Site icon Vistara News

Karnataka Election : ಸಿ.ಟಿ ರವಿ ಆಯ್ತು, ಈಗ ಆರ್‌ ಅಶೋಕ್‌ಗೂ ಮುಖ್ಯಮಂತ್ರಿ ಆಗೋ ಆಸೆ!

karnataka election after ct ravi r ashok also wants to become chief minister

karnataka election after ct ravi r ashok also wants to become chief minister

ರಾಮನಗರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಹುಮತ ಬರುತ್ತದೋ ಇಲ್ಲವೋ ಎನ್ನುವ ಬಗ್ಗೆ ಬಿಜೆಪಿಯ ನಾಯಕರು ತಲೆ ಕೆಡಿಸಿಕೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಹುದ್ದೆಯ (Chief Minister post) ವಿಚಾರವೂ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿದೆ. ಕೆಲವು ನಾಯಕರು ಇಂಥವರು ಮುಖ್ಯಮಂತ್ರಿ ಆಗಲಿ ಎಂದು ಶಿಫಾರಸು ಮಾಡಿದರೆ, ಇನ್ನು ಕೆಲವರು ನಾವ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಶೇಷವೆಂದರೆ ಇದುವರೆಗೆ ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ನಡೆಯುತ್ತಿದ್ದ ಚರ್ಚೆ ಈಗ ಒಕ್ಕಲಿಗ ಮುಖ್ಯಮಂತ್ರಿ ಕಡೆಗೆ ತಿರುಗಿದೆ.

ರಾಜ್ಯದಲ್ಲಿ ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರ ನೇತೃತ್ವದಲ್ಲೇ ಚುನಾವಣೆ ನಡೆಯುತ್ತಿದೆ. ಆದರೆ, ಮುಂದೆಯೂ ಅವರೇ ಮುಖ್ಯಮಂತ್ರಿನಾ ಎನ್ನುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಹೀಗಾಗಿ ತಾವೂ ಆಗಬಹುದು ಎನ್ನುವ ಆಸೆ ಕೆಲವರಿಗೆ ಚಿಗುರಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಒಂದು ಕಡೆ ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿಕೊಂಡಿದ್ದರೆ, ಇತ್ತ ಕಂದಾಯ ಸಚಿವರಾಗಿರುವ ಆರ್‌. ಅಶೋಕ್‌ ಹೈಕಮಾಂಡ್‌ ನನ್ನನ್ನೂ ಸಿಎಂ ಮಾಡಬಹುದು ಎಂದಿದ್ದಾರೆ.

ಏನು ಬೇಕಾದರೂ ಆಗಬಹುದು ಎಂದ ಆರ್‌. ಅಶೋಕ್‌

ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಆರ್‌. ಅಶೋಕ್‌ ಅವರು ತಾನೇ ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ.

ʻʻಹಿಂದೆಲ್ಲ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಕಣಕ್ಕಿಳಿದರೆಲ್ಲ ಓಡಿ ಹೋಗುತ್ತಿದ್ದರು. ಆದರೆ, ಈ ಬಾರಿ ನಾನು ಬಂದ ಮೇಲೆ ಡಿ.ಕೆ ಶಿವಕುಮಾರ್ ಅವರ ಶ್ರೀಮತಿಯವರು ಕೂಡ ಪ್ರಚಾರಕ್ಕೆ ಬರುವ ಹಾಗಾಗಿದೆ. ನಾನು ಎಲ್ಲೆಲ್ಲಿ ಹೋಗ್ತೇನೋ ಅಲ್ಲಿಗೆ ಸುರೇಶ್ ಕೂಡ ಹೋಗ್ತಿದ್ದಾರೆ. ನಾನು ಅವರ ಹುಟ್ಟೂರಿಗೂ ಹೋಗಿ ಬಂದಿದ್ದೇನೆʼʼ ಎಂದು ಹೇಳಿದರು ಅಶೋಕ್‌.

ಮರಳೇಗವಿ ಮಠಕ್ಕೆ ಭೇಟಿ ಕೊಟ್ಟು, ಗುರುಗಳ ಆಶೀರ್ವಾದ ಪಡೆದ ಆರ್‌. ಅಶೋಕ್‌ ಅವರು, ಡಿಕೆ ಶಿವಕುಮಾರ್ ವಿರೋಧಿ ಮತಗಳು ಒಟ್ಟಾಗಿ ಚುನಾವಣೆ ಮಾಡಿದರೆ ಕಾಂಗ್ರೆಸ್‌ನ್ನು ಸೋಲಿಸಬಹುದು. ಶಿವಕುಮಾರ್ ನಾವೇ ಗೆಲ್ತೀವಿ ಅನ್ನೋ ಭ್ರಮೆಗೆ ತಕ್ಕ ಉತ್ತರ ಕೊಡಬಹುದು. ಹೀಗಾಗಿ ಜೆಡಿಎಸ್‌ ಕೂಡ ಗಮನ ಹರಿಸಬೇಕು ಎಂದರು.

ʻʻಹಿಂದೆಲ್ಲ ಎಲೆಕ್ಷನ್‌ಗೆ ನಿಂತೋರೆಲ್ಲ ಓಡಿ ಹೋಗ್ತಿದ್ರು. ಆದರೆ ನಾನು ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ. ನನಗೆ ಹೋದ ಕಡೆಗಳೆಲ್ಲಾ ಆರತಿ ಎತ್ತಿ ಜನರು ಸ್ವಾಗತ ಮಾಡ್ತಿದ್ದಾರೆ. ನಾನು ಬಂದ ಮೇಲೆ ಶಿವಕುಮಾರ್ ಗೆ ಸೋಲಿನ ಭಯ ಕಾಡ್ತಿದೆ. ಅವರಿಗೆ ಸೋಲಿನ ಬಗ್ಗೆ ಅರಿವು ಆದ ಕೂಡಲೇ ಹೋಮ ಹವನ ಮಾಡಿಸಿದ್ದಾರೆʼʼ ಎಂದು ಹೇಳಿದರು.

ಹಾಗಿದ್ದರೆ, ಕನಕಪುರದಲ್ಲಿ ಗೆದ್ದರೆ ವರಿಷ್ಠರು ಅಶೋಕ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುತ್ತಾರಾ ಎಂಬ ಪ್ರಶ್ನೆಗೆ, ಏನು ಬೇಕಾದರೂ ಆಗಬಹುದು ವರಿಷ್ಠರು ಆ ಬಗ್ಗೆಯೂ ನಿರ್ಧಾರ ಮಾಡಬಹುದು ಎಂದರು ಅಶೋಕ್. ಆ ಮೂಲಕ ಕನಕಪುರದಲ್ಲಿ ಗೆದ್ದು ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.

ಸಿ.ಟಿ. ರವಿ ಬೆಂಬಲಕ್ಕೆ ನಿಂತ ಕೆ.ಎಸ್‌. ಈಶ್ವರಪ್ಪ

ಅತ್ತ ಇತ್ತೀಚೆಗಷ್ಟೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ರಾಷ್ಟ್ರವಾದಿ ನಾಯಕ ಸಿ.ಟಿ. ರವಿ ಅವರೇ ಸಿಎಂ ಆಗಬಹುದು ಎನ್ನುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಿ.ಟಿ. ರವಿ ಕೂಡಾ ಯಾಕಾಗಬಾರದು ಎನ್ನುತ್ತಿದ್ದಾರೆ.

ʻʻಸಿಟಿ ರವಿ ಸಿಎಂ ಆಗುವ ಎಲ್ಲಾ ಯೋಗ್ಯತೆ ಇದೆʼʼ ಎಂದು ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ ಅವರು, ʻʻರಾಜ್ಯದ ಜನ ಯಾವತ್ತು ಸಿ.ಟಿ. ರವಿ ಮುಖ್ಯಮಂತ್ರಿ ಯಾಗಲಿ ಎಂದು ಅಪೇಕ್ಷೆ ವ್ಯಕ್ತಪಡಿಸುತ್ತಾರೋ ಅವತ್ತು ಖಂಡಿತಾ ನಾನು ಕ್ಲೈಮ್ ಮಾಡುತ್ತೇನೆ. ಅದುವರೆಗೂ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೆ. ಅವರ ನೇತೃತ್ವದಲ್ಲಿ ವಿಧಾನ ಸಭಾ ಚುನಾವಣೆ ಎದುರಿಸುತ್ತೇವೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ : Karnataka Election 2023: ಡಿಕೆಶಿ, ಸಿದ್ದು ಜಾತಿವಾದಿ; ರಾಷ್ಟ್ರವಾದಿ ಸಿ ಟಿ ರವಿ ಸಿಎಂ ಆಗಲಿ! ಈಶ್ವರಪ್ಪ ಪುನರುಚ್ಚಾರ

karnataka election after ct ravi r ashok also wants to become chief minister

Exit mobile version