ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವನ್ನು (Kannada Rajyotsava) ಸಡಗರ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ಮಾಡಲಾಯಿತು. ವಿವಿಧ ಕನ್ನಡ ಪರ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ ಮೂಲಕ ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದವು.
ಸಕ್ಕರೆನಾಡಿನಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿ
ಸಕ್ಕರೆನಾಡು ಮಂಡ್ಯದಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿ ಇದ್ದಾನೆ. ಈ ಕನ್ನಡಾಭಿಮಾನಿಯ ಅಭಿಮಾನಕ್ಕೆ ಈತನ ಹಳದಿ ಮತ್ತು ಕೆಂಪು ಬಣ್ಣದ ಮನೆಯೇ ಸಾಕ್ಷಿ. ಹೀಗಾಗಿ ಈತನಿಗೆ ಬಣ್ಣದಮನೆ ಶಿವನಂಜು ಎಂದೇ ಜನರು ಕರೆಯುತ್ತಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ ಶಿವನಂಜುವಿನ ಮನೆಯಲ್ಲಿ ಕನ್ನಡಾಂಬೆಗೆ ಗರ್ಭಗುಡಿ ನಿರ್ಮಾಣ ಮಾಡಿದ್ದು, ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಮನೆಯಲ್ಲಿ ಕನ್ನಡ ಸಾಹಿತ್ಯದ ಕಂಪು ಹರಡುವ ಕನ್ನಡದ ಕವಿಗಳ ಭಾವಚಿತ್ರಗಳಿವೆ. ಈ ಮನೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡಾಭಿಮಾನಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ.
ಕೊಪ್ಪಳದಲ್ಲಿ ಉಸ್ತುವಾರಿ ಸಚಿವ ಆನಂದಸಿಂಗ್ ಧ್ವಜಾರೋಹಣ
ಕೊಪ್ಪಳ: ಜಿಲ್ಲಾಡಳಿತದಿಂದ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದರು. ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಬಳಿಕ ತೆರೆದ ಅಲಂಕೃತ ವಾಹನದಲ್ಲಿ ತೆರಳಿ ಪರೇಡ್ ವೀಕ್ಷಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಸುಂದರೇಶಬಾಬು, ಜಿಪಂ ಸಿಇಒ ಫೌಜಿಯಾ ತರನ್ನುಮ್ ಮತ್ತಿತರರು ಭಾಗವಹಿಸಿದ್ದರು.
ಮೈಸೂರು ಅರಮನೆ ಆವರಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ
ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಜಗತ್ಪ್ರಸಿದ್ಧ ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ. ರಾಮದಾಸ್, ಎಂಎಲ್‌ಇ ಸಿ.ಎನ್.ಮಂಜೇಗೌಡ ಸೇರಿ ಮತ್ತಿತರ ಉಪಸ್ಥಿತರಿದ್ದರು.
ಕನ್ನಡಾಂಬೆಗೆ ಸಚಿವ ಶ್ರೀರಾಮುಲು ಪುಷ್ಪನಮನ
ಬಳ್ಳಾರಿ: ನಗರದ ಮುನಿಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಶ್ರೀರಾಮುಲು ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಹಂಪಿಯಿಂದ ಕನ್ನಡ ಪರ ಸಂಘಟನೆಗಳು ತಂದಿದ್ದ ಕನ್ನಡ ಜ್ಯೋತಿ ಹಸ್ತಾಂತರದ ಬಳಿಕ ಸಚಿವ ಶ್ರೀರಾಮುಲು ರಾಜ್ಯೋತ್ಸವದ ಶುಭಾಶಯ ಕೋರಿದರು. ಶಾಸಕ ಸೋಮಶೇಖರ್ ರೆಡ್ಡಿ, ಸಂಸದ ದೇವೇಂದ್ರಪ್ಪ ಉಪಸ್ಥಿತರಿದ್ದರು.
ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ
ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್.ಪಿ.ರಾಹುಲ್ ಕುಮಾರ್, ಜಿಪಂ ಸಿ.ಇ.ಒ ವಿದ್ಯಾಕುಮಾರಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಸೇರಿ ಹಲವರು ಭಾಗಿಯಾಗಿದ್ದರು.
ಯಾದಗಿರಿಯಲ್ಲಿ ಸ್ಥಬ್ದ ಚಿತ್ರಗಳ ಮೆರವಣಿಗೆ
ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್ ಪಡೆಯಿಂದ ಗೌರವಂದನೆ ಸ್ವೀಕರಿಸಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಸ್ತಬ್ದಚಿತ್ರಗಳ ಮೆರವಣಿಗೆ ನಡೆಸಲಾಯಿತು.
ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆಯೊಂದಿಗೆ ಧ್ವಜಕ್ಕೆ ಗೌರವ ಸಮರ್ಪಣೆ
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆಯೊಂದಿಗೆ ಧ್ವಜಕ್ಕೆ ಗೌರವ ಸಮರ್ಪಣೆ ಮಾಡಲಾಯಿತು. ಜಿಲ್ಲಾಧಿಕಾರಿ ಎಂ.ಎಸ್ ಅರ್ಚನ, ಎಸ್‌ಪಿ ಹರಿರಾಂ ಶಂಕರ್ ಇದ್ದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.
ಕಾರವಾರದಲ್ಲಿ ಕನ್ನಡ ಹಬ್ಬದ ಸಂಭ್ರಮ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿದರು. ಡಿಎಆರ್, ನಾಗರಿಕ ಪೊಲೀಸ್, ಅರಣ್ಯ ಇಲಾಖೆ, ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ, 18ನೇ ನೇವಲ್ ಕರ್ನಾಟಕ ಎನ್‌ಸಿಸಿ, 29ನೇ ಕರ್ನಾಟಕ ನೇವಲ್ ಎನ್‌ಸಿಸಿ ಸೇರಿ 13 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಶಾಸಕಿ ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಇಒ ಪ್ರಿಯಾಂಗಾ.ಎಂ, ಎಸ್‌ಪಿ ಸುಮನ ಪೆನ್ನೇಕರ್, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ನೂರಾರು ಮಂದಿ ಸಾರ್ವಜನಿಕರು ಭಾಗಿಯಾಗಿದ್ದರು.
ಕೋಲಾರದಲ್ಲಿ ಮೂರು ದಿನಗಳ ರಾಜ್ಯೋತ್ಸವಕ್ಕೆ ಸಚಿವ ಮುನಿರತ್ನ ಚಾಲನೆ
ಕೋಲಾರ: ಗಡಿನಾಡು ಕೋಲಾರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡುವ ಮೂಲಕ ಸಚಿವ ಮುನಿರತ್ನ ಚಾಲನೆ ನೀಡಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಹತ್ತಾರು ಕಲಾ ತಂಡಗಳು ಭಾಗಿಯಾಗಿದ್ದವು. ಸ್ತಬ್ದಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಬಾರಿ ವಿಶೇಷವಾಗಿ ಜಿಲ್ಲಾಡಳಿತದಿಂದ ಮೂರು ದಿನಗಳ ಕಾಲ ಕನ್ನಡ ಹಬ್ಬ ಆಚರಣೆ ಮಾಡಲಾಗುತ್ತಿದೆ. ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್‌ಪಿ ದೇವರಾಜ್ ಉಪಸ್ಥಿತರಿದ್ದರು.
ಹಚ್ಚೇವು ಕನ್ನಡದ ದೀಪ ಗೀತೆ ಹಾಡಿದ ಶಶಿಕಲಾ ಜೊಲ್ಲೆ
ವಿಜಯನಗರ: ಹೊಸಪೇಟೆ ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ವೇದಿಕೆ ಮೇಲೆ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಸಚಿವೆ ಹಾಡಿದರು. ಪೊಲೀಸರು, ಗ್ರಾಮ ಕಾಯಕ ಮಿತ್ರರು, ಪೌರ ಕಾರ್ಮಿಕರಿಂದ ಪರೇಡ್ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ಡಿಸೆಂಬರ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ
ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಕನ್ನಡ ಕೆಲವರಿಗೆ ಸ್ವಾರ್ಥದ ಬಳಕೆಯ ವಿಷಯವಾಗಿರಬಹುದು. ಆದರೆ, ನಮ್ಮ ಸರ್ಕಾರ ಕನ್ನಡಕ್ಕೆ ಹಲವು ಕೊಡುಗೆ ನೀಡಿದೆ. ಸಾಹಿತ್ಯ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಕೊಡುಗೆ ಬಹಳ ಇದೆ. ಡಿಸೆಂಬರ್ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸರ್ಕಾರ ಮಂಡಿಸಲಿದೆ. ಸಾರ್ವಜನಿಕರು ಇದರ ಬಗ್ಗೆ ಅಭಿಪ್ರಾಯ ತಿಳಿಸಬೇಕಿದೆ ಎಂದರು.
ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕೋಟಿ ಜನ ಭಾಗವಹಿಸಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಒಂದು ಭಾಷೆಗೆ ಜನರು ನೀಡಿದ ಅಭೂತಪೂರ್ವ ಬೆಂಬಲವಾಗಿದೆ. ಕನ್ನಡಕ್ಕೆ ನೀಡಿರುವ ಶಾಸ್ತ್ರೀಯ ಸ್ಥಾನಮಾನಕ್ಕೆ ಇನ್ನೂ ಅನುದಾನ ಬೇಕಿದೆ. ಮೈಸೂರು ಕೇಂದ್ರವಾಗಿ ಶಾಸ್ತ್ರೀಯ ಅಧ್ಯಯನ ನಡೆಯಲಿದೆ. ಹೊಸ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ.
ಅಮೃತ ಶಾಲೆ ಮೂಲಕ ಗಣಿತ ಹಾಗೂ ವಿಜ್ಞಾನ ಕಲಿಕೆಗೆ ಒತ್ತು ನೀಡಲಾಗಿದೆ. ಗಡಿ ಜಿಲ್ಲೆಯಲ್ಲಿ 21 ಕೋಟಿ ವೆಚ್ಚದಲ್ಲಿ ಗಡಿ ಗ್ರಾಮದ ಅಭಿವೃದ್ಧಿ ಮಾಡಲಾಗುತ್ತಿದೆ. ಕಯ್ಯಾರ ಕಿಞ್ಞಣ್ಣ ರೈ ಅವರ ಪ್ರತಿಮೆ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ಕವಿ ಗೋವಿಂದ ಪೈಗಳ ಪುಸ್ತಕ ಬಿಡುಗಡೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಕನ್ನಡದ ಎಲ್ಲ ಚಟುವಟಿಕೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ನೈಜ್ಯ ಸಾಧಕರನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.
ಶಿರಸಿಯಲ್ಲಿ ಸ್ತಬ್ದಚಿತ್ರಗಳ ಪ್ರದರ್ಶನ
ಶಿರಸಿ: ನಗರದ ಶ್ರೀ ಮಾರಿಕಾಂಬಾ ಪ್ರೌಢ ಶಾಲೆ ಆವರಣದಲ್ಲಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ, ಸ್ತಬ್ದಚಿತ್ರ ಪ್ರದರ್ಶನ ನಡೆಯಿತು. ಕನ್ನಡ ನಾಡು, ನುಡಿ ಸಂಸ್ಕೃತಿ ಬಿಂಬಿಸುವ ಶಾಲಾ ಮಕ್ಕಳ ಸ್ತಬ್ಧಚಿತ್ರಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಉಪವಿಭಾಗಾಧಿಕಾರಿ ಆರ್. ದೇವರಾಜ್ ಮತ್ತಿತರರು ಭಾಗವಹಿಸಿದ್ದರು.
ಬೆಳಗಾವಿಯಲ್ಲಿ ೧0 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಮೆರವಣಿಗೆ
ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ರಾಷ್ಟ್ರಗೀತೆ, ನಾಡಗೀತೆ ಬಳಿಕ ಪೊಲೀಸ್ ವಿವಿಧ ತುಕಡಿಗಳು, ವಿದ್ಯಾರ್ಥಿಗಳಿಂದ ಆಕರ್ಷಕ ಪಂಥ ಸಂಚಲನ ನಡೆಯಿತು. ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಸೇರಿ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಆಯೋಜಿಸಿದ್ದ ಮೆರವಣಿಗೆಯಲ್ಲಿ 10 ಸಾವಿರ ಅಡಿ ಉದ್ದದ ಕನ್ನಡ ಬಾವುಟವನ್ನು ಅನಾವರಣಗೊಳಿಸಲಾಯಿತು.
ಮಂಡ್ಯದ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಭಾಗಿ
ಮಂಡ್ಯ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋಹಣ ಮಾಡಿದರು. ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆ ಮೂಲಕ ಧ್ವಜಕ್ಕೆ ಗೌರವ ಸಮರ್ಪಿಸಲಾಯಿತು. ಬಳಿಕ ಪೊಲೀಸ್ ಇಲಾಖೆ ವಿವಿಧ ತುಕಡಿಗಳಿಂದ ಪಥಸಂಚಲನ ನಡೆಸಲಾಯಿತು. ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲಕೃಷ್ಣ, ಸಿಇಒ ಶಾಂತಾ ಎನ್.ಹುಲ್ಮನಿ, ಎಸ್‌ಪಿ ಎನ್.ಯತೀಶ್, ನಗರಸಭೆ ಅಧ್ಯಕ್ಷ ಮಂಜು ಸೇರಿ ಹಲವರು ಭಾಗಿಯಾಗಿದ್ದರು.
34 ಜನ ಸಾಧಕರು, 2 ತಂಡಗಳಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ: ನಗರದ ಜಿಲ್ಲಾ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಉಸ್ತುವಾರಿ, ಮೀನುಗಾರಿಕಾ ಬಂದರು ಸಚಿವ ಎಸ್. ಅಂಗಾರ ಧ್ವಜಾರೋಹಣ ಮಾಡಿದರು. ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಪಥ ಸಂಚಲನವನ್ನು ವೀಕ್ಷಿಸಿದರು. ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಒಟ್ಟು 34 ಜನ ಸಾಧಕರಿಗೆ, ಎರಡು ಸಾಮಾಜಿಕವಾಗಿ ಗುರುತಿಸಿಕೊಂಡಿರುವ ತಂಡಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಉಡುಪಿ ನಗರದ ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಂದ ಕನ್ನಡದ ಕಂಪನ್ನು ಪಸರಿಸುವ ಹಾಡುಗಳಿಗೆ ನೃತ್ಯ ಮಾಡಿದರು. ಕಾಂತಾರ ಚಿತ್ರದಲ್ಲಿ ಹಾಡಿ ನಟಿಸಿದ ಕುಂದಾಪುರದ ನಾಗರಾಜ ಪಾಣಾರ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಕಾಡ್ತಿಯಮ್ಮನ ಹಾಡುಗಳು, ಹೊಗಳಿಕೆಗಳನ್ನು ಹೇಳಿದರು. ಕಾಂತಾರ ಚಿತ್ರದ ಲೇಲೇ.. ಲೇಲೇ… ಹಾಡನ್ನು ಹಾಡಿ ಸಾವಿರಾರು ಜನರನ್ನು ರಂಜಿಸಿದರು.
ಮಡಿಕೇರಿಯಲ್ಲಿ ಹಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಮಡಿಕೇರಿ: ಕೊಡಗು ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಬಳಿಕ ಜಿಲ್ಲಾಧಿಕಾರಿಗಳು ತೆರೆದ ವಾಹನದಲ್ಲಿ ಪಥಸಂಚಲನ ಪರಿವೀಕ್ಷಣೆ ಮಾಡಿದರು.
ನಂತರ ಪೋಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಗೌರವ ಸಮರ್ಪಣೆ ನಡೆಯಿತು. ಇದಾದ ಬಳಿಕ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಒಟ್ಟು ಆರು ಕಲಾ ತಂಡದಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಕನ್ನಡದ ಹಾಡಿಗೆ ಪುಟಾಣಿ ಭರ್ಜರಿಯಾಗಿ ನೃತ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿ.ಪಂ. ಸಿಇಒ ಡಾ.ಎಸ್. ಆಕಾಶ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ | Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ