ಮೈಸೂರು: “ಗೆಲ್ಲುವ ವಿಶ್ವಾಸವಿದ್ದರೆ ಮಾತ್ರ ಬಿ ಫಾರಂ ಪಡೆದುಕೊಳ್ಳಿ. ಇಲ್ಲದಿದ್ದರೆ ಸುಖಾ ಸುಮ್ಮನೆ ಹಣ ಏಕೆ ನಷ್ಟ ಮಾಡಿಕೊಳ್ಳುತ್ತೀರಿ. ನನಗೆ ಗೆಲುವು ಬಹಳ ಮುಖ್ಯ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಯು ಜೆಡಿಎಸ್ ಕಾರ್ಯಾಗಾರದಲ್ಲಿ (JDS Workshop) ಸಂಚಲನ ಮೂಡಿಸಿದೆ.
ಮೈಸೂರಿನಲ್ಲಿ ನಡೆದ ಎರಡು ದಿನದ ಜೆಡಿಎಸ್ ಕಾರ್ಯಾಗಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಒಮ್ಮತದ ಪಾಠ ಮಾಡಲಾಗಿದೆ. ಎಲ್ಲೂ ಗೊಂದಲ, ಸಮಸ್ಯೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಗೆಲುವಿನ ಮಂತ್ರವನ್ನು ಜಪಿಸಲಾಗಿದೆ. ಅಲ್ಲದೆ, ಖುದ್ದು ತಾವೂ ಬೆಂಬಲವಾಗಿ ನಿಲ್ಲುವುದಾಗಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಭಯ ನೀಡಿದರು. ಈ ಮೂಲಕ ಎರಡು ದಿನದ ಜೆಡಿಎಸ್ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡವು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವತಃ ಟಿಪ್ಸ್ ನೀಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಹ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ವೇಳೆ ಎಲ್ಲ ಜಿಲ್ಲೆಗಳ ಹುರಿಯಾಳುಗಳ ಜತೆ ಮಹತ್ವದ ಚರ್ಚೆ ನಡೆಸಲಾಯಿತು.
ಜೆಡಿಎಸ್‌ನ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಕೊನೇ ದಿನವಾದ ಗುರುವಾರ (ಅ.೨೦) ಅಭ್ಯರ್ಥಿಗಳಿಗೆ ಚುನಾವಣಾ ಪಾಠ ಮಾಡಲಾಗಿದೆ. ಜಿಲ್ಲಾವಾರು ಕ್ಷೇತ್ರಗಳ ಅಭ್ಯರ್ಥಿಗಳ ಸಭೆ ನಡೆಸಿ, ಪ್ರತಿ ಅಭ್ಯರ್ಥಿಯ ಅಭಿಪ್ರಾಯ, ಮನವಿ ಆಲಿಸಲಾಗಿದೆ. ಅಲ್ಲದೆ, ಅವರಿಗೆ ಕೆಲವು ಖಡಕ್ ಸೂಚನೆಗಳನ್ನೂ ನೀಡಲಾಗಿದೆ.
ಇದನ್ನೂ ಓದಿ | ಜಿ.ಟಿ. ದೇವೇಗೌಡ ಮನೆ ಬಾಗಿಲಿಗೆ ಎಚ್.ಡಿ. ದೇವೇಗೌಡ; ಕಾಲಿಗೆ ಬಿದ್ದು ಕಣ್ಣೀರಿಟ್ಟ ಜಿಟಿಡಿ, ಮುಗಿದ ಮುನಿಸು
ಗೆಲ್ಲುವ ವಿಶ್ವಾಸವಿದ್ದರೆ ಮಾತ್ರ ಬಿ ಫಾರಂ ಪಡೆಯಿರಿ
2023ರ ವಿಧಾನಸಭೆ ಚುನಾವಣೆ ನಿರ್ಣಾಯಕವಾಗಿದ್ದು, ಯಾರೂ ಸಹ ನಿರ್ಲಕ್ಷ್ಯ ಮಾಡಬಾರದು. ನೋಡೋಣ, ಮಾಡೋಣ ಎಂಬ ಮಾತೇ ಇಲ್ಲ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದ್ದರೆ ಮಾತ್ರ ಬಿ ಫಾರಂ ಪಡೆದುಕೊಳ್ಳಿ. ಇಲ್ಲದಿದ್ದರೆ ಸುಖಾ ಸುಮ್ಮನೆ ಹಣ ಏಕೆ ನಷ್ಟ ಮಾಡಿಕೊಳ್ಳುತ್ತೀರಿ. ನನಗೆ ಚುನಾವಣಾ ಫಲಿತಾಂಶ ಮುಖ್ಯ ಎಂದು ನೇರ ನುಡಿಗಳಲ್ಲಿ ಹೇಳಿದರು.
ಗೊಂದಲ ಮಾಡಿಕೊಳ್ಳದಿರಲು ತಾಕೀತು
ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶ ಪಕ್ಷಕ್ಕೆ ಇದ್ದು, ಯಾವುದೇ ಕಾರಣಕ್ಕೂ ಸಮಸ್ಯೆ ಆಗಬಾರದು. ಸಮಸ್ಯೆ ಮಾಡುವ ಪ್ರವೃತ್ತಿಯನ್ನು ಸಹಿಸುವ ಪ್ರಶ್ನೆ ಇಲ್ಲ ಎಂದು ಎಚ್ಚರಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಡಾಫೆ ಮಾಡದೆ ಗೆಲುವಿನ ಕಡೆ ಹೆಚ್ಚು ಗಮನಹರಿಸುವಂತೆ ತಿಳಿಸಿದರು.
ಎರಡನೇ ದಿನದ ಕಾರ್ಯಾಗಾರದಲ್ಲೂ ಹಾಲಿ ಶಾಸಕರು, ಮುಂಬರುವ ಚುನಾವಣೆ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಕೇಂದ್ರೀಕರಿಸಿ ಮಾತನಾಡಿದ ಎಚ್‌ಡಿಕೆ, ಪ್ರತಿಯೊಂದು ಕ್ಷೇತ್ರವೂ ಬಹಳ ಮುಖ್ಯ. ಗೆಲ್ಲುವ ಅವಕಾಶದಿಂದ ಕೈಚೆಲ್ಲಿ ಕೂರಬೇಡಿ ಎಂದು ನೀತಿ ಪಾಠ ಮಾಡಿದರು. ಅಲ್ಲದೆ, ತಮಗೆ ಗೆಲುವು ಎಷ್ಟು ಮುಖ್ಯ ಎಂಬುದನ್ನೂ ಮನವರಿಕೆ ಮಾಡಿಕೊಟ್ಟರು.
ಚುನಾವಣೆ ಗೆಲ್ಲಲು ಏನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಕೇಳಿ ಮಾರ್ಗದರ್ಶನ ಮಾಡುತ್ತೇನೆ. ಆದರೆ, ಹುಡುಗಾಟಿಕೆ ಆಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಅವರು ಕೊಡುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ದೇವೇಗೌಡರು ಸೂಚನೆ ಕೊಟ್ಟರು.
ಪ್ರಶೋತ್ತರ ಮತ್ತು ಪ್ರತ್ಯೇಕ ಚರ್ಚೆ
ಗುರುವಾರದ ಕಾರ್ಯಾಗಾರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭಾಗವಹಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಸಭೆಯಲ್ಲಿ ಪಾಲ್ಗೊಂಡಿದ್ದ ಗೌಡರು, ಪ್ರತಿ ಜಿಲ್ಲೆಯ ಆಯಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಮಾತನಾಡಿ ಎಲ್ಲ ಅಭ್ಯರ್ಥಿಗಳಲ್ಲಿ ವಿಶ್ವಾಸ ತುಂಬಿದರು. ಪ್ರತಿಯೊಬ್ಬರಿಗೂ ಮಾರ್ಗದರ್ಶನ ಮಾಡಿದರು.
ಉಳಿದಂತೆ, ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆದ ವಿಶೇಷ ಕಾರ್ಯಾಗಾರ ಯಶಸ್ವಿಯಾಗಿದೆ. ಬೆಂಗಳೂರಿನ ಬಿಡದಿಯ ಕೇತಗಾನಹಳ್ಳಿಯ ಕಾರ್ಯಾಗಾರದ ನಂತರ ಇದು ಎರಡನೇ ಕಾರ್ಯಗಾರವಾಗಿತ್ತು. ಈ ಕಾರ್ಯಾಗಾರದಲ್ಲಿ ಪ್ರಮುಖವಾಗಿ ಪಂಚರತ್ನ ರಥಯಾತ್ರೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ನವೆಂಬರ್ 1ರಂದು ಪಂಚರತ್ನ ರಥಯಾತ್ರೆ ಮುಳಬಾಗಿಲು ತಾಲೂಕಿನಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಮಾಡುವ ಮೂಲಕ ಅಂದು ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ವೇದಿಕೆ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇದ್ದರು.
ಇದನ್ನೂ ಓದಿ | Election 2023 | ಮುಂದಿನ ಚುನಾವಣೆಯಲ್ಲಿ 40 ಸೀಟು ಬಂದರೆ ನಾನು ಸಿಎಂ ಆಗಲ್ಲ: ಎಚ್.ಡಿ. ಕುಮಾರಸ್ವಾಮಿ