ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ (Karnataka Election 2023) ಕಾವಿಗಿಂತ ಬಿಜೆಪಿ ಘೋಷಿಸಿದ ಅಭ್ಯರ್ಥಿಗಳು, ಹೊಸ ಮುಖಗಳಿಗೆ ಮಣೆ ಹಾಕಿರುವುದು, ಆಡಳಿತ ವಿರೋಧಿ ಅಲೆ ಇರುವ ಶಾಸಕರಿಗೆ ಟಿಕೆಟ್ ನೀಡದಿರುವುದು, ಹಿರಿಯರಿಗೆ ಮಣೆ ಹಾಕುವ ಜತೆಗೆ ಕಿರಿಯರಿಗೂ ಆದ್ಯತೆ ನೀಡಿರುವುದು, ಜಾತಿ ಲೆಕ್ಕಾಚಾರ, ಟಿಕೆಟ್ ವಂಚಿತರಿಂದ ಉಂಟಾದ ಭಿನ್ನಮತದ ಕುರಿತೇ ಜಾಸ್ತಿ ಚರ್ಚೆಯಾಗಿದೆ. ನಾಮಪತ್ರ ಸಲ್ಲಿಕೆಯಾಗಿ, ಅಭ್ಯರ್ಥಿಗಳು ಪ್ರಚಾರ ಆರಂಭಿಸಿದರೂ ಚರ್ಚೆ ಮುಂದುವರಿಯುತ್ತಿದೆ.
ಹಾಗಾದರೆ, ರಾಜ್ಯ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಅನುಸರಿಸಿದ ಸೂತ್ರ ಹೇಗಿದೆ? ಜಾತಿ ಲೆಕ್ಕಾಚಾರ, ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವು, ಹಿರಿತನ, ಪ್ರಭಾವ, ಜಾತಿಯ ಬೆಂಬಲವನ್ನೂ ಹೊರತುಪಡಿಸಿ ಬಿಜೆಪಿ ಹೇಗೆ ಕ್ರಾಂತಿಕಾರಕ ಬದಲಾವಣೆ ತಂದಿದೆ? ಯಾರಿಗೆ ಮಣೆ ಹಾಕಿದೆ? ಯಾರಿಗೆ ಕೊಕ್ ನೀಡಿದೆ ಎಂಬುದರ ಸಂಪೂರ್ಣ ಹಾಗೂ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.
24 ಶಾಸಕರಿಗೆ ಕೊಕ್
ಯಾವುದೇ ಚುನಾವಣೆಯಲ್ಲಿ ಹಾಲಿ ಶಾಸಕರು ಮತ್ತೆ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ, ಹೊಂದಿರುವ ಪ್ರಭಾವ, ಜಾತಿ, ಸಮುದಾಯ, ಜನಬೆಂಬಲ ಸೇರಿ ಹಲವು ಕಾರಣಗಳಿಂದ ಅವರು ಪ್ರಭಾವಿಗಳಾಗಿರುತ್ತಾರೆ. ಹಾಗಾಗಿ, ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡುವುದು ಯಾವುದೇ ರಾಜಕೀಯ ಪಕ್ಷದ ಲೆಕ್ಕಾಚಾರ. ಆದರೆ, ಈ ಲೆಕ್ಕಾಚಾರವನ್ನೇ ಬಿಜೆಪಿ ಬುಡಮೇಲು ಮಾಡಿದೆ.
ಇಷ್ಟೆಲ್ಲ ಶಾಸಕರಿಗೆ ಕೊಕ್
ಈ ಬಾರಿ 24 ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಆಡಳಿತವಿರೋಧಿ ಅಲೆ, ವಯಸ್ಸು, ಭ್ರಷ್ಟಾಚಾರ ಆರೋಪ, ಅಭಿವೃದ್ಧಿಯ ನಿರ್ಲಕ್ಷ್ಯ, ಯುವಕರಿಗೆ ಟಿಕೆಟ್ ನೀಡುವ ತಂತ್ರದ ಭಾಗವಾಗಿ ಬಿಜೆಪಿಯು 24 ಶಾಸಕರಿಗೆ ಟಿಕೆಟ್ ನೀಡಿಲ್ಲ. ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ರಾಮಪ್ಪ ಲಮಾಣಿ, ಗೂಳಿಹಟ್ಟಿ ಶೇಖರ್, ಆನಂದ್ ಸಿಂಗ್ ಸೇರಿ 24 ಶಾಸಕರಿಗೆ ಟಿಕೆಟ್ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲು ಸ್ವಯಂ ತೀರ್ಮಾನ ತೆಗೆದುಕೊಂಡಿದ್ದಾರೆ. ಉಳಿದವರಿಗೆ ಬಿಜೆಪಿ ಕೊಕ್ ನೀಡಿದೆ.
ಬಿಜೆಪಿ ಟಿಕೆಟ್ ಹಂಚಿಕೆಯ ಸಂಪೂರ್ಣ ವಿಶ್ಲೇಷಣೆ ಹೀಗಿದೆ
ಜಾತಿವಾರು ಲೆಕ್ಕಾಚಾರ ಹೀಗಿದೆ
224 ಕ್ಷೇತ್ರಗಳಲ್ಲಿ ಬಿಜೆಪಿಯು 12 ಮಹಿಳೆಯರಿಗೆ ಹಾಗೂ 212 ಕ್ಷೇತ್ರಗಳಲ್ಲಿ ಪುರುಷರಿಗೆ ಟಿಕೆಟ್ ನೀಡಿದೆ. ಇನ್ನು ಜಾತಿವಾರು ಲೆಕ್ಕಾಚಾರದ ಪ್ರಕಾರ, 132 ಸಾಮಾನ್ಯ ಕೆಟಗರಿಯ ಅಭ್ಯರ್ಥಿಗಳು, ಒಬ್ಬ ಅಲ್ಪಸಂಖ್ಯಾತರು (ಜೈನ್), 36 ಒಬಿಸಿ, 37 ಎಸ್‌ಸಿ ಹಾಗೂ 18 ಎಸ್‌ಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ, ಕಳೆದ ಬಾರಿ ಸೋತ 27 ಅಭ್ಯರ್ಥಿಗಳು, ಮೊದಲ ಬಾರಿ ಶಾಸಕರಾದ 40, ಎರಡು ಬಾರಿ ಆಯ್ಕೆಯಾದ 25, ಮೂರು ಬಾರಿ ಆಯ್ಕೆಯಾದ 33, ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ 75 ಹಾಗೂ ಹಲವು ಬಾರಿ ಸ್ಪರ್ಧಿಸಿದ 24 ಜನರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಇದನ್ನೂ ಓದಿ: Karnataka Election 2023: ಚುನಾವಣೆಗೆ ಮುನ್ನ ಶಿವಮೊಗ್ಗದಲ್ಲಿ ನಡೆಯಲಿದೆ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ
ಶೈಕ್ಷಣಿಕ ಹಿನ್ನೆಲೆ ಹೇಗಿದೆ?
ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶೈಕ್ಷಣಿಕ ಹಿನ್ನೆಲೆಯನ್ನೂ ಗಮನಿಸಲಾಗಿದೆ. ಹಾಗಾಗಿಯೇ, ಪದವಿ ಪಡೆದ 134, ಡಾಕ್ಟರೇಟ್ ಪಡೆದ ಒಬ್ಬರು, ಸ್ನಾತಕೋತ್ತರ ಪದವಿ ಪಡೆದ 37, ದ್ವಿತೀಯ ಪಿಯುಸಿ ಪಾಸಾದ 26, ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ 20, ಎಂಟನೇ ಕ್ಲಾಸ್ ಪಾಸಾದ ನಾಲ್ವರು ಹಾಗೂ 7ನೇ ತರಗತಿ ಉತ್ತೀರ್ಣರಾದ ಇಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದೆ.