ಮೈಸೂರು: ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ, ದ್ವೇಷದ ರಾಜಕಾರಣ ನಿಮಗೆ ಶೋಭೆಯಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಪ್ರಚಾರದ ವೇಳೆ ನಡೆದ ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ಭೇಟಿ ನೀಡಿ ಸೋಮಣ್ಣ ಆರೋಗ್ಯ ವಿಚಾರಿಸಿದರು. ಸಂಸದ ಪ್ರತಾಪ್ ಸಿಂಹ ಈ ಸಂದರ್ಭದಲ್ಲಿ ಜತೆಗಿದ್ದರು. ನಿನ್ನೆ ನಡೆದ ಚಕಮಕಿಯಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಭುಜ, ಕಾಲಿಗೆ ಗಾಯವಾಗಿತ್ತು. ರಾತ್ರಿ ಚಿಕಿತ್ಸೆ ನಂತರ ತುರ್ತು ಚಿಕಿತ್ಸಾ ಘಟಕದಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು.
ಬಳಿಕ ಮಾತನಾಡಿದ ಸೋಮಣ್ಣ, ಇದು ನೋವಿನ ಸಂಗತಿ. ನಮ್ಮ ಪ್ರಮುಖ ಕಾರ್ಯಕರ್ತನಿಗೆ ಮೂಳೆ ಡಿಸ್‌ಲೊಕೇಟ್ ಆಗಿದೆ. ಅನಸ್ತೇಶಿಯ ಕೊಟ್ಟು ಸರಿ ಮಾಡಿದ್ದಾರೆ. ಆತ ರೆಸ್ಟ್ ಮಾಡಬೇಕು. ಮುಂದೆ ಸರಿಯಾಗಲಿಲ್ಲ ಅಂದರೆ ಆಪರೇಷನ್ ಮಾಡಬೇಕಾಗುತ್ತದೆ. ಹತಾಶೆ ಮನೋಭಾವದಲ್ಲಿ ಈ ರೀತಿ ಮಾಡಿದ್ದಾರೆ. ವರುಣ ಕ್ಷೇತ್ರದಲ್ಲಿ ಒಂದು ಗುಂಪು ರೆಡಿಯಾಗಿದೆ. ನಾನು ಎಲ್ಲಿ ಪ್ರಚಾರಕ್ಕೆ ಹೋಗುತ್ತೇನೋ ಅಲ್ಲಿ ಬಂದು ಅಡ್ಡಿಪಡಿಸುತ್ತಾರೆ. ರಸ್ತೆಗೆ ನೊಗ ಅಡ್ಡ ಇಟ್ಟು ಪ್ರಚಾರಕ್ಕೆ ಅಡ್ಡಿ ಮಾಡಿದ್ದರು. ಹೀಗಾದರೆ ಈ ರಾಜ್ಯದ ವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಎಂದು ಪ್ರಶ್ನಿಸಿದರು.
ನಾನು ನನ್ನ ಕ್ಷೇತ್ರದಲ್ಲಿ ಜನರಿಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅದನ್ನು ಗೂಗಲ್ ಹಾಕಿಕೊಂಡು ನೋಡಿ. ದ್ವೇಷದ ರಾಜಕಾರಣ ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಬೇಲಿಯೇ ಎದ್ದು ಹೊಲ ಮೇಯಬಾರದು. ಇಂತಹ ನೋವು ನಿಮ್ಮ ಸ್ವಂತ ಅಣ್ಣ ತಮ್ಮಂದಿರ ಮಕ್ಕಳಿಗೆ ಆಗಿದ್ದರೆ ನನ್ನನ್ನು ಹೇಗೆ ನೋಡುತಿದ್ದಿರಿ? ಇದು ಮುಂದುವರಿದರೆ ನಾನು ಸಹಿಸೋದಿಲ್ಲ. ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಇದ್ದಾಗ ಅವರ ಚುನಾವಣೆ ನೋಡಿದ್ದೇನೆ. ದೇವಲಾಪುರದಲ್ಲಿ ಒದೆ ತಿಂದಿದ್ದೇನೆ. ನನ್ನ ಸಮಾಜವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದೆ. ಅಂದು ನೀವು ನನ್ನಂತೆ ಮಂತ್ರಿ ಆಗಿದ್ದಿರಿ. ಇಂದು ನೀವು ಮಾಜಿ ಮುಖ್ಯಮಂತ್ರಿ ಆಗಿದ್ದೀರಿ. ನಿಮಗೆ ಇದೆಲ್ಲ ಶೋಭೆ ತರುವುದಿಲ್ಲ ಎಂದು ಸೋಮಣ್ಣ ಎಚ್ಚರಿಸಿದರು.
ಹತಾಶ ಮನೋಭಾವದಿಂದ ಹೀಗೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಅಣ್ಣನ ಮಕ್ಕಳೇ ಇದರಲ್ಲಿ ಸೇರಿಕೊಂಡಿದ್ದಾರೆ. ಪೊಲೀಸರು ಕೂಡ ಇದರಲ್ಲಿ ಕುತಂತ್ರ ಮಾಡಿದ್ದಾರೆ. ಇದು ಸೂಕ್ಷ್ಮ ಕ್ಷೇತ್ರವಾಗಿದೆ, ಗಮನಿಸಬೇಕು ಎಂದು ಚುನಾವಣೆ ಆಯೋಗಕ್ಕೆ ದೂರು ಕೊಡುತ್ತೇನೆ. ನನಗೆ ಯಾವುದೇ ರಕ್ಷಣೆ ಬೇಡ, ವರುಣ ಕ್ಷೇತ್ರದ ಜನರೇ ರಕ್ಷಣೆ ಎಂದು ಸೋಮಣ್ಣ ನುಡಿದಿದ್ದಾರೆ.