Site icon Vistara News

Karnataka Election 2023: ಸಕ್ಕರೆ ನಾಡಿನಲ್ಲಿ ಇಂದು ಯೋಗಿ ಹವಾ, ಒಕ್ಕಲಿಗರಿಗೆ ನಾಥಪಂಥದ ಮೂಲಕ ಗಾಳ?

Yogi Adityanath waves to media in Mandya

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪರ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಪ್ರಚಾರ ನಡೆಸಲಿದ್ದಾರೆ (Karnataka Election 2023).

ಜೆಡಿಎಸ್ ಭದ್ರಕೋಟೆಗೆ ಇಂದು ಯುಪಿ ಸಿಎಂ ಯೋಗಿ (Yogi Adityanath) ಲಗ್ಗೆ ಹಾಕಲಿದ್ದು, ಮಂಡ್ಯದ ಅಭ್ಯರ್ಥಿ ಅಶೋಕ್ ಜಯರಾಂ (Ashok Jayaram) ಪರ ಪ್ರಚಾರ ನಡೆಸಲಿದ್ದಾರೆ. ಯೋಗಿ ಸಭೆಗಾಗಿ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, ಹತ್ತು ಸಾವಿರ ಜನ‌ ಸೇರುವ ನಿರೀಕ್ಷೆ ಇದೆ.

ಬೆಳಗ್ಗೆ 11ಕ್ಕೆ ಪಿಇಎಸ್ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಯೋಗಿ ಬಳಿಕ ರೋಡ್‌ ಶೋನಲ್ಲಿ ಸಾಗಿ ವೇದಿಕೆಗೆ ಆಗಮಿಸಲಿದ್ದಾರೆ. ಮಂಡ್ಯ ನಗರದಲ್ಲಿ ಸಂಜಯ ವೃತ್ತದಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್ ವರೆಗೆ ರೋಡ್ ಶೋ ನಡೆಯಲಿದೆ.

ಯೋಗಿ ಆದಿತ್ಯನಾಥ (Yogi Adityanath) ಅವರ ಮಂಡ್ಯ ಭೇಟಿ ಇಲ್ಲಿ ಗಣನೀಯವಾಗಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಕಾಲಭೈರವೇಶ್ವರ ಸ್ವಾಮಿಯನ್ನು ಹೆಚ್ಚಾಗಿ ಆರಾಧಿಸುವ ಜನತೆ ಮಂಡ್ಯದಲ್ಲಿ ಇದ್ದಾರೆ. ದಕ್ಷಿಣ ಭಾರತದಲ್ಲಿರುವ ಏಕೈಕ ನಾಥ ಪಂಥದ ಮಠ ಆದಿಚುಂಚನಗಿರಿ ಆಗಿದ್ದು, ಇಲ್ಲಿ ಕಾಲಭೈರವೇಶ್ವರನ ದೇವಾಲಯ ಇದೆ. ಯೋಗಿ ಆದಿತ್ಯನಾಥರೂ ಸಹ ನಾಥಪಂಥದವರು. ಹೀಗಾಗಿ ಅವರನ್ನು ಕರೆಸಿ ಒಕ್ಕಲಿಗ ಮತಗಳನ್ನು ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ.

ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳ ಪೈಕಿ ಮಳವಳ್ಳಿ ಮೀಸಲು ಕ್ಷೇತ್ರ ಹೊರತುಪಡಿಸಿದರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಂದಿನ ಯೋಗಿ ಆದಿತ್ಯನಾಥರ ಕಾರ್ಯಕ್ರಮದಲ್ಲಿ ಎಲ್ಲಾ ಅಭ್ಯರ್ಥಿಗಳೂ ಭಾಗಿಯಾಗಲಿದ್ದಾರೆ. ಎಲ್ಲಾ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಆಯೋಜಿಸಿ ಒಕ್ಕಲಿಗ ಮತಗಳನ್ನು ಸೆಳೆಯಲು ಬಿಜೆಪಿ ಯೋಜಿಸಿದೆ.

ಇದನ್ನೂ ಓದಿ: Karnataka Election: ಏ.29ರಿಂದ ರಾಜ್ಯದಲ್ಲಿ ಮೋದಿ ಹವಾ; ಅಮಿತ್‌ ಶಾ, ಯೋಗಿ, ನಡ್ಡಾ ಪ್ರಚಾರದ ಫುಲ್‌ ಡೀಟೇಲ್ಸ್‌ ಇಲ್ಲಿದೆ

Exit mobile version