ಮೈಸೂರು: ಅಮಿತ್ ಶಾ ಅವರು ಯಾವಾಗ ದೇವೇಗೌಡರು ಭ್ರಷ್ಟರು ಅಂದರೋ ಆಗಲೇ ಅವರ ಪತನ ಆರಂಭ ಆಗಿಹೋಗಿದೆ. ಅವರು ದೇವೇಗೌಡರ ಉಗುರಿಗೂ ಸಮವಲ್ಲ ಎಂದು ಆಕ್ರೋಶದಿಂದ ಮಾತನಾಡಿದ್ದಾರೆ (Karnataka Election) ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ.
ಕೇಂದ್ರ ಗೃಹ ಸಚಿವರಾಗಿರುವ ಬಿಜೆಪಿ ವರಿಷ್ಠ ನಾಯಕ ಅಮಿತ್ ಶಾ ಅವರು ಭಾನುವಾರ ರಾಜ್ಯಕ್ಕೆ ಆಗಮಿಸಿದ ವೇಳೆ ಜೆಡಿಎಸ್ ಮೇಲೆ ನಡೆಸಿದ ವಾಗ್ದಾಳಿಯ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮತ್ತು ಅಮಿತ್ ಶಾ ಮೇಲೆ ಕೆಂಡಾಮಂಡಲರಾದರು.
ʻʻಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರಾಗಲೀ, ನಾನಾಗಲೀ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ತೋರಿಸಿ. ಒಂದೇ ಒಂದು ಉದಾಹರಣೆ ಕೊಡಿ. ಈಗಿನ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಿರುವಾಗ ನೀವು ನಮ್ಮ ಬಗ್ಗೆ ಮಾತನಾಡುತ್ತೀರಿʼʼ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡ ಅವರು, ಅಮಿತ್ ಶಾ ಅವರು ದೇವೇಗೌಡರ ಉಗುರಿಗೂ ಸಮವಲ್ಲ ಎಂದು ಜರಿದರು.
ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲ ಎಂಬ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದ ಅವರು, ನಾನು ನನ್ನ ಪಕ್ಷ ಕಟ್ಟುತ್ತೀದ್ದೇನೆ. ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನಾ? ಯಾರಾದರೂ ನಿಮ್ಮ ಬಳಿ ಅರ್ಜಿ ಹಾಕಿಕೊಂಡು ಬಂದಿದ್ದೇವಾ? ಹೊಂದಾಣಿಕೆ ಮಾಡಿಕೊಳ್ಳಲು ನಾನು ಬಿಜೆಪಿಯವರ ಮನೆ ಬಾಗಿಲಿದೆ ಹೋಗಿಲ್ಲ. ನಾನು ಅಮಿತ್ ಶಾ ಮನೆಗೆ ಹೋಗಿದ್ದೀನಾ? ಹೊಂದಾಣಿಕೆ ಬಗ್ಗೆ ಯಾಕೆ ಮಾತನಾಡ್ತೀರಿ ಎಂದು ಪ್ರಶ್ನಿಸಿದರು.
ಅನ್ನ ಮುಚ್ಚಿದ ಹಾಗೆ ಪಕ್ಷವನ್ನೂ ಮುಚ್ಚುತ್ತಾರೆ
ʻʻದೇವೇಗೌಡರನ್ನು ಭ್ರಷ್ಟರು ಎಂದು ಕೆಣಕಿದ್ದಾರೆ. ಬಿಜೆಪಿ ಪತನ ಕರ್ನಾಟಕದಿಂದಲೇ ಆರಂಭವಾಗಲಿದೆʼʼ ಎಂದು ಭವಿಷ್ಯ ನುಡಿದ ಎಚ್.ಡಿ.ಕುಮಾರಸ್ವಾಮಿ ಅವರು, ದೇವೇಗೌಡರ ಕುಟುಂಬವನ್ನು ಭ್ರಷ್ಟರು ಎನ್ನುವ ಮೂಲಕ ಅಮಿತ್ ಶಾ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿದ್ದಾರೆ. ದೇವೇಗೌಡರನ್ನು ಟೀಕಿಸುವ ಮೂಲಕ ಬಿಜೆಪಿಯ ಅಂತ್ಯ ಶುರುವಾಗಿದೆ. ನಮ್ಮ ಕುಟುಂಬವನ್ನು ಭ್ರಷ್ಟರು ಎನ್ನಲಿ ಒಂದು ಉದಾಹರಣೆ ಹೇಳಿʼʼ ಎಂದು ಸವಾಲು ಹಾಕಿದರು.
ಮಂಡ್ಯ ಜನ ಸಂಕಲ್ಪ ಯಾತ್ರೆಗೆ ನಿರೀಕ್ಷಿಸಿದಷ್ಟೂ ಜನ ಸೇರದೆ ಇರುವುದರಿಂದ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದ ಅನ್ನವನ್ನು ಮಣ್ಣಿನಲ್ಲಿ ಹೂತು ಹಾಕಿದರು. ಅನ್ನವನ್ನು ಗುಂಡಿಗೆ ಹಾಕಿ ಮುಚ್ಚಿದ ಹಾಗೆ ಬಿಜೆಪಿ ಅವರ ಗುಂಡಿ ಅವರೇ ಮುಚ್ಚಿಕೊಳ್ಳುತ್ತಿದ್ದಾರೆ ಎಂದರು ಕುಮಾರಸ್ವಾಮಿ.
ನಿಮ್ಮ ರಾಜಕಾರಣ ಉತ್ತರ ಭಾರತದಲ್ಲಿ ಇಟ್ಟುಕೊಳ್ಳಿ
ʻʻದೇಶದಲ್ಲಿ 800ಕ್ಕೂ ಹೆಚ್ಚು ಶಾಸಕರನ್ನ ಖರೀದಿ ಮಾಡಿರುವ ಇತಿಹಾಸ ಇದ್ದರೆ ಅದು ಬಿಜೆಪಿಯದ್ದು. ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿದೆ ಬಿಜೆಪಿ. ಸಾಮರ್ಥ್ಯ ಇಲ್ಲದ ಕಡೆ ಖರೀದಿ ಮಾಡಲು ಈಗಾಗಲೇ ಬಿಜೆಪಿ ಹುನ್ನಾರ ನಡೆಸುತ್ತಿದೆʼʼ ಎಂದು ಆರೋಪಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದಿಂದ ಬಿಜೆಪಿ ಪಕ್ಷವನ್ನು ಹೊರಗಟ್ಟಲು ಜೆಡಿಎಸ್ ಪಣ ತೊಟ್ಟಿದೆ. ನನ್ನ ಪಕ್ಷವನ್ನು ಕೆಣಕಿದ್ದೀರಿ, ನಿಮ್ಮ ರಾಜಕಾರಣ ಉತ್ತರ ಭಾರತದಲ್ಲಿ ಇಟ್ಕೊಳ್ಳಿ, ಕರ್ನಾಟಕದಲ್ಲಿ ಅಲ್ಲʼʼ ಎಂದು ಹೇಳಿದರು.
35 ಅಲ್ಲ, 135 ಸ್ಥಾನ ಗೆಲ್ಲುವ ಪಣ
ʻʻನಾನು ಪ್ರವಾಸದಲ್ಲಿ ಜನರ ಮೂಡ್ ನೋಡಿದ್ದೇನೆ. ಈ ಬಾರಿ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬರಲ್ಲ.
ರೈತರ ಮಕ್ಕಳು, ಕನ್ನಡಿಗರು ಈ ರಾಜ್ಯ ಆಳ್ವಿಕೆ ಮಾಡುತ್ತಾರೆ. ನಮ್ಮ ಗುರಿ ೩೫ ಸೀಟು ಗೆಲ್ಲೋದಲ್ಲ, ೧೩೫ ಸೀಟು ಗೆಲ್ಲೋದು ಎಂದರು ಕುಮಾರಸ್ವಾಮಿ.
ಇದನ್ನೂ ಓದಿ | Karnataka Election | ಜೆಡಿಎಸ್‌ಗೆ ವೋಟ್ ಮಾಡಿದ್ರೆ ಕಾಂಗ್ರೆಸ್‌ಗೆ ವೋಟ್ ಮಾಡಿದ ಹಾಗೆ ಎಂದ ಅಮಿತ್ ಶಾ!