ರಾಮನಗರ: ಕಂಚುಗಲ್ ಬಂಡೇಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಈಗ ಮೂವರನ್ನು ಪೊಲೀಸರು ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣ ಸಂಬಂಧ ಮೊದಲಿನಿಂದಲೂ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಹೆಸರು ಕೇಳಿ ಬರುತ್ತಿತ್ತು.
ಇದೀಗ ಭಾನುವಾರ (ಅ.30) ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಅಲಿಯಾಸ್ ಚಂದು (21), ತುಮಕೂರು ಮೂಲದ ನಿವೃತ್ತ ಶಿಕ್ಷಕನಾಗಿರುವ ಮಹದೇವಯ್ಯ ಅವರನ್ನು ಮಾಗಡಿ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಜಮೀನು ವಿಚಾರವಾಗಿ ಇಬ್ಬರ ನಡುವೆ ತಕರಾರು
ಮೃತ ಬಂಡೇಮಠದ ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಇಬ್ಬರು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಾಗಿದ್ದು, ಮೊದಲಿನಿಂದಲೂ ಜಮೀನು ವಿಚಾರವಾಗಿ ಇಬ್ಬರ ನಡುವೆ ತಕರಾರು ನಡೆಯುತ್ತಿತ್ತು ಎನ್ನಲಾಗಿದೆ. ಜಾಗದ ವಿಚಾರವು ಕೋರ್ಟ್‌ನಲ್ಲಿತ್ತು, ಇದೇ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವೂ ಆಗಿತ್ತೆಂದು ತಿಳಿದು ಬಂದಿದೆ. ಮೊದಲಿನಿಂದಲೂ ಮನಸ್ತಾಪ ಇದ್ದ ಕಾರಣದಿಂದ ಹನಿಟ್ರ್ಯಾಪ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಜಮೀನಿನ ಜಿದ್ದಿಗೆ ಬಸವಲಿಂಗ ಶ್ರೀಗಳ ವಿರುದ್ಧ ಮಸಲತ್ತು ಮಾಡಿದ್ದರು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಮಾಗಡಿ ಪೊಲೀಸರು ಬೆಂಗಳೂರು ಮೂಲದ ಯುವತಿಯನ್ನು ವಶಕ್ಕೆ ಪಡೆದಿದ್ದು, ಸತತ ಎರಡು ಗಂಟೆಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಹೆಸರು ಹಾಳು ಮಾಡಲು ಯೋಜನೆ ರೂಪಿಸಿದ್ದರು ಎನ್ನಲಾಗುತ್ತಿದ್ದು, ಏಪ್ರಿಲ್‌ನಲ್ಲಿ ಶ್ರೀಗಳ ವಿಡಿಯೊ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಬೇರೆ ಯಾವೆಲ್ಲ ತಿರುವು ಪಡೆದುಕೊಳ್ಳುತ್ತೋ ಕಾದುನೋಡಬೇಕಿದೆ.
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ತಮ್ಮನ್ನು ಯಾರೂ ಬಂಧನ ಮಾಡಿಲ್ಲ. ಸಿದ್ಧಗಂಗಾ ಮಠಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು.
ಇದನ್ನೂ ಓದಿ | Seer suicide | ಬಂಡೇ ಮಠದ ಶ್ರೀಗಳನ್ನು trap ಮಾಡಿದ ಯುವತಿ ಫೋಟೊ ಲೀಕ್, ಷಡ್ಯಂತ್ರದಲ್ಲಿ ಇನ್ನೊಬ್ಬ ಸ್ವಾಮೀಜಿ?