Site icon Vistara News

Karnataka Elections: ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಶೆಟ್ಟರ್‌ ಬಲ, 150 ಸ್ಥಾನದಲ್ಲಿ ಗೆಲುವು ಫಿಕ್ಸ್‌ ಎಂದ ಮಲ್ಲಿಕಾರ್ಜುನ ಖರ್ಗೆ

jagadish Shettar Kharge

#image_title

ಬೆಂಗಳೂರು: ಜಗದೀಶ್‌ ಶೆಟ್ಟರ್‌ ಅವರ ಆಗಮನದಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಿದೆ. ರಾಹುಲ್‌ ಗಾಂಧಿ ಅವರು ಹೇಳಿದಂತೆ ರಾಜ್ಯದಲ್ಲಿ 150 ಸ್ಥಾನ ಗೆಲ್ಲುವುದಕ್ಕೆ ಶೆಟ್ಟರ್‌ ಅವರಿಂದ ಶಕ್ತಿ ಬರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಜಗದೀಶ್‌ ಶೆಟ್ಟರ್‌ ಅವರು ಪಕ್ಷದ ಮೇಲೆ ಬೇಸರಗೊಂಡು ಸೋಮವಾರ ಕಾಂಗ್ರೆಸ್‌ ಸೇರಿದರು. ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು ಜಗದೀಶ್‌ ಶೆಟ್ಟರ್‌ ಅಗಮನ ಕಾಂಗ್ರೆಸ್‌ಗೆ ಶುಭ ಸಂದೇಶ ನೀಡಿದೆ ಎಂದರು.

ಜಗದೀಶ್‌ ಶೆಟ್ಟರ್‌ ಅವರು ಯಾವ ಸಿದ್ಧಾಂತದ ಮೂಲಕ ಬೆಳೆದು ಬಂದವರು ಎನ್ನುವುದು ನಮಗೆ ಗೊತ್ತಿದೆ. ಅದೇ ಹೊತ್ತಿಗೆ ಕಾಂಗ್ರೆಸ್‌ ಪಕ್ಷದ ನೀತಿ ನಿಲುವುಗಳು ಏನು ಎನ್ನುವುದು ಕೂಡಾ ಜಗದೀಶ್‌ ಶೆಟ್ಟರ್‌ ಅವರಿಗೆ ಗೊತ್ತಿದೆ. ಅವರು ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದಿದ್ದಾರೆ. ಅವರ ಜತೆಗೆ ಅವರ ಬೆಂಬಲಿಗರು ಕೂಡಾ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದರು ಖರ್ಗೆ.

ಹಲವು ವರ್ಷಗಳಿಮದ ಬಿಜೆಪಿಗಾಗಿ ದುಡಿದವರು ಅವರು. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ, ನಮಗೆ ಅವರು ಶಕ್ತಿ ತುಂಬಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಅವರು ಗೆಲ್ಲುವುದು ಮಾತ್ರವಲ್ಲ, ಅವರ ಸುತ್ತಮುತ್ತಲಿನವರನ್ನ ಸಹ ಗೆಲ್ಲಿಸುವ ಕೆಲಸ ಮಾಡುತ್ತಾರೆ ಎಂದರು ಮಲ್ಲಿಕಾರ್ಜುನ ಖರ್ಗೆ.

ʻʻಜಗದೀಶ್‌ ಶೆಟ್ಟರ್‌ ಅವರ ಜತೆ ನನಗೆ ಒಳ್ಳೆಯ ಸಂಬಂಧ ಇದೆ. ನಾವು ಯಾವತ್ತೂ ಜಗಳ ಮಾಡಿಕೊಂಡದ್ದು ನನಗೆ ನೆನಪಿಲ್ಲ. ನಾವು ಅಧಿಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ ಜಗಳಾಡುವ ಸನ್ನಿವೇಶ ನಿರ್ಮಾಣವಾಗಲೇ ಇಲ್ಲʼʼ ಎಂದು ನೆನಪು ಮಾಡಿಕೊಂಡರು.

ಐತಿಹಾಸಿಕ ದಿನ ಎಂದ ಡಿಕೆ ಶಿವಕುಮಾರ್‌

ಜಗದೀಶ್‌ ಶೆಟ್ಟರ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಕರ್ನಾಟಕ ರಾಜ್ಯದಲ್ಲಿ ಇಂದು ಇತಿಹಾಸದ ದಿನ. ಈ ದಿನ ಬದಲಾವಣೆಯ ದಿನ ಎಂದರು.

ಸರಳ, ಸಜ್ಜನ ರಾಜಕಾರಣಿ, ಸ್ವಾಭಿಮಾನಿ ರಾಜಕಾರಣಿ, ಒಂದೂ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ, ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕರಾಗಿ, ಸಿಎಂ ಆಗಿ ಉತ್ತಮ ಕೆಲಸ ಮಾಡಿದ ಅವರು ನಮ್ಮ ಜತೆಯಾಗಿದ್ದು ಸಂತೋಷ ಎಂದರು.

ಲಿಂಗಾಯತ ವಿರೋಧಿ ಬಿಜೆಪಿ ಎಂದ ಸಿದ್ದರಾಮಯ್ಯ

ಇದೇ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಜಗದೀಶ್‌ ಶೆಟ್ಟರ್‌ ಅವರು ಕೇವಲ ಉತ್ತರ ಕರ್ನಾಟಕದ ನಾಯಕರಷ್ಟೇ ಅಲ್ಲ, ಅವರು ಸಮಗ್ರ ರಾಜ್ಯದ ನಾಯಕರು. ಬಿ.ಎಸ್‌. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಎರಡನೇ ಸ್ಥಾನದಲ್ಲಿ ಇದ್ದಿದ್ದು ಜಗದೀಶ್ ಶೆಟ್ಟರ್. ಯಡಿಯೂರಪ್ಪ ಅವರಿಗೆ ಬಿಜೆಪಿ ಅಪಮಾನ ಮಾಡಿತು. ಅವರು ಕಣ್ಣೀರು ಹಾಕಿಕೊಂಡು ಸಿಎಂ ಹುದ್ದೆಯಿಂದ ಇಳಿದರು. ಇದೀಗ ಜಗದೀಶ್ ಶೆಟ್ಟರ್ ಅವರಿಗೂ ಅಪಮಾನ ಮಾಡಲಾಗಿದೆ. ಜಗದೀಶ್‌ ಶೆಟ್ಟರ್ ಅವರ ಪರಿಸ್ಥಿತಿ ಯಾವ ನಾಯಕನಿಗೂ ಬರಬಾರದು ಎಂದು ಹೇಳಿದರು.

ʻʻಜಗದೀಶ್‌ ಶೆಟ್ಟರ್‌ ಅವರು ಯಾವುದೇ ಆರೋಪ ಇಲ್ಲದ ರಾಜಕಾರಣಿ. ಅವರು ಸ್ವಾಭಿಮಾನಿ ರಾಜಕಾರಣಿ. ಈಗ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಸಮುದಾಯಕ್ಕೂ ಮತ್ತು ಬೆಂಬಲಿಗರಿಗೂ ಅಪಮಾನವಾಗಿದೆʼʼ ಎಂದು ಹೇಳಿದರು ಸಿದ್ದರಾಮಯ್ಯ.

ಜಗದೀಶ್‌ ಶೆಟ್ಟರ್‌ ಅವರಂಥ ಹಿರಿಯ ನಾಯಕರಿಗೆ ಯಾವುದೇ ಮುನ್ಸೂಚನೆ ಇಲ್ಲದೇ ಟಿಕೆಟ್ ತಪ್ಪಿಸುವುದು ಘೋರ ಅಪರಾಧ. ಬಿಜೆಪಿ ಅವರು ತೇಜೋವಧೆ ಮಾಡಿದ್ದರಿಂದ ಅವರು ನೊಂದು ಬಿಜೆಪಿಯಿಂದ ಹೊರ ಬಂದಿದ್ದಾರೆ. ಶೆಟ್ಟರ್ ಇಂತಹ ತೀರ್ಮಾನ ಮಾಡ್ತಾರೆ ಅಂತ ನಾವು ಅಂದುಕೊಂಡಿರಲಿಲ್ಲ. ಆದರೆ ಆಗಿರುವ ಅಪಮಾನ ಅವರು ಕಠಿಣ ತೀರ್ಮಾನ ಮಾಡುವಂತೆ ಮಾಡಿದೆ. ನಾವು ಶೆಟ್ಟರ್ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಅವರ ಸ್ವಾಭಿಮಾನಕ್ಕೆ ದಕ್ಕೆ ಆಗದ ರೀತಿ ನಡೆಸಿಕೊಳ್ಳುತ್ತೇವೆʼʼ ಎಂದರು.‌

ಸಿದ್ದರಾಮಯ್ಯ ಅವರು ಜಗದೀಶ್‌ ಶೆಟ್ಟರ್‌ ಅವರಿಗೆ ಬಿಜೆಪಿ ಮಾಡಿರುವ ಅವಮಾನವನ್ನು ಬಿಜೆಪಿ ಪ್ರಬಲ ಲಿಂಗಾಯತ ನಾಯಕನಿಗೆ ಮಾಡಿದ ಅಪಮಾನ ಎಂದು ಪ್ರಚಾರ ಮಾಡುವ ಮುನ್ಸೂಚನೆಯನ್ನು ಸಿದ್ದರಾಮಯ್ಯ ನೀಡಿದರು.

ಇದನ್ನೂ ಓದಿ : ನನ್ನನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ, ನಡೆಸಿಕೊಂಡ ರೀತಿಯಿಂದ ನೊಂದು ಬಿಜೆಪಿ ತೊರೆಯುತ್ತಿದ್ದೇನೆ: ಜಗದೀಶ ಶೆಟ್ಟರ್‌

Exit mobile version