ಬೆಂಗಳೂರು: ʻನಿಮಗೆ ಸುರಕ್ಷಿತ ಎನಿಸದೆ ಹೋದರೆ ಯಾವ ಕಾರಣಕ್ಕೂ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದು ಬೇಡ. ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿʼʼ ಎಂಬ ಸ್ಪಷ್ಟ ಸಲಹೆಯೊಂದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ (Siddaramaiah) ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ನಡೆದ ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಕ್ಷೇತ್ರದ ತೀರ್ಮಾನ ಆಗಬೇಕಾಗಿತ್ತು. ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಮಾತ್ರ ಅರ್ಜಿ ಹಾಕಿದ್ದರು. ಆದರೆ, ಚುನಾವಣಾ ಸಮಿತಿ ಸಭೆಯ ವೇಳೆ ರಾಹುಲ್ ಗಾಂಧಿ ಅವರು ಕೋಲಾರದ ಸ್ಪರ್ಧೆಯನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದರಿಂದ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಯುಗಾದಿ ದಿನದಂದು ಪ್ರಕಟವಾಗಲಿರುವ ಮೊದಲ ಪಟ್ಟಿಯಲ್ಲಿ ಕೋಲಾರದ ಅಭ್ಯರ್ಥಿ ಪ್ರಕಟವಾಗುವ ಸಾಧ್ಯತೆಗಳಿಲ್ಲ.
ಸಿದ್ದರಾಮಯ್ಯ ಅವರ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಅವರು ಗೆದ್ದು ಬರುವ ಖಾತ್ರಿ ಇರುವ ಕ್ಷೇತ್ರವನ್ನೇ ಆಯ್ಕೆ ಮಾಡಬೇಕು ಎನ್ನುವ ಸಲಹೆಯನ್ನು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ನೀಡಿದರು ಎನ್ನಲಾಗಿದೆ. ಒಂದು ವೇಳೆ ಕೋಲಾರದಿಂದಲೇ ಸ್ಪರ್ಧಿಸುವುದಾದರೆ ಅದಕ್ಕಿರುವ ಎಲ್ಲ ಸಮೀಕರಣಗಳನ್ನು ಪರಿಶೀಲಿಸಬೇಕು. ನಾಯಕರೆಲ್ಲರೂ ಸೇರಿ ಗೆಲ್ಲಿಸಬೇಕು. ಅಷ್ಟಾದರೂ ದೊಡ್ಡ ಲೀಡ್ ಪಡೆಯಲು ಕಷ್ಟವಾಗಬಹುದು ಎಂದಿದ್ದರೆ ಅವರು ಈ ಹಿಂದೆ ಸ್ಪರ್ಧಿಸಿ ಗೆದ್ದಿರುವ ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂದು ರಾಹುಲ್ ಹೇಳಿದ್ದಾರೆ ಎನ್ನಲಾಗಿದೆ.
ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸ್ವತಃ ಸಿದ್ದರಾಮಯ್ಯ ಅವರು ತಮ್ಮ ಗೆಲುವಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಇದು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಅವರ ಚರಿಷ್ಮಾದಿಂದ ಗೆಲ್ಲಿಸಬಲ್ಲ ಕೆಲವೊಂದು ಕ್ಷೇತ್ರಗಳಲ್ಲಿ ಅವರನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಹೋಗಬಹುದು. ಇದು ಒಟ್ಟಾರೆಯಾಗಿ ಪಕ್ಷಕ್ಕೆ ನಷ್ಟ ಉಂಟು ಮಾಡಲಿದೆ ಎಂಬ ಅಭಿಪ್ರಾಯವನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದರು ಎನ್ನಲಾಗಿದೆ.
ವರುಣಾವೇ ಸೇಫ್ ಯಾಕೆ?
ಸಿದ್ದರಾಮಯ್ಯ ಅವರು ವರುಣದಿಂದ 2008ರಿಂದ ನಿರಂತರ ಗೆಲುವು ಸಾಧಿಸಿದ್ದಾರೆ. ಇಲ್ಲಿ ಎಲ್ಲ ವರ್ಗಗಳು ಸಿದ್ದರಾಮಯ್ಯ ಪರವಾಗಿವೆ. ಕಾಂಗ್ರೆಸ್‌ನಲ್ಲಿ ಕೂಡಾ ಒಗ್ಗಟ್ಟಿದೆ. ಇಲ್ಲಿ ಈಗ ಮಗ ಯತೀಂದ್ರ ಅವರೇ ಶಾಸಕರಾಗಿದ್ದು, ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಹೀಗಾಗಿ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗೆಲ್ಲಬಹುದು. ಇಲ್ಲಿನ ಉಸ್ತುವಾರಿಯನ್ನು ಮಗ ಯತೀಂದ್ರ ಅವರಿಗೆ ನೀಡಿ ಸಿದ್ದರಾಮಯ್ಯ ಅವರಿಗೆ ರಾಜ್ಯದೆಲ್ಲೆಡೆ ಪ್ರಚಾರ ನಡೆಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು.
ಆದರೆ, ಇದರಿಂದ ಯತೀಂದ್ರ ಅವರ ರಾಜಕೀಯಕ್ಕೆ ಹಿನ್ನಡೆ ಆದೀತು ಎಂಬ ಅಭಿಪ್ರಾಯವಿದ್ದರೂ ಅವರಿಗೆ ಒಂದು ಅವಧಿಯ ಬ್ರೇಕ್ ನೀಡಿದರೆ ಸಮಸ್ಯೆ ಆಗದು ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ರಾಹುಲ್ ಗಾಂಧಿ ಕೂಡಾ ವರುಣಾದ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲದರ ನಡುವೆ ಸಿದ್ದರಾಮಯ್ಯ ಅವರು ಕೋಲಾರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಸೆಯನ್ನೂ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಕೋಲಾರ ನಾಯಕರ ಜತೆ ಸಭೆ
ಇತ್ತ ದಿಲ್ಲಿಯಿಂದ ಬೆಂಗಳೂರಿಗೆ ಮರಳಿ ಬಂದಿರುವ ಸಿದ್ದರಾಮಯ್ಯ ಅವರು ಮಧ್ಯಾಹ್ನ ಕೋಲಾರದ ಪ್ರಮುಖ ಕಾಂಗ್ರೆಸ್ ನಾಯಕರ ಸಭೆಯನ್ನು ಕರೆದಿದ್ದಾರೆ. ಅಲ್ಲಿನ ವಾಸ್ತವಿಕ ಸ್ಥಿತಿ ಏನು? ಸೋಲು ಗೆಲುವಿನ ಸಾಧ್ಯತೆ ಎಷ್ಟು ಎನ್ನುವ ವಿಚಾರದಲ್ಲಿ ಚರ್ಚೆಗಳನ್ನು ನಡೆಸಿ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ : Karnataka Elections 2023 : ಕೋಲಾರದ ಸ್ಪರ್ಧೆಯಿಂದ ಹಿಂದೆ ಸರಿದರಾ ಸಿದ್ದರಾಮಯ್ಯ? ರಾಹುಲ್ ಸಲಹೆ ಏನು?