ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಕ್‌ಪ್ರಹಾರ ನಡೆಸಿದ್ದಾರೆ. ತನಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ, ಅವರಿಂದಾಗಿಯೇ ಬಿಜೆಪಿ ಮುಳುಗುತ್ತದೆ ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದರು. ಹುಬ್ಬಳ್ಳಿ ನಿವಾಸದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಬಿಜೆಪಿ ನಾಯಕರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಿದರು!
ನನಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್ ಅವರೇ ಕಾರಣ. ತಮ್ಮ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಕೊಡಿಸುವುದಕ್ಕಾಗಿ ಹಿರಿಯ ನಾಯಕನಾಗಿರುವ ನನ್ನನ್ನು ಮೂಲೆಗುಂಪು ಮಾಡಿದರು ಎಂದು ನೇರಾನೇರ ದಾಳಿ ನಡೆಸಿದ ಜಗದೀಶ್ ಶೆಟ್ಟರ್ ಅವರು, ಸಂತೋಷ್ ಅವರಿಂದಾಗಿಯೇ ಮೈಸೂರಿನ ರಾಮದಾಸ್ ಸೇರಿದಂತೆ ಹಲವರಿಗೆ ಟಿಕೆಟ್ ಕೈತಪ್ಪಿದೆ. ಸಂತೋಷ್ ಅವರಿಂದಾಗಿ ರಾಜ್ಯದಲ್ಲಿ ಪಕ್ಷ ಮುಳುಗುತ್ತದೆ ಎಂದು ಹೇಳಿದರು.
ಮಹೇಶ್ ಟೆಂಗಿನಕಾಯಿ ಬಿ.ಎಲ್. ಸಂತೋಷ್ ಮಾನಸಪುತ್ರ. ಅವರನ್ನು ಎಂಎಲ್‌ಸಿ ಮಾಡಬಹುದಾಗಿತ್ತು. ಅದರಲ್ಲಿ ತಪ್ಪೇನಿಲ್ಲ. ಅವರಿಗೆ ಟಿಕೆಟ್ ಕೊಡಿಸುವುದಕ್ಕಾಗಿ ಸೀನಿಯರ್ ಲೀಡರ್‌ಗೆ ತಪ್ಪಿಸಿದ್ರಲ್ಲಾ ನಿಮಗೆ ಸರಿ ಅನಿಸುತ್ತಾ ಎಂದು ಶೆಟ್ಟರ್ ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಕಲಘಟಗಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಗ ಅಲ್ಲಿನ ಜನರು ಸಿಡಿದೆದ್ದರು, ಟಿಕೆಟ್ ತಪ್ಪಿತು ಎಂದು ನೆನಪಿಸಿದರು.
ಸಂತೋಷ್ ಅವರು ಮಾನಸಪುತ್ರನಿಗೆ ಟಿಕೆಟ್ ಕೊಡಿಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಹಿಂದಿನಿಂದಲೇ ಮಾತುಗಳು ಕೇಳಿಬರುತ್ತಿತ್ತು. ಮಾನಸಿಕ ಪುತ್ರನ ಮೇಲಿನ ಸಂತೋಷ್ ಮಮಕಾರ ಈ ರೀತಿ ಮಾಡಿಸಿದೆ. ನನ್ನಂಥ ಹಿರಿಯ ಪಕ್ಷ ನಿಷ್ಠ ಹೊರಹೋಗುವಂತಾಗಿದೆ ಎಂದ ಶೆಟ್ಟರ್ ಅವರು, ಇದರ ಪರಿಣಾಮ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ಮೇಲೂ ಪರಿಣಾಮ ಬೀರಲಿದೆ ಎಂದರು.
ಒಬ್ಬ ಮಾನಸಪುತ್ರನ ಟಿಕೆಟ್‌ಗಾಗಿ!
ʻʻಒಬ್ಬ ಮಹೇಶ್ ಟೆಂಗಿನಕಾಯಿ ಸಲುವಾಗಿ ಏನೇನೋ ಷಡ್ಯಂತ್ರಗಳು ನಡೆಯುತ್ತಿವೆ ಎಂದು ನಾನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಒಂದು ಕ್ಷೇತ್ರ ಡಿಸ್ಟರ್ಬ್ ಮಾಡಲು ಹೋಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ರು. ಇಲ್ಲಿ ವ್ಯಕ್ತಿ ಮುಖ್ಯ ಆದ್ರು ಪಕ್ಷ ಮುಖ್ಯ ಆಗಲಿಲ್ಲʼʼ ಎಂದು ಹೇಳಿದರು ಶೆಟ್ಟರ್.
ಬಿಜೆಪಿ ಈಗ ಕೆಲವೇ ವ್ಯಕ್ತಿಗಳ ಕಪಿಮುಷ್ಠಿಯಲ್ಲಿದೆ
ʻʻಬಿಜೆಪಿಯನ್ನು ಈಗ ಕೆಲವೇ ವ್ಯಕ್ತಿಗಳು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಬಿಜೆಪಿ ಕಚೇರಿಗೆ ಹೋದರೆ ಅವರೇ ಸೇರಿರುತ್ತಾರೆ. ನಿರ್ಮಲ್ ಕುಮಾರ್ ಸುರಾನಾ ಎಲ್ಲದಕ್ಕೂ ಇನ್‌ಚಾರ್ಜ್. ಹಿಂದೆ ಕೇಶವ ಪ್ರಸಾದ್ ಇದ್ದರು. ಯಡಿಯೂರಪ್ಪ ಸಿಎಮ್ ಆದಾಗ ಅವರನ್ನು ಹೊರಗೆ ಕಳಿಸಿದರು. ಅವರು ಈಗ ಮೇಲ್ಮನೆ ಸದಸ್ಯರುʼʼ ಎಂದು ಹೇಳಿದರು ಶೆಟ್ಟರ್.
ರಾಮದಾಸ್ ಬಂಡೆದ್ದರೆ ಬಿಜೆಪಿ ಗೆಲ್ಲಲು ಸಾಧ್ಯವೇ?
ʻʻಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ರಾಮದಾಸ್ ಅವರಿಗೆ ಟಿಕೆಟ್ ನೀಡಿದ್ದರೆ ಖಂಡಿತ ಆಯ್ಕೆ ಆಗ್ತಾರೆ. ಆದರೆ ರಾಮದಾಸ್ ಬಿ.ಎಲ್. ಸಂತೋಷ್ ಆಪ್ತರಲ್ಲ. ಅಲ್ಲಿ ತಮ್ಮ ಆಪ್ತರಾದ ಶ್ರೀವತ್ಸವ ಅವರಿಗೆ ಟಿಕೆಟ್ ನೀಡಿದ್ದಾರೆ. ರಾಮದಾಸ್ ಬಂಡೆದ್ದರೆ ಅವರು ಗೆಲ್ಲಲು ಸಾಧ್ಯವೇʼʼ ಎಂದು ಪ್ರಶ್ನಿಸಿದರು.
ಬಿಎಲ್ ಸಂತೋಷ್ ಎಲ್ಲಿ ಹೋದರೂ ಅಷ್ಟೆ,, ಎಲ್ಲೂ ಗೆಲ್ಲಲಿಲ್ಲ!
ಬಿ.ಎಲ್. ಸಂತೋಷ್ ಅವರು ಕೇರಳ ವಿಧಾನಸಭಾ ಚುನಾವಣೆಯ ಇನ್ಚಾರ್ಜ್ ಆಗಿದ್ರು. ಅಲ್ಲಿ ಒಂದೂ ಸೀಟ್ ಬರಲಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಕಳುಹಿಸಿದ್ರು. ಏನು ಪ್ರಯೋಜನವಾಗಿಲ್ಲ. ಈಗ ಕರ್ನಾಟಕದಲ್ಲಿ ಕಾರುಬಾರು ಮಾಡುತ್ತಿದ್ದಾರೆ. ಇಷ್ಟೊಂದು ವೈಫಲ್ಯ ಇರುವ ವ್ಯಕ್ತಿಗೆ ನಂಬರ್ ಒನ್, ನಂಬರ್ ಟು ವ್ಯಕ್ತಿಗಳು ಅವಕಾಶ ಕೊಟ್ಟಿದ್ದಾರೆʼʼ ಎಂದು ನೇರ ದಾಳಿ ಮಾಡಿದರು. ಹೀಗಾದರೆ ಬಿಜೆಪಿ ರಾಜ್ಯದಲ್ಲಿ ಮುಳುಗಿ ಹೋಗುತ್ತದೆ. ನಮ್ಮ ಕಣ್ಣೆದುರೇ ಹಾಳಾಗಿ ಹೋಗುತ್ತದೆ ಎಂದು ಹೇಳಿದರು.
ಒಂದೂ ಚುನಾವಣೆ ಗೆಲ್ಲದ ವ್ಯಕ್ತಿ ಸಹ ಉಸ್ತುವಾರಿ: ಅಣ್ಣಾಮಲೈಗೆ ಲೇವಡಿ
ರಾಜ್ಯದ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಿಸಿದ್ದನ್ನು ಲೇವಡಿ ಮಾಡಿದರು ಶೆಟ್ಟರ್.
ʻʻʻಒಮ್ಮೆಯೂ ಚುನಾವಣೆ ಗೆಲ್ಲದ ವ್ಯಕ್ತಿ ನಮ್ಮ ಚುನಾವಣಾ ಸಹ ಉಸ್ತುವಾರಿ. ಇಂತಹವರನ್ನು ಸಹ ಉಸ್ತುವಾರಿ ಮಾಡಿದ್ರೆ ಪಕ್ಷಕ್ಕೇನು ಉಪಯೋಗ? ನಮ್ಮ ಕೈಕೆಳಗೆ ಕೆಲಸ ಮಾಡಿದ ಸ್ವಯಂನಿವೃತ್ತ ಐಪಿಎಸ್ ವ್ಯಕ್ತಿಗಳ ಮುಂದೆ ನಾವು ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆʼʼ ಎಂದು ಹೇಳಿದರು.
ನಳಿನ್ ಆಡಿಯೋ ವೈರಲ್ ಹಿಂದೆ ಸಂತೋಷ್
ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಕೂಡ ಬಿ.ಎಲ್. ಸಂತೋಷ್ ಅವರದೇ ವ್ಯಕ್ತಿ. ಅಣ್ಣಾಮಲೈ ಕೂಡಾ ಇವರದೇ ವ್ಯಕ್ತಿ. ನನ್ನನ್ನು, ಈಶ್ವರಪ್ಪ ಅವರನ್ನು ಪಕ್ಷದಿಂದ ಕಿತ್ತು ಹಾಕುವ ಬಗ್ಗೆ ನಳಿನ್ ಮಾತನಾಡಿದ ಒಂದು ಆಡಿಯೊ ವೈರಲ್ ಆಗಿತ್ತು. ಆವತ್ತು ಸಂತೋಷ್ ಮಾಡಿದ ಪ್ಲ್ಯಾನ್ ಈಗ ವರ್ಕೌಟ್ ಆಗಿದೆ. ಆದರೆ, ಇದರಿಂದ ಪಕ್ಷಕ್ಕೆ ಬಹಳ ಹಾನಿಯಾಗಿದೆ ಎಂದರು ಶೆಟ್ಟರ್.
ʻʻಈಗ ನಾನು ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ನನಗೆ ಹೃದಯ ತುಂಬಿ ಸನ್ಮಾನ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಏನಾಗುತ್ತಿದೆ, ಏಕಾಗುತ್ತಿದೆ ಎಂಬ ವಿಚಾರವನ್ನು ವೇದನೆಯಿಂದ ಹೇಳಿಕೊಂಡಿದ್ದೇನೆ ಅಷ್ಟೆ. ಅಲ್ಲಿ ಏನಾದರೂ ನನಗೆ ಸಂಬಂಧವಿಲ್ಲʼʼ ಎಂದು ಶೆಟ್ಟರ್ ನುಡಿದರು.
ʻʻನಿನ್ನೆ ಮೊನ್ನೆ ಬಂದವರು ಕಾರ್ಯಕಾರಿಣಿಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ. ನಮಗೆ ಎರಡು ನಿಮಿಷ ಕೂಡ ಮಾತಾಡಲು ಅವಕಾಶ ಕೊಟ್ಟಿಲ್ಲ. ಹಿಂದೆಲ್ಲ ಹಿರಿಯ ನಾಯಕರು ನಮ್ಮನ್ನು ದಿಲ್ಲಿಗೆ ಕರೆಸಿ ಮಾಹಿತಿ ಕೇಳುತ್ತಿದ್ದರುʼʼ ಎಂದು ನೆನಪಿಸಿದರು.
ಜೋಶಿಯವರೇ ನಿಮ್ಮನ್ನು ಎಂಪಿ ಮಾಡಲು ಓಡಾಡಿದ್ದೇನೆ, ಆದರೆ, ನೀವು ಮಾತ್ರ!
ಕೇಂದ್ರ ಸಚಿವ ಹಾಗೂ ಹುಬ್ಬಳ್ಳಿ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಅವರ ಬಗ್ಗೆಯೂ ಶೆಟ್ಟರ್ ಉಲ್ಲೇಖ ಮಾಡಿದರು. ʻʻಜೋಶಿಯವರೇ ನಿಮ್ಮನ್ನು ಎಮ್.ಪಿ. ಮಾಡಲು ನಾನು ಎಷ್ಟು ಓಡಾಡಿದ್ದೇನೆ ಅಂತ ಮನಸ್ಸನ್ನು ಕೇಳಿಕೊಳ್ಳಿ. ನನ್ನ ಶಾಸಕ ಕ್ಷೇತ್ರಕ್ಕಿಂತ ನಿಮ್ಮನ್ನು ಎಮ್.ಪಿ. ಮಾಡಲು ಕಷ್ಟಪಟ್ಟಿದ್ದೇನೆ. ಪ್ರತಿ ಕ್ಯಾಂಪೇನ್‌ನಲ್ಲಿ ನಿಮ್ಮ ಪಾಂಪ್ಲೇಟ್‌ನಲ್ಲಿ ನನ್ನ ದೊಡ್ಡ ಫೋಟೊ ಹಾಕಿದ್ದೀರಿ. ನಿಮಗಾಗಿ ಬೆವರು ಸುರಿಸಿ ನಾಲ್ಕು ಬಾರಿ ಎಮ್‌ಪಿ ಮಾಡಿದ್ದೀವಿ. ನೀವು ನನ್ನ ಪರವಾಗಿ ಗಟ್ಟಿಯಾಗಿ ನಿಲ್ಲಬೇಕಿತ್ತುʼʼ ಎಂದು ನೆನಪಿಸಿದರು.
ʻʻನೀವು ನನಗೆ ಬೆಂಬಲ ನೀಡುತ್ತೇನೆ, ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ರಿ. ಬಿಮ್ಮಾಯಿಯವರು ಆಯ್ತು ಪ್ರಯತ್ನ ಮಾಡ್ತೀವಿ ಅಂತಾ ಮಾತ್ರ ಹೇಳಿದ್ರು. ನಾನು ಕಟ್ಟಿದ ಮನೆಯಿಂದ ನನ್ನನ್ನೇ ಹೊರಗೆ ಹಾಕಿದ್ರಿ. ಈ ಎಲ್ಲಾ ವೇದನೆ ತಡೆಯದೆ ಹೊರಗೆ ಬಂದೆʼʼ ಎಂದು ಹೇಳಿದರು.
ʻʻಎಪ್ಪತ್ತು ವರ್ಷಕ್ಕೆ ಚುನಾವಣಾ ನಿವೃತ್ತಿ ಪಡೆಯಲು ತೀರ್ಮಾನಿಸಿದ್ದೆ. ಇದು ನನ್ನ ಕೊನೆಯ ಕಲೆಕ್ಷನ್, ಗೌರವಯುತವಾಗಿ ನನ್ನನ್ನು ನಡೆಸಿಕೊಳ್ಳಿ ಎಂದು ಮನವಿ ಮಾಡಿದೆ. ಅಷ್ಟು ಸೌಜನ್ಯವನ್ನೂ ತೋರಿಸಲಿಲ್ಲʼʼ ಎಂದು ಒಂದು ಕ್ಷಣ ಭಾವುಕರಾದರು ಶೆಟ್ಟರ್.
ಇದನ್ನೂ ಓದಿ : Karnataka Congress: ರಾಮದಾಸ್‌ಗೆ ಕಾಂಗ್ರೆಸ್ ಆಹ್ವಾನ: ಶೆಟ್ಟರ್, ಸವದಿ ಬಂದ ನಂತರ 9 ಸ್ಥಾನ ಹೆಚ್ಚಾಗಿದೆ ಎಂದ ಡಿ.ಕೆ. ಶಿವಕುಮಾರ್