Site icon Vistara News

Jain Muni Murder : ಜು.10ಕ್ಕೆ ಜೈನರ ಮೌನ ಪ್ರತಿಭಟನೆ; ಸಿಬಿಐಗೆ ಕೊಡಿ ಎಂದ ಜೋಶಿ

Jain muni kamakumara nandi maharaj and pralhad joshi

ಬೆಳಗಾವಿ: ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ (Jain muni Murder) ಅವರ ಹತ್ಯೆ ಖಂಡಿಸಿ ಜುಲೈ 10ರ ಸೋಮವಾರದಂದು ಚಿಕ್ಕೋಡಿಯಲ್ಲಿ ಬೆಳಗ್ಗೆ 10 ಗಂಟೆಗೆ ಮೌನ ಪ್ರತಿಭಟನೆಗೆ ಕರೆ ನೀಡಲಾಗಿದೆ. ಅಂತ್ಯಕ್ರಿಯೆ ಬಳಿಕ ನಾಂದಣಿ ಮಠದ ಜಿನಸೇನ ಭಟ್ಟಾಚಾರ್ಯ ಸ್ವಾಮೀಜಿ ಈ ಕರೆ ನೀಡಿದ್ದು, ಮೆರವಣಿಗೆ ನಡೆಸಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ನಾಂದಣಿ ಮಠದ ಜಿನಸೇನ ಭಟ್ಟಾಚಾರ್ಯ ಸ್ವಾಮೀಜಿ, ಸೋಮವಾರ ಬೆಳಗ್ಗೆ 10 ಗಂಟೆಗೆ ಮೌನ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಕಾರಣ, ಜಿನಶಾಸನದ ಅದ್ಭುತ ಸೂರ್ಯ ಅಸ್ತವಾಗಿದೆ. ಹೀಗಾಗಿ ಆರ್‌ಡಿ ಹೈಸ್ಕೂಲ್ ಹತ್ತಿರ ಎಲ್ಲರೂ ಬರಬೇಕು. ನಮ್ಮ ಧ್ವನಿ ಸರ್ಕಾರಕ್ಕೆ ಮುಟ್ಟಬೇಕು. ಆಚಾರ್ಯ ಮಹಾರಾಜರ ಮೇಲೆ ಆದ ಆಘಾತ ಮತ್ತೆ ಯಾರ ಮೇಲೂ ಆಗಬಾರದು. ನಾವೆಲ್ಲರೂ ಜೈನ ಸಮಾಜದವರು ಮೌನ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Weather Report : ಕರಾವಳಿಯಲ್ಲಿ ತಗ್ಗಿತು ಮಳೆ ಅಬ್ಬರ; ನಾಳೆ ಇಲ್ಲಷ್ಟೇ ವರುಣಾರ್ಭಟ

ಜೈನ ಸಮಾಜ ಅಹಿಂಸಾ ಪ್ರಿಯ ಸಮಾಜವಾಗಿದೆ. ನಮ್ಮ ಸಮಾಜದ ಮೇಲೆ ದೊಡ್ಡ ಆಘಾತವಾಗಿ ಸಂಕಟ ಬಂದಿದೆ. ಮತ್ತೆ ಹೀಗೆ ಆಗಬಾರದು. ನಮ್ಮ ಸಮಾಜ ಅಷ್ಟೇ ಅಲ್ಲ ಯಾವ ಸಮಾಜ ಮೇಲೂ ಆಗಬಾರದು. ಮೌನ ಪ್ರತಿಭಟನೆ ಮೆರವಣಿಗೆ ಮಾಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಪೊಲೀಸರು, ಶಾಸಕರು ಎಲ್ಲರೂ ಕಷ್ಟಪಟ್ಟು ನಿಮ್ಮ ನಿಮ್ಮ ಕಾರ್ಯವನ್ನು ನಿರ್ವಹಿಸಿದ್ದೀರಿ. ಅದಕ್ಕೆ ನಮ್ಮ ಸ್ವಾಮೀಜಿಗಳ ಆಶೀರ್ವಾದ ಇದೆ. ಪೊಲೀಸರು ಬಹಳಷ್ಟು ಸಹಕಾರ ನೀಡಿದ್ದಾರೆ. ಮುಂದೆಯೂ ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಭಾವನೆ ಇದೆ ಎಂದು ಸ್ವಾಮೀಜಿ ಹೇಳಿದರು.

ರಾಜಕೀಯ ಮಾಡಬೇಡಿ: ಸವದಿ ಮನವಿ

ಜೈನಮುನಿಗಳ ಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಆಗುತ್ತಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿ, ಇದರಲ್ಲಿ ದಯವಿಟ್ಟು ಯಾರೂ ರಾಜಕಾರಣ ಮಾಡಬಾರದು. ಇದು ರಾಜಕಾರಣ ಪ್ರೇರಿತ ಘಟನೆ ಅಲ್ಲ. ಇದೊಂದು ಅಹಿತಕರ ಘಟನೆಯಾಗಿದೆ. ಇದನ್ನು ಪಕ್ಷಾತೀತವಾಗಿ ಖಂಡಿಸಬೇಕು. ಆರೋಪಿಗಳಿಗೆ ಶಿಕ್ಷೆ ನೀಡಲು ಎಲ್ಲರೂ ಕೈಜೋಡಿಸಬೇಕು. ಧರ್ಮ ನ್ಯಾಯಸಮ್ಮತ ಹೋರಾಟ ಮಾಡಬೇಕು. ಇಂತಹ ಘಟನೆ ಮುಂದೆ ಆಗಬಾರದು ಎಂಬ ಸಂದೇಶವನ್ನು ಇಡೀ ದೇಶಕ್ಕೆ ಕೊಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ವಿರೋಧ ಪಕ್ಷದ ನಮ್ಮ ಆತ್ಮೀಯ ಸ್ನೇಹಿತರಿಗೆ ನಾನು ಈ ಬಗ್ಗೆ ಕಿವಿಮಾತು ಹೇಳುತ್ತೇನೆ ಎಂದರು.

ಪ್ರಕರಣ ಸಿಬಿಐಗೆ ಕೊಡಿ: ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ಕಾಮಕುಮಾರ ನಂದಿ ಮಹಾರಾಜ್ ಸ್ವಾಮೀಜಿ ಹತ್ಯೆ ಖಂಡನೀಯ. ಅವರಿಗೆ ವಿದ್ಯುತ್ ಶಾಕ್ ಕೊಟ್ಟು, ಕೈ ಕಾಲು ಕತ್ತರಿಸಿ ಬೋರ್ವೆಲ್‌ನಲ್ಲಿ ಹಾಕಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ಕ್ರೂರ ಘಟನೆಯಾಗಿದೆ. ಜೈನ ಸನ್ಯಾಸಿಗಳು ಸರ್ವಸಂಗ ಪರೀತ್ಯಾಗಿಗಳು. ಅವರು ಕಾಣೆಯಾಗಿದ್ದಾರೆ ಅಂದ ಮೇಲೂ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡರು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯ ವರೂರು ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, ಜೈನಮುನಿಗಳು ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ದರು ಎಂಬ ಮಾಹಿತಿ ಇದೆ. ಆದರೆ, ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂದು ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಶಾಸಕ ಅಭಯ ಪಾಟೀಲ್ ಅವರು ಈ ವಿಷಯವನ್ನು ತೀವ್ರವಾಗಿ ತೆಗೆದುಕೊಂಡಾಗ ಹೆಸರು ಬಿಡುಗಡೆ ಮಾಡಿದರು. ಯಾರೇ ಮಾಡಿದರೂ ಇದು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರದ ನಿಲುವು ಸರಿಪಡಿಸಕೊಳ್ಳಬೇಕು. ಮುನಿಗಳ ಬೇಡಿಕೆಗಳನ್ನು ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ. ರಾಜ್ಯ ಸರ್ಕಾರಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ನಾನು ಕೇಂದ್ರ ಸರ್ಕಾರದಿಂದ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ

ಜೈನಮುನಿಗಳಿಗೆ ರಕ್ಷಣೆ ಸಿಗುವವರೆಗೂ ಆಮರಣ ಉಪವಾಸ ಮಾಡುವುದಾಗಿ ವರೂರು ನವಗ್ರಹ ತೀರ್ಥಕ್ಷೇತ್ರದ ಜೈನಮುನಿ ಗುಣಧರನಂದಿ‌ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ. ಅವರನ್ನು ಭೇಟಿಯಾಗಿ ಆಮರಣ ಉಪವಾಸವನ್ನು ಕೈಬಿಡಿ ಎಂದು ನಾನು ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನ್ಯಾಯ ಸಿಗದೆ ಇದ್ದಲ್ಲಿ ಎಲ್ಲರೂ ಕೂಡಿ ಪ್ರತಿಭಟನೆ ಮಾಡೋಣ ಎಂದು ಹೇಳಿದ್ದಾಗಿ ಪ್ರಲ್ಹಾದ್‌ ಜೋಶಿ ಹೇಳಿದರು.

Exit mobile version