Site icon Vistara News

Swabhimani hindu | ರಾಹುಲ್‌ ಮೌನ ಯಾಕೆ, ಸಿದ್ದು ನುಣುಚಿಕೊಳ್ಳೋದ್ಯಾಕೆ, ಮಾತಾಡ್ಲಿ: ಸವಾಲು ಹಾಕಿದ ಸಿಎಂ

ಚಿಕ್ಕೋಡಿ: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ಹಿಂದು ವಿರೋಧಿ ಹೇಳಿಕೆಗೆ ಸಂಬಂಧಿಸಿ ರಾಹುಲ್‌ ಗಾಂಧಿ ಅವರು ಯಾಕೆ ಮೌನವಾಗಿದ್ದಾರೆ? ಸಿದ್ದರಾಮಯ್ಯ ಅವರು ಯಾಕೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳಿದ್ದಾರೆ. ಅವರು ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಜನಸಂಕಲ್ಪ ಯಾತ್ರೆಗಾಗಿ ರಾಯಭಾಗಕ್ಕೆ ಆಗಮಿಸಿದ ಅವರು ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸ್‌ನ ಗೊಂದಲ, ದ್ವಂದ್ವ ಸಿದ್ಧಾಂತಗಳು ಇದರ ಮೂಲಕ ಮತ್ತಷ್ಟು ಸ್ಪಷ್ಟವಾಗಿದೆ ಎಂದರು.

ʻʻಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂದೆ ಪಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರಂತೂ ನುಣುಚಿಕೊಳ್ಳುತ್ತಿದ್ದಾರೆ. ಸತೀಶ್‌ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಹಾಗಿದ್ದರೆ ಸತೀಶ್‌ ಹೇಳಿಕೆ ಹಿಂಪಡೆಯಲು ಒಪ್ಪದಿದ್ದರೆ ಪಕ್ಷ ಅವರ ಮೇಲೆ ಕ್ರಮ ಕೈಗೊಳ್ಳಲಿ. ಇಲ್ಲವೇ ಸತೀಶ್‌ ಹೇಳಿಕೆಯನ್ನು ಪಕ್ಷದ್ದು ಎಂದು ಒಪ್ಪಿಕೊಳ್ಳಲಿ. ಎರಡೂ ವಿಚಾರವನ್ನು ಏಕಕಾಲದಲ್ಲಿ ಸಮರ್ಥಿಸಲು ಸಾಧ್ಯವಿಲ್ಲʼʼ ಎಂದು ಬೊಮ್ಮಾಯಿ ಹೇಳಿದರು. ಕಾಂಗ್ರೆಸ್‌ನಲ್ಲಿ ಯಾಕಿಷ್ಟು ಅಸ್ಪಷ್ಟತೆ, ಗೊಂದಲ ಇದೆ ಎಂದು ಗೊತ್ತಾಗುತ್ತಿಲ್ಲ. ಅದು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಬೊಮ್ಮಾಯಿ ನುಡಿದರು.

ರಾಹುಲ್‌ ದ್ವಂದ್ವ ನಿಲುವು
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಆದರೆ, ಇನ್ನೊಂದು ಕಡೆ ಇಂಥ ಧರ್ಮ ವಿರೋಧಿ ಹೇಳಿಕೆಗಳು ಬಂದಾಗ ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂದು ಹೇಳಿದರು ಬೊಮ್ಮಾಯಿ. ಈ ರೀತಿಯ ದ್ವಂದ್ವ ನಿಲುವುಗಳು ಪಕ್ಷಕ್ಕೆ ಮತ್ತು ದೇಶಕ್ಕೆ ಸರಿಯಲ್ಲ ಎಂದರು.

ಕಾಂಗ್ರೆಸ್‌ ನಡೆ ಮೇಲೆ ನಿಂತಿದೆ
ನಾವು ಈಗ ಈ ಪ್ರಕರಣವನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವುದು ಮುಖ್ಯವಲ್ಲ. ಕಾಂಗ್ರೆಸ್‌ನವರು ಇದನ್ನು ಹೇಗೆ ಮುಂದುವರಿಸುತ್ತಾರೆ ಎನ್ನುವುದು ಮುಖ್ಯವಾಗಿದೆ. ಒಂದು ನೂರು ವರ್ಷದ ಹಳೆ ಪಾರ್ಟಿ ಹೀಗೆ ನಡೆದುಕೊಳ್ಳುತ್ತದೆ ಎನ್ನುವುದನ್ನು ಜನರೂ ಕಾದು ನೋಡುತ್ತಿದ್ದಾರೆ ಎಂದರು ಬೊಮ್ಮಾಯಿ.

ʻʻಕಾಂಗ್ರೆಸ್‌ ಯಾವಾಗಲೂ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುತ್ತಿದೆ. ಭಾರತವನ್ನು ಗೊಂದಲದಲ್ಲಿಟ್ಟು ಆಳಬೇಕು ಎನ್ನುವ ಅದರ ಮೂಲ ಸಿದ್ದಾಂತ ಮತ್ತೊಮ್ಮೆ ಪ್ರಕಟವಾಗಿದೆ.

ʻʻಸತೀಶ್‌ ಜಾರಕಿಹೊಳಿ ಅವರು ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಲಿ. ಅವೇ ಪುರಾವೆಗಳೇ ಸಾಕ್ಷಿಗಳಾಗುತ್ತವೆ. ಯಾವುದಾದರೂ ಒಂದು ಗಟ್ಟಿ ಪುರಾವೆ ಬೇಕಲ್ವಾʼʼ ಎಂದು ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ʻʻಇಂಟರ್ ನೆಟ್‌ನಲ್ಲಿ ಹತ್ತು ಹಲವಾರು ವಿಚಾರ, ಲೇಖನಗಳು ಇರುತ್ತವೆ. ಅವುಗಳಿಗೆ ಏನು ಆಧಾರ ಎನ್ನುವುದು ಮುಖ್ಯ. ಎಲ್ಲದಕ್ಕೂ ಪರ ವಿರೋಧ ಇದ್ದೇ ಇರುತ್ತದೆ. ಪೂರಕ ಆಧಾರವೇ ಮುಖ್ಯ ಎಂದು ಹೇಳಿದರು ಸಿಎಂ. ಸಾರ್ವಜನಿಕ ಜೀವನದಲ್ಲಿ ನಾವು ಅರಿವಿನಿಂದ ನಡೆಯಬೇಕು ಎಂದ ಸಿಎಂ ಕಿವಿ ಮಾತು ಹೇಳಿದರು.

ಸತೀಶ್ ಜಾರಕಿಹೊಳಿಯವರು ಹಿಂದೂ ಪದದ ಕುರಿತು ಚರ್ಚೆಗೆ ಆಹ್ವಾನ ನೀಡಿದ ಬಗ್ಗೆ ಹೇಳಿದ ಅವರು, ಅವರ ಅಧಾರಗಳೇ ಅತ್ಯಂತ ಅಸಂಗತವಾಗಿವೆ. ಅದು ಹೇಗೆ ತಪ್ಪು ಎನ್ನುವುದನ್ನು ಟಿವಿ ಮಾಧ್ಯಮದಲ್ಲಿ ತೋರಿಸಿದ್ದಾರೆ. ಟಿವಿಗಳಲ್ಲೂ ಹಿಂದು ಪದ ಉತ್ಪತ್ತಿ ಬಗ್ಗೆ ವಿಷಯ ಪರಿಣತರು ಹೇಳುತ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲದಿದ್ದರೆ ಮುಂದೆ ಅನುಭವಿಸುತ್ತಾರೆ ಎಂದರು ಬೊಮ್ಮಾಯಿ.

ಇದನ್ನೂ ಓದಿ | Swabhimani hindu | ಸತೀಶ್‌ ಜಾರಕಿಹೊಳಿ ಹೇಳಿಕೆಗೆ ರಾಹುಲ್‌, ಸಿದ್ದರಾಮಯ್ಯ ಸಮ್ಮತಿಯೇ?: ಬೊಮ್ಮಾಯಿ ಪ್ರಶ್ನೆ

Exit mobile version