Site icon Vistara News

Modi In Karnataka: ಮೈಸೂರಿನಲ್ಲಿ ಮೋದಿ ರೋಡ್‌ ಶೋ ಮ್ಯಾಜಿಕ್‌; ಜನಸ್ತೋಮದಿಂದ ಪುಷ್ಪವೃಷ್ಟಿ

Narendra Modi Roadshow In Mysore

Narendra Modi Roadshow In Mysore

ಮೈಸೂರು: ವಿಧಾನಸಭೆ ಚುನಾವಣೆ (Modi In Karnataka) ಹಿನ್ನೆಲೆಯಲ್ಲಿ ಹಲವೆಡೆ ನರೇಂದ್ರ ಮೋದಿ ಅವರು ಬೃಹತ್‌ ಸಮಾವೇಶ, ರೋಡ್‌ ಶೋಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಂತೆ, ಅರಮನೆ ನಗರಿ ಮೈಸೂರಿನಲ್ಲೂ ನರೇಂದ್ರ ಮೋದಿ ಅವರು ರೋಡ್‌ ಶೋ ನಡೆಸಿದ್ದು, ಸಾವಿರಾರು ಜನ ಮೋದಿ ಅವರ ಮೇಲೆ ಹೂಮಳೆ ಸುರಿಸಿದ್ದಾರೆ.

ಮೈಸೂರಿನ ಗನ್‌ಹೌಸ್‌ ವೃತ್ತದಿಂದ ಹಳೆಯ ಎಪಿಎಂಸಿ, ಹೈವೇ ವೃತ್ತದವರೆಗೆ 4 ಕಿಲೋಮೀಟರ್‌ ರೋಡ್‌ ಶೋ ನಡೆಯುತ್ತಿದ್ದು, ಮೋದಿ ಅವರಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ಎಸ್‌.ಎ.ರಾಮದಾಸ್‌ ಅವರು ಸಾಥ್ ನೀಡಿದ್ದಾರೆ.

ಮೋದಿ ಮೋದಿ ಘೋಷಣೆ

ಪ್ರಧಾನಿಯವರ ರೋಡ್‌ ಶೋ ಸಾಗುವ ರಸ್ತೆಯುದಕ್ಕೂ ಸಾವಿರಾರು ಜನ ನೆರೆದಿದ್ದು, ಮೋದಿ, ಮೋದಿ ಎಂಬ ಘೋಷಣೆ ಕೂಗಿದ್ದಾರೆ. ಇಡೀ ನಗರವೇ ಕೇಸರಿಮಯವಾಗಿದ್ದು, ಮೋದಿ ರೋಡ್‌ ಶೋಗೆ ಸಾಂಸ್ಕೃತಿಕ ಕಲಾ ತಂಡಗಳು ಕೂಡ ಮೆರುಗು ನೀಡಿದವು. ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸಾಗಿದರು.

ಇದನ್ನೂ ಓದಿ: Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಅಬ್ಬರ; ಇಲ್ಲಿವೆ ಫೋಟೊಗಳು

ಬಸವೇಶ್ವರ ವೃತ್ತ, ಕೆ.ಆರ್.ವೃತ್ತ, ಚಿಕ್ಕ ಗಡಿಯಾರ ವೃತ್ತದ ಮಾರ್ಗವಾಗಿ ರೋಡ್‌ ಶೋ ಸಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರಲ್ಲಿ ಬಿಜೆಪಿ ಬಲವರ್ಧನೆಗೆ ತೀರ್ಮಾನಿಸಲಾಗಿದ್ದು, ಚುನಾವಣೆ ಫಲಿತಾಂಶದಲ್ಲೂ ಸುಧಾರಣೆಗೆ ಪಕ್ಷ ಮುಂದಾಗಿದೆ. ಹಾಗಾಗಿ, ಬಿಜೆಪಿಯು ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಭಾಗವಾಗಿಯೇ ಮೋದಿ ಅವರು ರೋಡ್‌ ಶೋ ಕೈಗೊಂಡಿದ್ದಾರೆ.

ಟಿಕೆಟ್‌ ವಂಚಿತರಿಗೆ ರೋಡ್‌ ಶೋನಲ್ಲಿ ಭಾಗವಹಿಸುವ ಅವಕಾಶ

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾದ ಕೆ.ಎಸ್.ಈಶ್ವರಪ್ಪ ಹಾಗೂ ಎಸ್‌.ಎ.ರಾಮದಾಸ್‌ ಅವರಿಗೆ ಮೋದಿ ಜತೆ ರೋಡ್‌ ಶೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಇಬ್ಬರೂ ನಾಯಕರು ರೋಡ್‌ ಶೋ ಉದ್ದಕ್ಕೂ ಮೋದಿ ಜತೆ ಕಾಣಿಸಿಕೊಂಡಿದ್ದು, ಆ ಮೂಲಕ ಅವರ ಅಸಮಾಧಾನ ತಣಿಸುವ ಹಾಗೂ ಕಾರ್ಯಕರ್ತರಲ್ಲಿದ್ದ ಸಿಟ್ಟನ್ನು ಕಡಿಮೆಗೊಳಿಸುವ ಯತ್ನ ಮಾಡಲಾಗಿದೆ ಎಂದು ತಿಳಿದುಬಂದಿದೆ.

Exit mobile version