Site icon Vistara News

ಮಂಡ್ಯ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಜೆಡಿಎಸ್ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಕಾಳಗ; ಬಿಜೆಪಿಗೂ ಇದೆ ಅಪಾರ ನಿರೀಕ್ಷೆ

Karnataka Election 2023: Monday district election constituency wise analysis

-ರವಿ ಲಾಲಿಪಾಳ್ಯ., ವಿಸ್ತಾರ ನ್ಯೂಸ್, ಮಂಡ್ಯ
ರಾಜಕೀಯವಾಗಿ ಹೆಚ್ಚು ಜಾಗೃತವಾಗಿರುವ ಮಂಡ್ಯ (Mandya District) ಜಿಲ್ಲೆಯಲ್ಲಿ ಒಟ್ಟು 7 ಕ್ಷೇತ್ರಗಳಿವೆ. ಜಾತ್ಯತೀತ ಜನತಾ ದಳ(ಜೆಡಿಎಸ್) ಕಳೆದ ಬಾರಿ ಚುನಾವಣೆಯಲ್ಲಿ ಏಳಕ್ಕೂ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹಾಗಾಗಿ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎನಿಸಿದೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಜೆಡಿಎಸ್‌ಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದ್ದರೆ, ಬಿಜೆಪಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಅಗತ್ಯವಿರುವ ಎಲ್ಲ ಹಾದಿಗಳನ್ನು ತುಳಿಯುತ್ತಿದೆ (Karnataka election 2023).

ಮಂಡ್ಯ ಜೆಡಿಎಸ್‌ನ ಭದ್ರಕೋಟೆಯಾಗಿದ್ದರೂ 2019ರ ಏಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ಗೆದ್ದು ಜೆಡಿಎಸ್‌ಗೆ ಮೊದಲ ಪೆಟ್ಟು ಕೊಟ್ಟರು. ನಂತರ ಅದೇ ವರ್ಷ ಜೆಡಿಎಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾರಾಯಣಗೌಡ ಅವರು 2019ರ ಡಿಸೆಂಬರ್‌ನಲ್ಲಿ ನಡೆದ ಕೆ ಆರ್ ಪೇಟೆಯ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಭದ್ರಕೋಟೆಗೆ ಎರಡನೇ ಪೆಟ್ಟು ನೀಡಿದರು. ನಂತರ ನಡೆದ ಸ್ಥಳೀಯ ಸಂಸ್ಥೆಗಳ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.

ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದರೂ ಬಿಜೆಪಿಯನ್ನು ಈ ಬಾರಿ ನಗಣ್ಯ ಎನ್ನುವಂತಿಲ್ಲ. ಶ್ರೀರಂಗಪಟ್ಟಣ ಜಾಮೀಯಾ ಮಸೀದಿ, ಉರಿಗೌಡ ಹಾಗೂ ನಂಜೇಗೌಡ ವಿಷಯಗಳ ಮೂಲಕ ಬಿಜೆಪಿ ಹೆಚ್ಚೇ ಸದ್ದು ಮಾಡಿದೆ. ಆದರೆ, ಈ ಸಂಗತಿಗಳು ಆ ಪಕ್ಷಕ್ಕೆ ಮತ ತಂದುಕೊಡುತ್ತದೆಯೇ? ಕಾದು ನೋಡಬೇಕು. ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸುಮಲತಾ ಅವರು ಈಗ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿರುವ ಪ್ರಸಕ್ತ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ಉಳಿಸಿಕೊಳ್ಳುತ್ತಾ? ಈ ಕೋಟೆ ಕಾಂಗ್ರೆಸ್ ಪಾಲಾಗುತ್ತಾ? ಕಮಲದ ಪ್ರಭಾವವೇನು? ಈ ಎಲ್ಲ ಸಂಗತಿಗಳು ಬಹಳ ಕುತೂಹಲಗಳಾಗಿವೆ. ಮತದಾರರಿಗೆ ಮಾತ್ರವೇ ಉತ್ತರ ಗೊತ್ತಿದೆ.

ಮಂಡ್ಯ: ಜೆಡಿಎಸ್‌ಗೆ ಬಂಡಾಯದ ಬಿಸಿ; ಕಾಂಗ್ರೆಸ್‌ನ ರಣೋತ್ಸಾಹ

ದ್ಯ ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರದವಿದು. ಹಾಲಿ ಶಾಸಕ ಎಂ ಶ್ರೀನಿವಾಸ್ ಅವರಿಗೆ ಮೊದಲ ಪಟ್ಟಿಯಲ್ಲೇ ಜೆಡಿಎಸ್ ಹೆಸರು ಘೋಷಣೆ ಮಾಡಿತ್ತು. ಆದರೆ, ಕೊನೆಗಳಿಗೆಯವರೆಗೂ ಬಿ ಫಾರ್ಮ್ ನೀಡರಿಲ್ಲ. ಅಂತಿಮವಾಗಿ ದಳಪತಿಗಳು, ಮನ್‌ಮುಲ್‌ನ ಹಾಲಿ ಅಧ್ಯಕ್ಷ ರಾಮಚಂದ್ರು ಅವರಿಗೆ ಬಿ ಫಾರ್ಮ್ ನೀಡಲಾಗಿದೆ. ದಳಪತಿಗಳ ಈ ನಡೆಗೆ ಸಿಟ್ಟಿಗೆದ್ದ ಹಾಲಿ ಶಾಸಕ ಎಂ ಶ್ರೀನಿವಾಸ್ ಅವರು ಸ್ವಾಭಿಮಾನಿ ಪಡೆಯ ಹೆಸರಿನಲ್ಲಿ, ತಮ್ಮ ಅಳಿಮಯ್ಯ ಯೋಗೇಶ್, ಮಹಾಲಿಂಗೇಗೌಡ ಹಾಗೂ ವಿಜಯಾನಂದ ಅವರಿಂದ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ವಿಜಯಾನಂದ ಅವರು ಕಣದಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ರವಿಕುಮಾರ್ ಅವರು ಸ್ಪರ್ಧಿಸಿದ್ದಾರೆ. ಎಸ್‌ ಡಿ ಜಯರಾಂ ಅವರ ಪುತ್ರ ಅಶೋಕ್ ಜಯರಾಮ್ ಅವರು ಬಿಜೆಪಿಯಿಂದ ಕಣದಲ್ಲಿದ್ದಾರೆ. ರವಿಕುಮಾರ್ ಅವರು ಕಳೆದ ಬಾರಿ ಸೋತಿದ್ದಾರೆ. ಅಲ್ಲದೇ ಈ ಬಾರಿ ಜೆಡಿಎಸ್‌ಗೆ ಬಂಡಾಯ ಕಾಟ ಇರುವುದರಿಂದ ಕಾಂಗ್ರೆಸ್ ಉತ್ಸಾಹದಲ್ಲಿದೆ. ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರಿಗೆ ಅವರ ತಂದೆ ಹೆಸರೇ ಶ್ರೀರಕ್ಷೆಯಾಗಿದೆ. ಕಳೆದ ಬಾರಿ ಜೆಡಿಎಸ್‌ನ ಎಂ ಶ್ರೀನಿವಾಸ್ 69,421 ಮತ್ತು ರವಿಕುಮಾರ್ ಗೌಡ 47,813 ಮತ ಪಡೆದಿದ್ದರು. ಜೆಡಿಎಸ್ 21,608 ಮತಗಳ ಅಂತರದಿಂದ ಗೆದ್ದಿತ್ತು.

ಮದ್ದೂರು: ಜೆಡಿಎಸ್ ಗೆಲುವಿಗೆ ಕಾಂಗ್ರೆಸ್ ಸವಾಲು ಒಡ್ಡುವುದೇ?

ಮಾಜಿ ಸಿಎಂ ಎಸ್ಸೆಮ್ ಕೃಷ್ಣ, ನಟ ಅಂಬರೀಷ್ ಹುಟ್ಟೂರು ಇರುವ ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್‌ನದ್ದೇ ಪಾರುಪತ್ಯವಿದೆ. ಡಿ ಸಿ ತಮ್ಮಣ್ಣ ನಿರಂತವಾಗಿ ಗೆದ್ದಿದ್ದಾರೆ. ಈ ಕ್ಷೇತ್ರ ಗೆಲ್ಲಲೇಬೇಕು ಎಂದು ಮುಂದಾಗಿರುವ ಕಾಂಗ್ರೆಸ್ ಈ ಬಾರಿ ಕದಲೂರು ಉದಯ್ ಅವರನ್ನು ಕಣಕ್ಕಿಳಿಸಿದೆ. ವಿಶೇಷ ಎಂದರೆ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕದಲೂರು ಉದಯ್ ಅವರ ಪ್ರಯತ್ನವೂ ಇತ್ತು ಎಂಬ ಆರೋಪವಿದೆ. ಆದರೆ, ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್ಸೆಮ್ ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಮತ್ತೊಂದೆಡೆ, ಜೆಡಿಎಸ್‌ಗೆ ಸೆಡ್ಡು ಹೊಡೆದಿರುವ ಮದ್ದೂರು ಸ್ವಾಮಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. ಆದರೆ, ವಾಸ್ತವದಲ್ಲಿ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಕಾದಾಟ ಕಾಣಬಹುದು. ಹಾಗೆಯೇ, ಕಾಂಗ್ರೆಸ್‌ನ ಗುರುಚರಣ್ ಅವರು ಜೆಡಿಎಸ್‌ ಪಾಲಾಗಿರುವುದರಿಂದ ಡಿ ಸಿ ತಮ್ಮಣ್ಣವರ ಗೆಲುವು ಸುಲಭವಾಗಬಹುದು ಎಂಬ ವಿಶ್ಲೇಷಣೆ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನ ಡಿ ಸಿ ತಮ್ಣಣ್ಣ ಅವರು 1,09,239 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಮಧು ಜಿ ಮಾದೇಗೌಡ ಅವರು 55,209 ಮತ ಪಡೆದಿದ್ದರು. ಗೆಲುವಿನ ಅಂತರ 54,209 ಮತಗಳಿದ್ದವು.

ಮಳವಳ್ಳಿ: ಜೆಡಿಎಸ್- ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ

ಳವಳ್ಳಿ ಎಸ್ಸಿ ಮೀಸಲು ಕ್ಷೇತ್ರವಾಗಿದೆ. ಜೆಡಿಎಸ್‌ ಶಾಸಕ ಡಾ. ಕೆ ಅನ್ನದಾನಿ ಮತ್ತು ಕಾಂಗ್ರೆಸ್‌ನ ನರೇಂದ್ರ ಸ್ವಾಮಿ ಅವರು ಬದ್ಧ ರಾಜಕೀಯ ವೈರಿಗಳು. ಸತತ ಎರಡು ಬಾರಿ ಸೋಲಿನಿಂದ ಕಂಗೆಟ್ಟಿದ್ದ ಅನ್ನದಾನಿ ಅವರು ಕಳೆದ ಬಾರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ನರೇಂದ್ರ ಸ್ವಾಮಿ 2008 ಮತ್ತು 2013ರಲ್ಲಿ ನಿರಂತರವಾಗಿ ಗೆದ್ದಿದ್ದರು. ಅನ್ನದಾನಿ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ನರೇಂದ್ರಸ್ವಾಮಿ ಕಾಂಗ್ರೆಸ್‌ನಿಂದ ಕಣದಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ತಮ್ಮ ತಮ್ಮ ಕೊಡುಗೆಯನ್ನು ಹೇಳುವ ಮೂಲಕ ಮತಗಳನ್ನು ಕೇಳುತ್ತಿದ್ದಾರೆ. ಈ ಇಬ್ಬರ ನಡುವೆ ಬಿಜೆಪಿಯಿಂದ ಮುನಿರಾಜು ಅವರು ಸ್ಪರ್ಧೆ ಮಾಡಿದ್ದಾರೆ. ಗಮನಿಸಬೇಕಾದ ಸಂಗತಿ ಏನೆಂದರೆ, ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಈ ಕ್ಷೇತ್ರದಲ್ಲಿ ಮತದ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದೆ. ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿ ಲಾಭವಾಗಬಹುದಾ? ಕಾದು ನೋಡಬೇಕು. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನ ಡಾ ಕೆ. ಅನ್ನದಾನಿ 1,03,0,38 ಮತ್ತು ಕಾಂಗ್ರೆಸ್‌ನ ನರೇಂದ್ರಸ್ವಾಮಿ 76,278 ಮತ ಪಡೆದಿದ್ದರು. ಗೆಲುವಿನ ಅಂತರ- 26760 ಮತಗಳು.

ಶ್ರೀರಂಗಪಟ್ಟಣ: ಜೆಡಿಸ್-ಕಾಂಗ್ರೆಸ್ ಕಾದಾಟದ ಮಧ್ಯೆ ಬಿಜೆಪಿಯ ಕಿಚ್ಚು

ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರವು ತುಸು ಭಿನ್ನವಾಗಿದೆ. ಈ ಕ್ಷೇತ್ರದಲ್ಲಿ ಪಕ್ಷಗಳ ಕಾದಾಟದ ಬದಲಿಗೆ ಇಬ್ಬರ ವ್ಯಕ್ತಿಗಳ ನಡುವಿನ ಹೋರಾಟ ಎನ್ನಬಹುದು. ಈ ಬಾರಿಯೂ ಜೆಡಿಎಸ್‌ನಿಂದ ರವೀಂದ್ರ ಶ್ರೀಕಂಠಯ್ಯ ಮತ್ತು ಕಾಂಗ್ರೆಸ್‌ನಿಂದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಕಣದಲ್ಲಿದ್ದಾರೆ. ಈ ಮಧ್ಯೆ, ಸಂಸದೆ ಸುಮಲತಾ ಅವರು ಬಿಜೆಪಿಯಿಂದ ಇಂಡುವಾಳು ಸಚ್ಚಿದಾನಂದ್ ಅವರನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವು ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕು. ಕಳೆದ ಬಾರಿ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ 1,01,307 ಹಾಗೂ ಕಾಂಗ್ರೆಸ್‌ನ ರಮೇಶ್ ಬಾಬು ಬಂಡಿಸಿದ್ದೇಗೌಡ 57619 ಮತ ಪಡೆದಿದ್ದರು. ಗೆಲುವಿನ ಅಂತರ- 43688 ಮತಗಳು.

ಮೇಲುಕೋಟೆ: ಪುಟ್ಟರಾಜು ವರ್ಸಸ್ ದರ್ಶನ್, ಯಾರಿಗೆ ಗೆಲುವಿನ ದರ್ಶನ?

ಬಾರಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬದಲಿಗೆ ದಿವಂಗತ ರೈತ ನಾಯಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿದೆ. ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಸಿ ಎಸ್ ಪುಟ್ಟರಾಜು ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಜೆಡಿಎಸ್ ಕ್ಲೀನ್ ಸ್ವಿಪ್ ಮಾಡುವಲ್ಲಿ ಇವರ ಕೊಡುಗೆಯೂ ಅನನ್ಯವಾಗಿದೆ ಎಂಬುದು ಕಾಂಗ್ರೆಸ್ ಅಂಬೋಣ. ಹಾಗಾಗಿ, ಅವರನ್ನು ಸೋಲಿಸಲು ದರ್ಶನ್‌ಗೆ ಕಾಂಗ್ರೆಸ್ ಬೆಂಬಲ ನೀಡಿದೆ. ದರ್ಶನ್ ಮತ್ತು ಪುಟ್ಟರಾಜು ಮಧ್ಯೆ ಸದ್ಯ ನೇರ ಹಣಾಹಣಿ ಇದೆ. ಈ ಇಬ್ಬರ ನಡುವೆ ಬಿಜೆಪಿಯಿಂದ ಡಾ ಇಂದ್ರೇಶ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನ ಸಿ ಎಸ್ ಪುಟ್ಟರಾಜು ಅವರು 96003 ಮತ್ತು ದರ್ಶನ್ ಪುಟ್ಟಣ್ಣಯ್ಯ 73,779 ಮತ ಗಳಿಸಿದ್ದರು. ಗೆಲುವಿನ ಅಂತರ- 22,224 ಮತ.

ನಾಗಮಂಗಲ: ಇಲ್ಲಿ ಚಲುವರಾಯಸ್ವಾಮಿ ವರ್ಸಸ್ ಸುರೇಶ್ ಗೌಡ ಫೈಟ್

ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಿದು. ಒಂದು ಕಾಲದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ದಂಡನಾಯಕರಾಗಿದ್ದ ಎನ್ ಚೆಲುವರಾಯಸ್ವಾಮಿ ಅವರು ಈಗ ಕಾಂಗ್ರೆಸ್‌ನ ಕಟ್ಟಾಳು. ಪ್ರಸಕ್ತ ಚುನಾವಣೆಯಲ್ಲೂ ಚಲುವರಾಯಸ್ವಾಮಿ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಹಾಲಿ ಶಾಸಕ ಸುರೇಶ್ ಗೌಡ ಕಣದಲ್ಲಿದ್ದಾರೆ. ವಿಶೇಷ ಎಂದರೆ, ಇವರಿಬ್ಬರೂ 2013ರ ಮುಂಚೆ ಪರಸ್ಪರ ವಿರುದ್ಧ ಪಕ್ಷದಲ್ಲಿದ್ದರು! ಪ್ರಸಕ್ತ ನಾಗಮಂಗಲದಲ್ಲಿ ಇವರಿಬ್ಬರೇ ಕದನ ಕಲಿಗಳು. ತೀವ್ರ ಪೈಪೋಟಿ ನಡೆದಿದೆ. ಈ ನಡುವೆ ಜೆಡಿಎಸ್‌ನ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ತಮ್ಮ ಪತ್ನಿ ಸುಧಾ ಶಿವರಾಮೇಗೌಡರನ್ನ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಇದು ಸ್ವಲ್ಪ ಜೆಡಿಎಸ್ ಆತಂಕಕ್ಕೆ ಕಾರಣವಾಗಿದೆ. ಜತೆಗೆ ಫೈಟರ್ ರವಿ ಕೂಡ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಕಳೆದ ಬಾರಿಯ ಜೆಡಿಎಸ್‌ನ ಸುರೇಶ್ ಗೌಡ,1,12,396 ಮತ್ತು ಕಾಂಗ್ರೆಸ್‌ನ ಎನ್ ಚೆಲುವರಾಯಸ್ವಾಮಿ 64,729 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ- 47,667 ಮತ.

ಕೆ ಆರ್ ಪೇಟೆ: ಮೇಲ್ನೋಟಕ್ಕೆ ಮಾತ್ರವಲ್ಲ ವಾಸ್ತವದಲ್ಲೂ ತ್ರಿಕೋನ ಸ್ಪರ್ಧೆ

ಇಡೀ ಜಿಲ್ಲೆಯಲ್ಲಿ ಈ ಹಿಂದೆ ಒಂದೇ ಪಕ್ಷದಲ್ಲಿದ್ದ ಮೂವರು ಅಭ್ಯರ್ಥಿಗಳು ಈಗ ಮೂರು ಪಕ್ಷಗಳಿಂದ ಪರಸ್ಪರ ಎದುರಾಳಿಗಳಾಗಿರುವ ಕ್ಷೇತ್ರವಿದು. 2013, 2018 ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಸಚಿವ ನಾರಾಯಣಗೌಡ ಆಪರೇಷನ್ ಕಮಲದ ಮೂಲಕ 2019ರಲ್ಲಿ ಬಿಜೆಪಿ ಸೇರಿದರು. ಬಳಿಕ ಶಾಸಕರಾಗಿಯೂ ಆಯ್ಕೆಯಾದರು. ಅವರೀಗ ಬಿಜೆಪಿಯಿಂದ ಮತ್ತೆ ಕಣದಲಿದ್ದಾರೆ. ಈ ಮೊದಲು ಜೆಡಿಎಸ್‌ನಲ್ಲೇ ಇದ್ದ ಬಿ ಎಲ್ ದೇವರಾಜ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಎಚ್ ಟಿ ಮಂಜುನಾಥ ಅವರಿಗೆ ದಳಪತಿಗಳು ಟಿಕೆಟ್ ನೀಡಿದ್ದಾರೆ. ಹಾಗಾಗಿ, ಬಿ ಎಲ್ ದೇವರಾಜ್ ಕೈ ಆಸರೆಗೆ ಹೋಗಿದ್ದು, ಕಾಂಗ್ರೆಸ್ ‌ಟಿಕೆಟ್ ಪಡೆದು ಕಣದಲಿದ್ದಾರೆ. ಹಾಗಾಗಿ, ಮೇಲ್ನೋಟಕ್ಕೆ ಮಾತ್ರವಲ್ಲ ವಾಸ್ತವದಲ್ಲೂ ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 2019ರ ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯ ನಾರಾಯಣಗೌಡ ಅವರು 66094 ಮತ್ತು ಜೆಡಿಎಸ್‌ನ ಬಿ ಎಲ್ ದೇವರಾಜು 56,363 ಮತ ಪಡೆದಿದ್ದರು. ಗೆಲುವಿನ ಅಂತರ- 9731 ಮತ.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

Exit mobile version