ಶಿವಮೊಗ್ಗ: ಮಂಡ್ಯದಲ್ಲಿ ಅಭಿಷೇಕ್ ಅಂಬರೀಶ್ ರಾಜಕಾರಣಕ್ಕೆ ಬರುತ್ತಾರೆಂಬ ಮಾತಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಅವರು ಪಕ್ಷಕ್ಕೆ ಬಂದರೆ ಒಳ್ಳೆಯದು. ಈ ಬಗ್ಗೆ ಮಂಡ್ಯ ಸಂಸದೆ, ಅಭಿಷೇಕ್ ತಾಯಿ ಸುಮಲತಾ ಅಂಬರೀಶ್ ಅವರೊಂದಿಗೂ ಮಾತುಕತೆ ನಡೆದಿದ್ದು, ಒಂದೆರೆಡು ದಿನಗಳಲ್ಲಿ ಈ ಬಗ್ಗೆ ತಿಳಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು. ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ಕಣ ರಂಗೇರುತ್ತಿದೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿಷೇಕ್ ಅವರ ತಂದೆ ಅಂಬರೀಶ್ ಮಂಡ್ಯದವರು. ಹೀಗಾಗಿ ಅಭಿಷೇಕ್ ಪಕ್ಷಕ್ಕೆ ಬಂದು ಸ್ಪರ್ಧೆ ಮಾಡಿದರೆ ಒಳ್ಳೆಯದು. ಅವರು ಬಿಜೆಪಿಗೆ ಬಂದರೆ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಕೋಲಾರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿಕೊಳ್ಳಲಿ. ಇದರಿಂದ ನಮಗೇನೂ ಅಡಚಣೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾರಾಯಣ ಗೌಡ, ಬಿಜೆಪಿಯಿಂದ ಕೆಲವು ಶಾಸಕರು ಕಾಂಗ್ರೆಸ್‌ಗೆ ವಲಸೆ ಹೋಗುತ್ತಾರೆ ಎಂಬ ವಿಚಾರವು ಸತ್ಯಕ್ಕೆ ದೂರವಾಗಿದೆ. ನಮ್ಮ ಪಕ್ಷದಿಂದ ಯಾವ ಶಾಸಕರೂ ಅಲ್ಲಿಗೆ ಹೋಗುವುದಿಲ್ಲ. ನಾನು ಜೆಡಿಎಸ್‌ನಿಂದ ಬಂದವನು, ಬಿಜೆಪಿಯಲ್ಲೇ ಇದೀನಲ್ಲವೇ? ಇನ್ನು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಂತ್ರಿಯಾದವರಲ್ಲ. ಅವರೊಬ್ಬರು ಬಿಜೆಪಿ ತೊರೆದು ಹೋಗಿದ್ದಾರೆ ಅಷ್ಟೇ. ಈ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನವರಾಗಿದ್ದರಿಂದ ಬಿಜೆಪಿಯಿಂದ ಕಾಂಗ್ರೆಸ್‌ಗೆ ಶಾಸಕರು ಬರುತ್ತಾರೆಂದು ಹೇಳಲೇಬೇಕು, ಹೇಳುತ್ತಾರಷ್ಟೆ. ಆ ರೀತಿ ಹೇಳದೇ ಇದ್ದರೆ, ರಾಜಕಾರಣ ಮಾಡಲು ಎಲ್ಲಿ ಆಗುತ್ತದೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Budget 2023 : ಕೇಂದ್ರ ವಿತ್ತ ಸಚಿವರ ನೇತೃತ್ವದಲ್ಲಿ ಹಲ್ವ ವಿತರಣೆ ಕಾರ್ಯಕ್ರಮ ನಾಳೆ, ಈ ಸಂಪ್ರದಾಯದ ವಿಶೇಷವೇನು?
ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವಧಿಯಲ್ಲಿ ತಹಸೀಲ್ದಾರ್‌ಗಳ ಬದಲಾವಣೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಾರಾಯಣ ಗೌಡ, ಈ ವಿಚಾರವಾಗಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, 14 ಜನ ತಹಸೀಲ್ದಾರ್‌ಗಳ ಬದಲಾವಣೆಯಾಗಿಲ್ಲ ಎಂದು ವಿವರಣೆಯನ್ನು ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಪಟ್ಟಿ ಕೇಳಿದ್ದೇನೆ. ಪಟ್ಟಿ ಬಂದ ಬಳಿಕ ಈ ಬಗ್ಗೆ ವಿವರ ನೀಡುತ್ತೇನೆ ಎಂದು ನಾರಾಯಣ ಗೌಡ ತಿಳಿಸಿದರು.