ಹುಬ್ಬಳ್ಳಿ: ಬಿಜೆಪಿಯಿಂದ ತಮಗೇ ಟಿಕೆಟ್ ದೊರೆಯಲಿದೆ ಎಂಬ ನಂಬಿಕೆ ತಮಗಿನ್ನೂ ಇದೆ. ಇಂದು ಸಂಜೆಯವರೆಗೆ ಕಾಯ್ದು ನೋಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನಂತೂ ಚುನಾವಣೆಯಲ್ಲಿ (Karnataka Election 2023) ಸ್ಪರ್ಧಿಸುವುದು ಖಚಿತ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶನಿವಾರ ತಮ್ಮ ನಿವಾಸದಲ್ಲಿ ನಡೆದ ಬೆಂಬಲಿಗರ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ನಿರ್ಧಾರ ನೋಡಿಕೊಂಡು ತಮ್ಮ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ. ಶುಕ್ರವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಶನಿವಾರ ಮಧ್ಯಾಹ್ನ 12 ಗಂಟೆಯ ಒಳಗೆ ಪಕ್ಷದ ತೀರ್ಮಾನ ತಿಳಿಸಿ ಎಂದು ಬಿಜೆಪಿ ಹೈಕಮಾಂಡ್‌ಗೆ ಗಡುವು ನೀಡಿದ್ದರು. ಈಗ ಅವರು ತಮ್ಮ ಗಡುವನ್ನು ವಿಸ್ತರಿಸಿದ್ದಾರೆ. ಶನಿವಾರ ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಮ್ಮ ನಿವಾಸಕ್ಕೇ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಅವರು ಇನ್ನೊಂದಿಷ್ಟು ಸಮಯ ಕಾಯ್ದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆಂದು ಹೇಳಲಾಗಿದೆ.
ಶೆಟ್ಟರ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಕ್ಷೇತ್ರದ ಪ್ರಮುಖರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಅಭಿಮಾನಿಗಳು ಈ ಸಭೆಯಲ್ಲಿ ಪ್ರಕಟಿಸಿದರು. ಮುಖ್ಯವಾಗಿ ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಶೆಟ್ಟರ್, ನೀವೆಲ್ಲರೂ ನನಗೆ ಅಧಿಕಾರ ಇಲ್ಲದಿರುವಾಗಲೂ ನೈತಿಕ ಬೆಂಬಲ ನೀಡಿದ್ದೀರಿ. ನಿಮ್ಮ ಸಹಕಾರ ಇಲ್ಲದಿದ್ದರೆ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲ. ಜನ ಸಂಘದ ಕಾಲದಿಂದಲೂ ಸಂಘಪರಿವಾರದೊಂದಿಗೆ ಕುಟುಂಬದ ಒಡನಾಟವಿದೆ. ಇದೆಲ್ಲವೂ ನಮ್ಮ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಅವರು ಇಂದು ಸಂಜೆಯ ಒಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದರು.
ಈ ಬಾರಿ ಐತಿಹಾಸಿಕ ದಾಖಲೆಯಲ್ಲಿ ನಿಮ್ಮನ್ನು ಆಯ್ಕೆ ಮಾಡ್ತೇವೆ ಎಂದು ಕ್ಷೇತ್ರದ ಜನರು ಹೇಳುತ್ತಿದ್ದರು. ಯಾಕೆ ಇನ್ನೂ ಟಿಕೆಟ್ ಯಾಕೆ ಆಗಿಲ್ಲಾ ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ದೆಹಲಿಗೇ ತಮ್ಮನ್ನು ಕರೆಸಿಕೊಂಡು ಮಾತಾಡಿದರು. ನನ್ನ ಗುರಿ, ಅಭಿಲಾಷೆ ಏನಿದೆ ಅಂತಾ ಅವರಿಗೆ ಹೇಳಿದ್ದೇನೆ. ಯಾವುದೇ ಆಸೆ ಇಟ್ಕೊಂಡು ನಾನು ರಾಜಕೀಯಕ್ಕೆ ಬಂದಿಲ್ಲ. ಜನರ ಅಭಿಪ್ರಾಯವೇನು ಅನ್ನೋದನ್ನು ನಾನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಇಂದೂ ಕೂಡ ಪಕ್ಷದ ಅಧ್ಯಕ್ಷ ನಡ್ಡಾಜಿ ಅವರು ನನ್ನೊಂದಿಗೆ ಮಾತನಾಡಿದ್ದಾರೆ ಎಂದು ಶೆಟ್ಟರ್ ಸಭೆಯಲ್ಲಿ ಹೇಳಿದರು.
ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಒಬ್ಬ ಶಾಸಕನಾಗಿ ಕೆಲಸ ಮಾಡಲು ಇನ್ನೂ ಅವಕಾಶವಿದೆ. ಶೆಟ್ಟರ್‌ಗೆ ಟಿಕೆಟ್ ಇಲ್ಲಾ ಅನ್ನೋ ವಾತಾವರಣ ಯಾಕೆ ಬಂತು ಗೊತ್ತಿಲ್ಲ. ಯಾವುದೇ ಕಳಂಕ ನನ್ನ ಮೇಲೆ ಇಲ್ಲಾ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಿ, ಶಕ್ತಿ ಕೊಡುವ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಕೊಟ್ಟಿರುವ ಅವಕಾಶಕ್ಕೆ ಧನ್ಯವಾದ ಹೇಳುತ್ತೇನೆ. ಅಪೂರ್ಣ ಕೆಲಸ ಪರಿಪೂರ್ಣ ಮಾಡಲು ಮತ್ತೊಂದು ಅವಕಾಶ ಕೊಡಬೇಕು. ಸಾಯಂಕಾಲದವರೆಗೂ ಕಾಯ್ದು ನೋಡುತ್ತೇನೆ ಎಂದರು.
ಇನ್ನೊಂದಿಷ್ಟು ಸಮಯ ಕಾಯಿರಿ ಎಂದ ಜೋಷಿ
ಪಕ್ಷದ ಹೈಕಮಾಂಡ್ ಸೂಚನೆಯಂತೆ ಶನಿವಾರ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಶೆಟ್ಟರ್ ಗಡುವು ನೀಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತುಕತೆ ನಡೆಸಿದ ಅವರು, ʻʻಇನ್ನೊಂದಿಷ್ಟು ಸಮಯ ಕಾಯಿರಿ. ಪಕ್ಷ ನಿಮ್ಮ ಪರವಾಗಿಯೇ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಸಲಹೆ ನೀಡಿದರೆಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕೂಡ ಶೆಟ್ಟರ್‌ರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆಂದು ಶೆಟ್ಟರ್ ಹೇಳಿದ್ದಾರೆ.
ಶೆಟ್ಟರ್ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಷಿ; ಜಗದೀಶ್ ಶೆಟ್ಟರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕಷ್ಟ ಕಾಲದಲ್ಲೂ ಪಕ್ಷದ ಜೊತೆಗೆ ಇದ್ದು, ಪಕ್ಷ ಕಟ್ಟಿದ್ದಾರೆ. ಅವರ ಸೇವೆಯನ್ನು ಪಕ್ಷ ಸರಿಯಾಗಿ ಬಳಸಿಕೊಳ್ಳುತ್ತದೆ. ಪಕ್ಷ ಅವರ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ನನಗೆ ಟಿಕೆಟ್ ನೀಡಲು ವಿಳಂಬ ಮಾಡಿರುವುದರಿಂದ ನನಗಿಂತ ಹೆಚ್ಚು ರಾಜ್ಯದ ಜನರಿಗೆ ಸಂಕಟವಾಗಿದೆ. ನನಗೆ ನಿಮ್ಮ ಅಭಿಮಾನ ಸಾಕು, ಯಾವುದೇ ಅಧಿಕಾರ ಬೇಡ ಎಂದು ಮಾರ್ಮಿಕವಾಗಿ ಹೇಳಿದ ಶೆಟ್ಟರ್, ನಿಮ್ಮೆಲ್ಲರ ಭಾವನೆಯನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ ಎಂದರು.
ಒಂದು ವೇಳೆ ಬಿಜೆಪಿ ಟಿಕೆಟ್ ನೀಡದೇ ಮುಂದೇನು ಮಾಡಬೇಕೆಂಬ ಕುರಿತು ಸಭೆಯಲ್ಲಿ ತಮ್ಮ ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹಿಸಿದ ಶೆಟ್ಟರ್, ಒಂದು ವೇಳೆ ಬಿಜೆಪಿಯ ಟಿಕೆಟ್ ದೊರೆಯದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಈ ಸಂದರ್ಭದಲ್ಲಿ ಶೆಟ್ಟರ್ ಅಭಿಮಾನಿಗಳು ಅವರಿಗೇ ಟಿಕೆಟ್ ನೀಡಬೇಕೆಂದು ಪ್ರತಿಭಟನೆ ಕೂಡ ನಡೆಸಿದ್ದಾರೆ.