ಹೊಸದಿಲ್ಲಿ: ಚೀನಾದಲ್ಲಿ ಹಬ್ಬಿರುವ ನ್ಯುಮೋನಿಯಾ ವೈರಸ್ (Pneumonia Outbreak, China influenza 2023) ಭಾರತಕ್ಕೂ ಹಬ್ಬುವ ಆತಂಕ ತಲೆದೋರಿದ್ದು, ಆರು ರಾಜ್ಯಗಳು ಹೈ ಅಲರ್ಟ್ ಘೋಷಿಸಿವೆ.
ಕೇಂದ್ರ ಈ ಬಗೆ ಎಚ್ಚರದಿಂದಿರುವಂತೆ ನಿರ್ದೇಶನ ನೀಡಿದ್ದ ಬಳಿಕ ಕನಿಷ್ಠ ಆರು ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಅಲರ್ಟ್ ಮೋಡ್‌ನಲ್ಲಿ (Alert Mode) ಇಡಲು ಮುಂದಾಗಿವೆ. ಕರ್ನಾಟಕ, ಹರಿಯಾಣ, ರಾಜಸ್ಥಾನ, ಗುಜರಾತ್, ಉತ್ತರಾಖಂಡ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಉಸಿರಾಟದ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಳಿಕೊಂಡಿವೆ.
ಚೀನಾದಲ್ಲಿ ಕೊರೊನಾ ವೈರಸ್ (Corona Virus) ಬಳಿಕ ಈಗ ಮತ್ತೆ ಹೊಸ ಬಗೆಯ ನ್ಯುಮೋನಿಯಾ ಕಾಯಿಲೆ (pneumonia) ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಉಲ್ಬಣವಾಗಿದ್ದು, ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿಹೋಗಿವೆ.
ವೈರಸ್ ಬಗ್ಗೆ ನಾಗರಿಕರು ಜಾಗೃತರಾಗಿರಲು ಕರ್ನಾಟಕ ಆರೋಗ್ಯ ಇಲಾಖೆ ಕೇಳಿಕೊಂಡಿದೆ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ತೊಳೆಯುವುದು, ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಮತ್ತು ಹೆಚ್ಚು ಜನರಿರುವ ಸ್ಥಳಗಳಲ್ಲಿ ಮಾಸ್ಕ್ಗಳನ್ನು ಬಳಸುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ರಾಜಸ್ಥಾನದ ಆರೋಗ್ಯ ಇಲಾಖೆ ಹೊರಡಿಸಿದ ಸಲಹೆಯಲ್ಲಿ ಪರಿಸ್ಥಿತಿ ಸದ್ಯ ಚಿಂತಾಜನಕವಾಗಿಲ್ಲ, ಆದರೆ ವೈದ್ಯಕೀಯ ಸಿಬ್ಬಂದಿ ಜಾಗರೂಕರಾಗಿರಿ ಎಂದು ಸೂಚಿಸಿದೆ. ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬೇಕು. ಮಕ್ಕಳ ಘಟಕಗಳು ಮತ್ತು ಔಷಧ ವಿಭಾಗಗಳಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ, ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಅವರು COVID-19 ಸಾಂಕ್ರಾಮಿಕ ಸಮಯದಲ್ಲಿ ರಚಿಸಲಾದ ಆರೋಗ್ಯ ಮೂಲಸೌಕರ್ಯವನ್ನು, ಚೀನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದರು.
ಉತ್ತರಾಖಂಡ ಸರ್ಕಾರವು ಉಸಿರಾಟದ ಕಾಯಿಲೆಗಳ ಪ್ರಕರಣಗಳಿಗೆ ಕಣ್ಗಾವಲು ಹೆಚ್ಚಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಉತ್ತರಾಖಂಡದ ಮೂರು ಜಿಲ್ಲೆಗಳಾದ ಚಮೋಲಿ, ಉತ್ತರಕಾಶಿ ಮತ್ತು ಪಿಥೋರಗಢ ಚೀನಾದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತವೆ. ಆದ್ದರಿಂದ ಇಲ್ಲೂ ಕೂಡ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಇನ್ನೂ ಯಾವುದೇ ಮಕ್ಕಳ ನ್ಯುಮೋನಿಯಾ ಪ್ರಕರಣಗಳು ವರದಿಯಾಗದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.
ಉತ್ತರ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚಿವೆ. ಇದು ಕಳವಳ ಹುಟ್ಟುಹಾಕಿದೆ. ಹೆಚ್ಚುತ್ತಿರುವ ಈ ಸೋಂಕು ಈ ಹಿಂದೆ ಬಂದಿರುವ ವೈರಸ್‌ಗಳ ಮಿಶ್ರಣವಾಗಿದೆ.
ಮುನ್ನೆಚ್ಚರಿಕೆ ಕ್ರಮಗಳು ಏನು?
- ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು.
- ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು
- ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು
- ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮಾಸ್ಕ್ ಬಳಸುವುದು
- ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು
- ನಿದ್ರೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ
ಇದನ್ನೂ ಓದಿ: ಚೀನಾದಲ್ಲಿ ನಿಗೂಢ ನ್ಯುಮೋನಿಯಾ; ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ರಾಜ್ಯಗಳಿಗೆ ಸೂಚನೆ