ನವ ದೆಹಲಿ: ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ನೇಮಕ ಮಾಡಿದ್ದಾರೆ.
ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ರಿತುರಾಜ್ ಆವಸ್ಥಿ ಅವರು ಜುಲೈ 7ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅಲೋಕ್ ಆರಾಧೆ ಅವರು ಜುಲೈ 3ರಿಂದಲೇ ಹಂಗಾಮಿ ಮುಖ್ಯ ನಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಲೋಕ್ ಆರಾಧೆ ಅವರು ಮಧ್ಯಪ್ರದೇಶದ ರಾಯ್‌ಪುರದಲ್ಲಿ 1964ರಲ್ಲಿ ಜನಿಸಿದರು. ಬಿಎಸ್‌ಸಿ, ಎಲ್‌ಎಲ್‌ಬಿ ವಿದ್ಯಾಭ್ಯಾಸದ ನಂತರ 1988ರಿಂದ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದರು. ಸಿವಿಲ್, ಸಾಂವಿಧಾನಿಕ, ವ್ಯಾಜ್ಯ ಹಾಗೂ ಕಂಪನಿ ವಿಚಾರಗಳ ಪ್ರಕರಣಗಳನ್ನು ನಿರ್ವಹಿಸಿದರು. 2007ರಲ್ಲಿ ಹಿರಿಯ ವಕೀಲರಾದರು. ಎಂ.ಪಿ. ಜೈನ್ ಅವರ ಪ್ರಸಿದ್ಧ ಕಾನೂನು ಪುಸ್ತಕ ಪ್ರಿನ್ಸಿಪಲ್ಸ್ ಆಫ್ ಅಡ್ಮಿನಿಸ್ಟ್ರೇಟಿವ್ ಲಾ ಕೃತಿಯ ಐದು ಹಾಗೂ ಆರನೇ ಆವೃತ್ತಿಯನ್ನು ನ್ಯಾ. ಜಿ.ಪಿ. ಸಿಂಗ್ ಅವರ ಜತೆಗೂಡಿ ಪರಿಷ್ಕರಣೆ ಮಾಡಿದರು.
ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಅತಿಥಿ ಪ್ರಾಧ್ಯಾಪಕರಾಗಿಯೂ ಇದ್ದ ಆರಾಧೆ ಅವರು 2009ರ ಡಿಸೆಂಬರ್ 29ರಂದು ಮಧ್ಯಪ್ರದೇಶ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದರು. 2016ರಲ್ಲಿ ಜಮ್ಮು ಕಾಶ್ಮೀರ ಹೈಕೋರ್ಟ್‌ಗೆ ವರ್ಗಾವಣೆಯಾದರು.
ಜಮ್ಮು ಕಾಶ್ಮೀರ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ ಜಮ್ಮು ಕಾಶ್ಮೀರ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2018ರ ಮೇ 11ರಂದು ಜಮ್ಮು ಕಾಶ್ಮೀರ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ನೇಮಕವಾದರು. 2018ರ ನವೆಂಬರ್ 17ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.