ಬೆಂಗಳೂರು: 40 ವರ್ಷಗಳ ಕಾಲ ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿದ್ದ, ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಮುಂಜಾನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಬಿಜೆಪಿ ಅತಿ ದೊಡ್ಡ ಹೊಡೆತವನ್ನು ಅನುಭವಿಸಿದೆ. ಜತೆಗೆ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ತುಂಬಿದಂತಾಗಿದೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಜಗದೀಶ್ ಶೆಟ್ಟರ್ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ಬರಲಿದೆ ಎಂದು ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು. ಆದರೆ, ಇದನ್ನು ಪ್ರತಿಭಟಿಸಿದ ಜಗದೀಶ್ ಶೆಟ್ಟರ್ ಅವರು ಹಿರಿಯ ನಾಯಕರು ನೀಡಿದ ಉನ್ನತ ಹುದ್ದೆಗಳ ಎಲ್ಲ ಆಮಿಷಗಳನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದು, ಅವರ ಜತೆ ಕಾಂಗ್ರೆಸ್ ನಾಯಕರ ಜತೆ ಖಾಸಗಿ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದರು. ಪಕ್ಷ ಸೇರ್ಪಡೆಯ ವಿಚಾರದಲ್ಲಿ ತಡರಾತ್ರಿವರೆಗೆ ಕೆಲವೊಂದು ಚರ್ಚೆಗಳಾದ ಬಳಿಕ ಪಕ್ಷ ಸೇರ್ಪಡೆ ಅಧಿಕೃತವಾಯಿತು.
ಸೋಮವಾರ ಮುಂಜಾನೆ ಹಿರಿಯ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಅವರು ಜಗದೀಶ್ ಶೆಟ್ಟರ್ ಅವರನ್ನು ಕೆಪಿಸಿಸಿ ಕಚೇರಿಗೆ ಕರೆದುಕೊಂಡುಬಂದಿದ್ದರು.
ಇನ್ನಷ್ಟು ಮಂದಿ ನಾಯಕರು ಕಾಂಗ್ರೆಸ್‌ಗೆ?
ಈ ನಡುವೆ, ಜಗದೀಶ್ ಶೆಟ್ಟರ್ ಅವರ ಜತೆಗೆ ಇನ್ನಷ್ಟು ಬಿಜೆಪಿ ನಾಯಕರು ಈ ಬಾರಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಹಲವು ಬಿಜೆಪಿ ನಾಯಕರಿಗೆ ಧೈರ್ಯ ಬಂದಿದೆ ಎನ್ನಲಾಗಿದೆ. ಅದರ ಜತೆಗೆ ಹೈಕಮಾಂಡ್‌ನ ದಾರ್ಷ್ಟ್ಯ ಮತ್ತು ರಾಜ್ಯ ನಾಯಕರ ಅಸಹಾಯಕತೆ ನಡುವೆ ಅತಂತ್ರ ಸ್ಥಿತಿಯಲ್ಲಿರುವ ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆಗೆ ಸಾಗಬಹುದು ಎಂಬ ಮಾತುಗಳಿವೆ.
ಬಿಜೆಪಿಯ ಬಹುದೊಡ್ಡ ನಾಯಕ ಕಾಂಗ್ರೆಸ್ ಪಾಲು
1994ರಿಂದ ಆರು ಬಾರಿ ಶಾಸಕರಾಗಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಸ್ಪೀಕರ್ ಆಗಿ ಮಂತ್ರಿಯಾಗಿ ಮತ್ತು 10 ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಜಗದೀಶ್ ಶೆಟ್ಟರ್ ಅವರು ಬಹಳ ನೋವಿನಿಂದ ಪಕ್ಷ ಬಿಡುತ್ತಿರುವುದಾಗಿ ಜಗದೀಶ್ ಶೆಟ್ಟರ್ ಹೇಳಿದ್ದರು. ಇದೀಗ ಅವರು ಕಾಂಗ್ರೆಸ್ ಪಾಲಾಗಿರುವುದು ಕೈ ಪಾಳಯಕ್ಕೆ ಬಲ ತುಂಬಿದೆ. ಆದರೆ, ಬಿಜೆಪಿಗೆ ಇದು ದೊಡ್ಡ ಹೊಡೆತವಾಗಿದೆ.
ಇದನ್ನೂ ಓದಿ : Jagadish Shettar : ಬಿಜೆಪಿಯೇ ಬದುಕೆಂದು ಬಗೆದಿದ್ದ ಪ್ರಬಲ ಲಿಂಗಾಯತ ನಾಯಕನ ನೋವಿನ ನಿರ್ಗಮನ