ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಈಗ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹಾಗೂ ಅವರ ಪುತ್ರ ಚೇತನ್ ಬುಧವಾರ (ಏ. 5) ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದು, ಮಂಡ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಶಪಥ ಮಾಡಿದ್ದಾರೆ. ಈ ಮೂಲಕ ಮರಳಿ ಬಿಜೆಪಿಗೆ ಬಂದಿದ್ದಾರೆ.
ಇವರ ಜತೆಗೆ ಕಲ್ಯಾಣ ಕರ್ನಾಟಕ ಭಾಗದ ವೈದ್ಯ, ಕೋಲಿ ಸಮಾಜದ ಮುಖಂಡ ಯೋಗೇಶ್ ಬೆಸ್ತದ್, ರಾಮದುರ್ಗದ ಕಾಂಗ್ರೆಸ್ ಮುಖಂಡ ಕುರುಬ ಸಮುದಾಯದ ಚಿಕ್ಕರೇವಣ್ಣ, ರಾಮಪ್ಪ, ಮಂಜು ಹಾಗೂ ಅವರ ಬೆಂಬಲಿಗರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಡಾ. ಕೆ. ಸುಧಾಕರ್, ಗೋಪಾಲಯ್ಯ, ಸಿ.ಟಿ. ರವಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಮಂಡ್ಯ ಜಿಲ್ಲಾಧ್ಯಕ್ಷ ಉಮೇಶ್ ಭಾಗಿಯಾಗಿದ್ದರು.
ಇದನ್ನೂ ಓದಿ: Murder case : ಕೋಳಿ ಪದಾರ್ಥದ ವಿಷಯದಲ್ಲಿ ಜಗಳ; ಮಗನನ್ನು ಬಡಿಗೆಯಿಂದ ಹೊಡೆದು ಕೊಂದ ತಂದೆ
ಬಿಜೆಪಿ ಕಟ್ಟುಪಾಡು ಗೊತ್ತಿದೆ, ಒಪ್ಪಿಯೇ ಬಂದಿದ್ದೇನೆ- ಶಿವರಾಮೇಗೌಡ
ಇದುವರೆಗೂ ನಾನು ಮಂಡ್ಯ, ನಾಗಮಂಗಲದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರನಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ, ಆ ಎರಡು ಪಕ್ಷದಲ್ಲಿ ಈಗ ಉಸಿರುಗಟ್ಟುವ ವಾತಾವರಣವಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿ ಪಕ್ಷವನ್ನು ಕಟ್ಟಬೇಕೆಂಬ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೇರಬೇಕು ಎಂದು ಯೋಚಿಸಿ ಪಕ್ಷ ಕಟ್ಟಲು ನಾನು ಸಿದ್ಧನಾಗಿರುವೆ. ನನಗೆ ಕಟ್ಟುಪಾಡುಗಳು ಗೊತ್ತಿದೆ. ಅದನ್ನೆಲ್ಲ ಒಪ್ಪಿಯೇ ಬಂದಿದ್ದೇನೆ ಎಂದು ಎಲ್.ಆರ್. ಶಿವರಾಮೇಗೌಡ ಹೇಳಿದರು.
ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ಬೇರೆ ಪಕ್ಷಗಳ ಬಗ್ಗೆ ನಾನು ಮಾತನಾಡಲ್ಲ. ಮೋದಿಯವರು ಎಲ್ಲೆಡೆ ಅಭಿವೃದ್ಧಿ ಮಾಡುತ್ತಿದ್ದಾರೆ. ಮಂಡ್ಯದ ನೆಲದಲ್ಲಿ ಮೋದಿ ಬಂದು ಬೃಹತ್ ಸಮಾವೇಶದಲ್ಲಿ ಪಕ್ಷ ಕಟ್ಟುವ ಕರೆ ಕೊಟ್ಟಿದ್ದಾರೆ. ಈಗ ನಾನು ಬಿಜೆಪಿಗೆ ಬಂದಿದ್ದೇನೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ನಾನು ಸಿದ್ಧನಿದ್ದೇನೆ. ಕಾಂಗ್ರೆಸ್-ಜೆಡಿಎಸ್‌ನವರು ದೊಂಬರಾಟ ಆಡುತ್ತಿದ್ದಾರೆ. ಮಂಡ್ಯದಲ್ಲಿ ಕಮಲವನ್ನು ಅರಳಿಸುತ್ತೇವೆ. ಇದುವರೆಗೆ ಜಿಲ್ಲೆಯಲ್ಲಿ ಮೂರನೇ ಶಕ್ತಿಯಾಗಿದ್ದ ಬಿಜೆಪಿ, ಈ ಬಾರಿ ಪ್ರಥಮ ಶಕ್ತಿ ಆಗಿ ಹೊರಹೊಮ್ಮುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Pocso Case : 18 ವರ್ಷದೊಳಗಿನ ಬಾಲಕಿ ಪ್ರೀತಿಗೆ ಅನುಮತಿಸಬಹುದೇ ಹೊರತು ದೈಹಿಕ ಸಂಪರ್ಕಕ್ಕಲ್ಲ ಎಂದ ಕೋರ್ಟ್
ಜೆಡಿಎಸ್ ವಿರುದ್ಧ ತಿರುಗಿಬಿದ್ದಿರುವ ಶಿವರಾಮೇಗೌಡ
ಈ ಹಿಂದೆ ಎಲ್.ಆರ್. ಶಿವರಾಮೇಗೌಡ ಅವರು ಜೆಡಿಎಸ್ ಕಾರ್ಯಕರ್ತರೊಬ್ಬರೊಂದಿಗೆ ಮಾತನಾಡಿದ್ದರು ಎನ್ನಲಾದ ಪೋನ್ ಸಂಭಾಷಣೆ ಆಡಿಯೊ ಸಖತ್ ವೈರಲ್ ಆಗಿತ್ತು. ಇದರಲ್ಲಿ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಪದಗಳ ಬಳಸಿದ್ದರು. ಇದೇ ಕಾರಣಕ್ಕಾಗಿ ಜೆಡಿಎಸ್ ಪಕ್ಷದಿಂದಲೇ ಉಚ್ಚಾಟನೆಗೆ ಒಳಗಾಗಿದ್ದರು. ಇದು ಶಿವರಾಮೇಗೌಡ ಅವರನ್ನು ಸಾಕಷ್ಟು ಕೆರಳಿಸಿತ್ತು. ಈ ಕಾರಣಕ್ಕಾಗಿ ಅವರು ಜೆಡಿಎಸ್ ವಿರುದ್ಧ ತಿರುಗಿಬಿದ್ದಿದ್ದರು. ಆ ಸಂದರ್ಭದಲ್ಲಿ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡಬೇಕು. ನಾಗಮಂಗಲ ಕ್ಷೇತ್ರದಲ್ಲಿ ತಮ್ಮ ನೆಲೆ ಸ್ಥಾಪಿಸಬೇಕು ಎಂಬ ಪಣ ತೊಟ್ಟಿದ್ದರು. ಈ ಕಾರಣಕ್ಕಾಗಿ 2022ರ ಮೇ ತಿಂಗಳಿನಲ್ಲಿ ನಾಗಮಂಗಲದಲ್ಲಿ ಮನೆ ನಿರ್ಮಾಣಕ್ಕೂ ಮುಂದಾಗಿದ್ದರು.
ಇದರ ಜತೆಗೆ ಯಾವುದೇ ಮದುವೆ, ಸಾವು, ತಿಥಿ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಕ್ಷೇತ್ರದಲ್ಲಿ ಭೇಟಿ ನೀಡುತ್ತಲೇ ಬಂದಿದ್ದಾರೆ. ಅಲ್ಲದೆ, ಹಳ್ಳಿ ಹಳ್ಳಿಯಲ್ಲೂ ಬೆಂಬಲಿಗರ ಪಡೆ ಕಟ್ಟಲು ಪ್ಲ್ಯಾನ್ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸಿದ್ದರು.
ಶಿವರಾಮೇಗೌಡ ರಾಜಕೀಯ ಜೀವನ
ಶಿವರಾಮೇಗೌಡ ಅವರು 1996ರಲ್ಲಿ ಜನತಾ ದಳದಲ್ಲಿದ್ದರು. ಅದಾಗಿ ಮೂರು ವರ್ಷಕ್ಕೆ ಅಂದರೆ 1999ರ ವೇಳೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2009ರಲ್ಲಿ ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 1,44,875 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದುಕೊಂಡು ಸೋಲು ಕಂಡಿದ್ದರು. ಈ ಮಧ್ಯೆ ಒಮ್ಮೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದರು. 2014ರಲ್ಲಿ ಕಾಂಗ್ರೆಸ್‌ನಿಂದ ಸ್ಥಳೀಯ ಸಂಸ್ಥೆಗಳಿಂದ ಸ್ಪರ್ಧೆ ಮಾಡಿ ವಿಧಾನ ಪರಿಷತ್‌ಗೆ ಸ್ಪರ್ಧಿಸಿ ಸೋಲುಕಂಡಿದ್ದರು. 2018ರಲ್ಲಿ ಕೇವಲ ಆರು ತಿಂಗಳ ಅವಧಿಗೆ ನಡೆದ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: Bombay High Court: ಮದುವೆ ಆಗದ ಮಾತ್ರಕ್ಕೆ ಸಂಬಂಧದಲ್ಲಿದ್ದ ಮಹಿಳೆ ರೇಪ್ ದೂರು ನೀಡಲಾಗದು: ಬಾಂಬೆ ಹೈಕೋರ್ಟ್
ಈಗ ಬಿಜೆಪಿ ನಾಗಮಂಗಲ ಅಭ್ಯರ್ಥಿ?
ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಫೈಟರ್ ರವಿ ಈ ಬಾರಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ. ಆದರೆ, ರೌಡಿಶೀಟರ್ ಹಿನ್ನೆಲೆ ಹೊಂದಿರುವ ಕಾರಣ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂಬ ಕಾರಣಕ್ಕೆ ಬಿಜೆಪಿ ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಇದೇ ವೇಳೆ ನಾಗಮಂಗಲ ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಎಲ್.ಆರ್. ಶಿವರಾಮೇಗೌಡ ಅವರೇ ಪ್ರಬಲ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ ಎನ್ನಲಾಗಿದೆ. ಆದರೆ, ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.