ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದೆ. ಈ ವೇಳೆ ರಾಜಕೀಯ ಚಟುವಟಿಕೆ ಸಹ ಬಿರುಸುಗೊಂಡಿದೆ. ಈ ನಡುವೆ ಎಲ್ಲ ಪಕ್ಷಗಳೂ ಗೆಲುವಿಗೆ ಕಸರತ್ತು ನಡೆಸುತ್ತಿವೆ. ಇನ್ನು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡುವಿಕೆ, ಉಡುಗೊರೆ ಹಂಚುವಿಕೆಯಲ್ಲಿ ನಿರತರಾಗುವ ಮೂಲಕ ಮತದಾರರ ಮನಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಕೆಲವರಿಗೆ ಜನವಿರೋಧಿ ಬಿಸಿ ಕೂಡಾ ತಟ್ಟಿದೆ. ಶಾಸಕ ಎಸ್.ಎ. ರಾಮದಾಸ್‌ಗೂ ಸಹ ಈಗ ವಿರೋಧದ ಬಿಸಿ ತಟ್ಟುತ್ತಿದೆ. ಈಚೆಗಷ್ಟೇ ಬ್ರಾಹ್ಮಣ ಸಮುದಾಯದವರು ಇವರ ವಿರುದ್ಧ ಸಿಡಿದೆದ್ದಿದ್ದರು. ಇವರ ವಿರೋಧದ ಮಧ್ಯೆಯೇ ಈಗ ವೀರಶೈವ-ಲಿಂಗಾಯತರು ಸಹ ರಾಮದಾಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೆ, ಈ ಬಾರಿ ತಮ್ಮ ಸುಮುದಾಯದವರಿಗೇ ಟಿಕೆಟ್ ಕೊಡಿ ಎಂದು ತಗಾದೆ ತೆಗೆಯಲಾಗಿದೆ.
4ನೇ ಬಾರಿ ಶಾಸಕರಾಗಿ ಅಯ್ಕೆಯಾಗಿರುವ ರಾಮದಾಸ್ ಅವರು ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಿಂದಿನ ಅನೇಕ ಕಹಿ ಘಟನೆಗಳಿಂದ ಅವರು ಪಾಠ ಕಲಿತಂತೆ ಕಾಣುತ್ತಿಲ್ಲ. ಈಗಾಗಲೇ ಬ್ರಾಹ್ಮಣ ಸಭಾ ಮುಖಂಡರು ರಾಮದಾಸ್ ನಡವಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡಬೇಡಿ ಎಂದು ಒತ್ತಾಯ ಮಾಡಿದ್ದರು.
ಇದನ್ನೂ ಓದಿ: Viral News : ಕಚ್ಚಾ ಬಾದಾಮ್ ಗಾಯಕನಿಗೆ ಮೋಸ; ಕಾಪಿರೈಟ್ಸ್ ವಿಚಾರದಲ್ಲಿ ದೂರು ದಾಖಲಿಸಿದ ಭುಬನ್
ಕೆ.ಆರ್. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಈ ಬಾರಿಯ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ರಾಮದಾಸ್ ಅವರು ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ವೀರಶೈವ ಸಮುದಾಯದ ಒಬ್ಬ ಮುಖಂಡರನ್ನೂ ಬೆಳೆಸಲಿಲ್ಲ. ನಾವು ಭೇಟಿ ಮಾಡಲು ಹೋದಾಗ ಭೇಟಿಗೆ ಸಿಗುತ್ತಿಲ್ಲ. ನಾವು ಬಿಜೆಪಿ ಹೈಕಮಾಂಡ್‌ಗೆ ಈ ಬಗ್ಗೆ ಮನವಿ ಮಾಡುತ್ತೇವೆ. ವೀರಶೈವ-ಲಿಂಗಾಯತ ಮತದಾರರ ಜಾಗೃತಿ ಒಕ್ಕೂಟದ ಸಂಚಾಲಕ ಕೆ.ಸಿ. ಬಸವರಾಜಸ್ವಾಮಿ ಹೇಳಿದ್ದಾರೆ.