Site icon Vistara News

Karnataka Election 2023: ಮುಗಿಯದ ಟಿಕೆಟ್‌ ಗೊಂದಲ; ಮಂಡ್ಯದಲ್ಲಿ ಜೆಡಿಎಸ್‌ ಸ್ಥಿತಿ ‘ಮನೆಯೊಂದು ಮೂರು ಬಾಗಿಲು’

Karnataka Election 2023: JDS Ticket Conflict Continuous In Mandya

Karnataka Election 2023: JDS Ticket Conflict Continuous In Mandya

ಬೆಂಗಳೂರು: ಹಾಸನದಲ್ಲಿ ಜೆಡಿಎಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ ಅವರ ನಡುವೆ ಉಂಟಾಗಿದ್ದ ಟಿಕೆಟ್‌ ಬಿಕ್ಕಟ್ಟು ಶಮನವಾದ ಬೆನ್ನಲ್ಲೇ ಮಂಡ್ಯದಲ್ಲಿ ಜೆಡಿಎಸ್ ಟಿಕೆಟ್‌ ಗೊಂದಲ ಮುಂದುವರಿದಿದೆ. ಜೆಡಿಎಸ್‌ ಹಾಲಿ ಶಾಸಕ ಎಂ.ಶ್ರೀನಿವಾಸ್‌ ಅವರನ್ನು ಬಿಟ್ಟು ಮನ್‌ಮೂಲ್ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಬಿ ಫಾರಂ ನೀಡಿದ್ದಾರೆ. ಅಧಿಕೃತವಾಗಿ ಟಿಕೆಟ್‌ ಘೋಷಣೆ ಮಾಡದಿದ್ದರೂ ದೇವೇಗೌಡರು ಬಿ ಫಾರಂ ನೀಡಿರುವುದು ಮಂಡ್ಯದಲ್ಲಿ ಜೆಡಿಎಸ್‌ ಬಿಕ್ಕಟ್ಟಿಗೆ ಕಾರಣವಾಗಿದೆ.

ಬಿ.ಆರ್.ರಾಮಚಂದ್ರು ಅವರಿಗೆ ಬಿ ಫಾರಂ ನೀಡಿದ ಕಾರಣ ಶಾಸಕ ಶ್ರೀನಿವಾಸ್‌ ಹಾಗೂ ಪಿಇಎಸ್‌ ವಿದ್ಯಾಸಂಸ್ಥೆ ಮುಖ್ಯಸ್ಥ ವಿಜಯಾನಂದ ಅವರ ಅಭಿಮಾನಿಗಳು ಜೆಡಿಎಸ್‌ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧವೂ ಬೆಂಬಲಿಗರು ಸಿಡಿದೆದ್ದಿದ್ದಾರೆ. ಮಂಡ್ಯ ಜೆಡಿಎಸ್‌ ಮುಖಂಡರಲ್ಲಿಯೇ ಗೊಂದಲ ಇರುವ ಕಾರಣ, ನೀವೇ ಸ್ಪರ್ಧಿಸಿ ಎಂಬುದಾಗಿ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರಾಮಚಂದ್ರು ಅವರಿಗೆ ಟಿಕೆಟ್‌ ನೀಡಿರುವುದು ಅಸಮಾಧಾನದ ಹೊಗೆ ದಟ್ಟವಾಗಿ ಹಬ್ಬಲು ಕಾರಣವಾಗಿದೆ.

ಕಣ್ಣೀರು ಹಾಕಿದ ಶ್ರೀನಿವಾಸ್‌

ದೇವೇಗೌಡರು ರಾಮಚಂದ್ರು ಅವರಿಗೆ ಬಿ ಫಾರಂ ಕೊಡುತ್ತಲೇ ನಿರಾಸೆಯಿಂದ ಎಂ. ಶ್ರೀನಿವಾಸ್‌ ಅವರು ಕಣ್ಣೀರು ಹಾಕಿದರು. ಬಿ ಫಾರಂ ನೀಡುತ್ತಲೇ ಮಂಡ್ಯದ ಅಶೋಕ ನಗರದಲ್ಲಿರುವ ತಮ್ಮ ಮನೆಯಲ್ಲಿ ಶ್ರೀನಿವಾಸ್‌ ಅವರು ಕಾರ್ಯಕರ್ತರ ಸಭೆ ನಡೆಸಿದರು. ಭಾವುಕರಾಗಿ ಕಣ್ಣೀರು ಕೂಡ ಹಾಕಿದರು. “ಜೆಡಿಎಸ್‌ನಲ್ಲಿ ಹಣ ಇರುವವರಿಗೆ ಮಾತ್ರ ಟಿಕೆಟ್‌ ಸಿಗುತ್ತದೆ ಎಂಬ ಮಾತಿದೆ. ಇಲ್ಲೂ ಹಾಗೆಯೇ ಆಗಿದೆ. ನಿಯತ್ತಿನಿಂದ ಇದ್ದ ನನಗೆ ಹೀಗೆ ಮಾಡಿದರಲ್ಲ ಎಂಬ ಕಾರಣದಿಂದ ಕಣ್ಣೀರು ಹಾಕಿದೆ” ಎಂದು ಹೇಳಿದರು. ಹಾಗೆಯೇ, ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ ಅವರು ಏಪ್ರಿಲ್‌ 20ರಂದು ಬೆಳಗ್ಗೆ 11.30ರಿಂದ 12 ಗಂಟೆ ಅವಧಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಘೋಷಿಸಿದರು. ಆದರೆ, ಶ್ರೀನಿವಾಸ್‌ ಅವರ ಮನವೊಲಿಸಲು ಜೆಡಿಎಸ್‌ ನಾಯಕರು ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವರಿಷ್ಠರ ವಿರುದ್ಧ ಸಿಡಿದೆದ್ದ ಬೆಂಬಲಿಗರು

ಶ್ರೀನಿವಾಸ್‌ ಅವರಿಗೆ ಟಿಕೆಟ್‌ ಕೈತಪ್ಪುತ್ತಲೇ ಶಾಸಕರ ಬೆಂಬಲಿಗರು ಜೆಡಿಎಸ್‌ ವರಿಷ್ಠರ ವಿರುದ್ಧವೇ ಸಿಡಿದೆದ್ದರು. ಶ್ರೀನಿವಾಸ್‌ ಮನೆಯಲ್ಲಿ ನಗರಸಭೆ ಅಧ್ಯಕ್ಷ ಮಂಜು, ಜಿಪಂ ಮಾಜಿ ಅಧ್ಯಕ್ಷ ಯೋಗೇಶ್‌ ಅವರು ಸಭೆ ನಡೆಸುವಾಗಲೇ ಶಾಸಕರ ಮನೆಗೆ ಬಂದ ಬೆಂಬಲಿಗರು, ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ, ಎಚ್‌ಡಿಕೆ 420 ಎಂಬ ಘೋಷಣೆಯೂ ಕೇಳಿಬಂತು.

ಎಚ್‌ಡಿಕೆ ವಿರುದ್ಧ ವಿಜಯಾನಂದ ಬೆಂಬಲಿಗರ ಆಕ್ರೋಶ

ಪಿಇಎಸ್‌ ವಿದ್ಯಾಸಂಸ್ಥೆ ಮುಖ್ಯಸ್ಥ ವಿಜಯಾನಂದ ಅವರಿಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮಚಂದ್ರ ಮಾತ್ರ ಗಂಡ್ಸಾ?

“ರಾಮಚಂದ್ರು ನಮ್ಮ ಕ್ಷೇತ್ರದವನೇ ಅಲ್ಲ. ಟಿಕೆಟ್‌ ಕೊಡುತ್ತೇವೆ ಎಂದು ಮೂರ್ನಾಲ್ಕು ತಿಂಗಳಿಂದ ವಿಜಯಾನಂದ ಅವರನ್ನು ಅಲೆದಾಡಿಸಿದ್ದಾರೆ. ಈಗ ಅವರ ಬೆನ್ನಿಗೇ ಚೂರಿ ಹಾಕಿದ್ದಾರೆ. ರಾಮಚಂದ್ರ ಒಬ್ಬನೇ ಗಂಡಸಾ? ಇನ್ಯಾರೂ ಗಂಡಸೇ ಇಲ್ಲವಾ? ಕುಮಾರಸ್ವಾಮಿ ಅವರು ನಮ್ಮ ಬಳಿ ಬಂದು ಮಾತನಾಡಲಿ” ಎಂದು ವಿಜಯಾನಂದ ಅವರ ಪರ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election 2023: ಸ್ವರೂಪ್‌ ಬೇರೆಯಲ್ಲ, ನನ್ನ ಮಕ್ಕಳು ಬೇರೆಯಲ್ಲವೆಂದ ಭವಾನಿ; ಬೆಂಬಲಕ್ಕೆ ರೇವಣ್ಣ ಕುಟುಂಬ

Exit mobile version