯಬಾರದು. ನೀವು ಮಾಳಿ ಹೆಸರು ಹೇಳುತ್ತಿದ್ದೀರಿ ಮತ್ತೊಬ್ಬನ ಹೆಸರು ಏಕೆ ಹೇಳೋಕಾಗುತ್ತಿಲ್ಲ? ಸರ್ಕಾರದ ಒತ್ತಡ ಇದೆ ಎಂದು ಅಧಿಕಾರಿಗಳು ಆಫ್ ದಿ ರೆಕಾರ್ಡ್ ಹೇಳುತ್ತಿದ್ದಾರೆ. ಆ ಅಧಿಕಾರಿಗಳದ್ದು ಬೇಕಿದ್ರೆ ಬ್ರೇನ್ ಮ್ಯಾಪಿಂಗ್ ಮಾಡಿ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಾಧು ಸಂತರಿಗೂ ಉಳಿಗಾಲ ಇಲ್ಲದ ಪರಿಸ್ಥಿತಿ ಎದುರಾಗಿದೆ. ಕೊಲೆಗಡುಕರಿಗೆ ಫ್ರೀ ಸರ್ಕಾರ ಇದು, ಎಲ್ಲವೂ ಫ್ರೀ.. ಕೊಲೆಯೂ ಫ್ರೀ.. ಎಂದು ಗಂಭೀರ ಆರೋಪವನ್ನು ಮಾಡಿರುವ ಶಾಸಕ ಅಭಯ್‌ ಪಾಟೀಲ್‌, ಒಬ್ಬನನ್ನು ಉಳಿಸಲು ಇಷ್ಟೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾಳೆ ಸದನದಲ್ಲಿ ಪ್ರಸ್ತಾಪಿಸುವೆ- ಎಂಎಲ್‌ಸಿ ಪ್ರಕಾಶ್‌ ಹುಕ್ಕೇರಿ

ಜೈನಮುನಿ ಹತ್ಯೆ ಪ್ರಕರಣ ಬಗ್ಗೆ ಸೋಮವಾರ (ಜುಲೈ 10) ಸದನದಲ್ಲಿ ಪ್ರಸ್ತಾಪಿಸುವೆ. ಮುನಿಗಳು ಶಾಂತಪ್ರಿಯರು ಆಗಿದ್ದರು. ಇಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಯಾರ ಸಹಾಯವನ್ನೂ ಪಡೆದಿಲ್ಲ. ಆಶ್ರಮದಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆ. ಶಾಸಕರು, ಸಂಸದರಿಗೆ ಅನುದಾನ ಕೊಡಬೇಕೆಂದು ಕೈ ಚಾಚಿಲ್ಲ. ಅವರಿಗೆ ಆಸ್ಪತ್ರೆ ಮಾಡುವ ಆಲೋಚನೆ ಇತ್ತು. ಗುರುಗಳ ಮೇಲೆ ಹಲ್ಲೆ ಆಗಬಾರದು. ನನ್ನ‌ 38 ವರ್ಷದ ರಾಜಕೀಯದಲ್ಲಿ ಆಗಿಲ್ಲ. ಈ ಬಗ್ಗೆ ಸಿಎಂ, ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಸೋಮವಾರ ಸದನದಲ್ಲಿಯೂ ಪ್ರಸ್ತಾಪ ಮಾಡುತ್ತೇನೆ ಎಂದು ಕಾಂಗ್ರೆಸ್ ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಹೇಳಿದರು.

ಯಾವುದೇ ಧರ್ಮ ಗುರುಗಳ ಮೇಲೆ ಹಲ್ಲೆ ಆಗಬಾರದು. ಎಲ್ಲ ಧರ್ಮದ ಗುರುಗಳಿಗೆ ರಕ್ಷಣೆ ಕೊಡಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮವಹಿಸಲು ಒತ್ತಾಯ ಮಾಡುತ್ತೇನೆ. ಇದು ಆಕಸ್ಮಿಕ ಘಟನೆ, ದುರ್ದೈವದ ಸಂಗತಿ. ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಿದೆ ಎಂಬ ಶಾಸಕ ಅಭಯ ಪಾಟೀಲ್ ಹೇಳಿಕೆ ಸರಿಯಲ್ಲ. ಆರೋಪ ಮಾಡಲು ಎಲ್ಲರಿಗೂ ಬರುತ್ತದೆ. ಯಾವುದೇ ಸರ್ಕಾರ ಇರಲಿ ಇಂತಹ ಘಟನೆಗೆ ಅವಕಾಶ ಕೊಡಬಾರದು. ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ? ಈಗಾಗಲೇ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಬೆಳಗಾವಿ ಎಸ್‌ಪಿ, ಡಿಎಸ್‌ಪಿ, ಸಿಪಿಐ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರೇ ಸ್ವತಃ ಘಟನಾ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದಾರೆ. ಅವರ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಹೇಳಿದರು.

ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ

ಮಧ್ಯಾಹ್ನ 1 ಗಂಟೆ ಸುಮಾರಿಗೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆಯನ್ನು ನೆರವೇರಿಸಲು ನಿರ್ಧರಿಸಲಾಗಿದೆ.. ಹಿರೇಕೋಡಿ ನಂದಿಪರ್ವತ ಆಶ್ರಮದ ಪಕ್ಕದ ಗದ್ದೆಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದ್ದು, ಕೊಲ್ಲಾಪುರ ನಾಂದನಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ, ವರೂರ್‌‌ನ ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳಿಂದ ಸ್ಥಳ ಪರಿಶೀಲನೆ ನಡೆದಿದೆ. ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು.

ಅಂತ್ಯ ಸಂಸ್ಕಾರ ಸಾಮಗ್ರಿಗಳನ್ನು ತರುತ್ತಿರುವ ಭಕ್ತರು

ಭಕ್ತರು ದಂಡು ದಂಡಾಗಿ ಆಶ್ರಮದತ್ತ ಆಗಮಿಸುತ್ತಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಬಳಸುವ ಸಾಮಗ್ರಿಗಳನ್ನು ತರುತ್ತಿದ್ದಾರೆ. ಕರ್ಪೂರ, ತುಪ್ಪ, ಖರ್ಜೂರ, ಹಾಲು, ಶ್ರಿಗಂಧ ಕಟ್ಟಿಗೆ, ವಿಧಿ ವಿಧಾನಕ್ಕೆ ಬಳಸುವ ಕೊಬ್ಬರಿಯನ್ನು ತರುತ್ತಿದ್ದಾರೆ.

ಇದನ್ನೂ ಓದಿ: Weather report : ರಾಜ್ಯದಲ್ಲಿ ಇನ್ನೆರಡು ದಿನ ಮುಂಗಾರು ಮಳೆಯ ಅಭಿಷೇಕ

ಕಣ್ಣೀರಾದ ಭಕ್ತರು, ಮಕ್ಕಳು

15 ವರ್ಷಗಳಿಂದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಅವರು ಸೇವೆ ಮಾಡಿಕೊಂಡಿದ್ದ ಸೇವಕಿ ಕುಸುಮಾ ಅಕ್ಷರಶಃ ಕಣ್ಣೀರಾಗಿದ್ದಾರೆ. ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ವಿಸ್ತಾರ ನ್ಯೂಸ್ ಕ್ಯಾಮರಾ ಮುಂದೆ ಆಗ್ರಹಿಸಿದ್ದಾರೆ. ಒಂದು ಇರುವೆಯನ್ನೂ ಸಹ ಸಾಯಿಸದ ಶ್ರೀಗಳಿಗೆ ಇಂತಹ ಸಾವು ಬಂದಿದ್ದಕ್ಕೆ ವ್ಯಥೆ ಪಟ್ಟಿದ್ದಾರೆ. ಕೊಲೆ ಆರೋಪಿ ನಾರಾಯಣ ಮಾಳಿಗೆ ಘೋರ ಶಿಕ್ಷೆ ನೀಡಬೇಕು. ಉತ್ತಮ ಕೆಲಸಗಾರ ಎಂದು ಕಾಮಕುಮಾರ ಸ್ವಾಮೀಜಿ ಬಳಿ ವಿಶ್ವಾಸ ಗಳಿಸಿದ್ದ. ಮಠದಲ್ಲಿದ್ದವರಿಗೆ ಮುನಿಗಳು ಹಣ ನೀಡುತ್ತಿದ್ದರು ಎಂದು ಹೇಳಿದರು. ಕೋವಿಡ್ ವೇಳೆ ಶಾಲೆಗಳು ಬಂದ್ ಆದಾಗ ಮಕ್ಕಳಿಗೆ ಜೈನಮುನಿಗಳೇ ಪಾಠ ಮಾಡಿದ್ದರು. ಹೀಗಾಗಿ ಮಕ್ಕಳೂ ಸಹ ಕಣ್ಣೀರು ಹಾಕುತ್ತಿದ್ದಾರೆ.

Exit mobile version