ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ, ಆಗಲೇ ರಾಜಕಾರಣಿಗಳು ಮತದಾರರನ್ನ ತಮ್ಮತ್ತ ಓಲೈಸಿಕೊಳ್ಳುವುದಕ್ಕೆ ಇನ್ನಿಲ್ಲದ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಸೀರೆ, ಕುಕ್ಕರ್, ಪಡಿತರಗಳನ್ನು ವಿತರಿಸಿ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಕೋಟಿ ಕೋಟಿ ಮೊತ್ತದಲ್ಲಿ ಹಣದ ಸಾಗಾಟ ಮತ್ತು ಶೇಖರಣೆ ಕೂಡಾ ನಡೆಯುತ್ತಿದೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಹಣ ಮತ್ತು ಇತರ ವಸ್ತುಗಳ ಸಾಗಾಟದ ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದ್ದರಿಂದ ಪೊಲೀಸರು ಕಟ್ಟೆಚ್ಚರ ವಹಿಸಲು ಶುರು ಮಾಡಿದ್ದಾರೆ. ಹೀಗಾಗಿ ಕೇವಲ ಒಂದು ವಾರದಲ್ಲೇ 10 ಕೋಟಿ ರೂ. ಮೌಲ್ಯದ ವಸ್ತುಗಳು ಮತ್ತು ಕೋಟ್ಯಂತರ ರೂ. ವಶವಾಗಿವೆ.
ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳು ಆಮಿಷವೊಡ್ಡುತ್ತಿದ್ದಾರೆ ಎಂಬ ಮಾಹಿತಿ ಕಲೆಹಾಕಿದ್ದ ಕೇಂದ್ರ ಚುನಾವಣ ಆಯೋಗ ಕೆಲವು ದಿನಗಳ ಹಿಂದೆ ರಾಜ್ಯದ ಎಲ್ಲ ಎಸ್ಪಿಗಳ ಜೊತೆ ಸಭೆ ನಡೆಸಿತ್ತು. ಈ ವೇಳೆ ಪೊಲೀಸರಿಗೆ ಅಭ್ಯರ್ಥಿಗಳು ತೋರುವ ಆಮಿಷಗಳ ಬಗ್ಗೆ ಕಣ್ಣಿಡಲು ಸೂಚಿಸಿತ್ತು. ಸೂಚನೆ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸ್ರು 10 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ
ಇನ್ನು ಮತದಾರರಿಗೆ ಪ್ರತಿ ಬಾರಿಯಂತೆ ಈ ಬಾರಿಯೂ ರಾಜಕಾರಣಿಗಳು ಚಿಲ್ಲರೆ ಆಸೆಗಳನ್ನೆ ತೋರಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳಲ್ಲಿ ಅತಿ ಹೆಚ್ಚು ಸಿಕ್ಕಿರುವುದು, ಕುಕ್ಕರ್, ಸೀರೆ, ಬೆಡ್ ಶೀಟ್ ಹಾಗೂ ದಿನಸಿ ಪದಾರ್ಥಗಳೇ.
ಇದಲ್ಲದೆ ಚುನಾವಣಾ ಆಯೋಗದ ಸೂಚನೆ ಬಳಿಕ ಪೊಲೀಸರು ಚೆಕ್ ಪೋಸ್ಟ್ ಗಳನ್ನ ಮಾಡಿಕೊಂಡು ಪರಿಶೀಲನೆ ಶುರು ಮಾಡಿದ್ದಾರೆ. ಈ ವೇಳೆ ಸಾಕಷ್ಟು ದಾಖಲೆಯಿಲ್ಲದ ಹಣ ಸಿಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ 50 ಲಕ್ಷ ರೂ. ಕೆ ಆರ್ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ 25 ಲಕ್ಷ ರೂ., ಕಲಬುರಗಿಯಲ್ಲಿ ಐವತ್ತು ಲಕ್ಷ ಮತ್ತು ಗದಗದಲ್ಲಿ 20 ಲಕ್ಷ ರೂ. ಹಣ ಪತ್ತೆಯಾಗಿದೆ. ಜತೆಗೆ 16 ಲಕ್ಷ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕೋಡಿಯಲ್ಲಿ ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ
ಚಿಕ್ಕೋಡಿ: ಸದಲಗಾ ಸಮೀಪದ ದತ್ತವಾಡ ಚೆಕ್ ಪೋಸ್ಟ್‌ನಲ್ಲಿ ಮಾರ್ಚ್ 21ರಂದು ರಾತ್ರಿ ದೊಡ್ಡ ಪ್ರಮಾಣದಲ್ಲಿ ಸೀರೆ ಸಾಗಾಟವನ್ನು ಪತ್ತೆ ಹಚ್ಚಲಾಗಿದ್ದು, ಇದೆಲ್ಲವೂ ರಾಯಭಾಗ ಮತಕ್ಷೇತ್ರದಲ್ಲಿ ಹಂಚಲು ಒಯ್ಯುತ್ತಿರುವ ಸೀರೆಗಳೆಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಭಾಗದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕಾಗಿ, ಪತ್ತೆ ಹಚ್ಚುವುದಕ್ಕಾಗಿ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದ್ದು, ಅದು ಸದಲಗಾ ಪಟ್ಟಣದ ಹೊರವಲಯಲ್ಲಿರುವ ಸದಲಗಾ ದತ್ತವಾಡ ಚೆಕ್ ಪೋಸ್ಟ್‌ನಲ್ಲಿ ಕಾರ್ಯಾಚರಿಸುತ್ತಿತ್ತು. ಈ ವೇಳೆ ಮಂಗಳವಾರ ರಾತ್ರಿ 10 ಗಂಟೆಯ ಹೊತ್ತಿಗೆ ಬೂದು ಬಣ್ಣದ ಟೆಂಟೋ ಬಂದಿತ್ತು. ಅದನ್ನು ತಡೆದು ವಿಚಾರಿಸಿದಾಗ ಚಾಲಕ ಕೊಲ್ಲಾಪುರ ಮೂಲದ ಖದಿರ ದಾವರಲ ಶೇಖ್ (60) ಎಂದೂ, ಅವನ ಜತೆಗಿದ್ದ ಕ್ಲೀನರ್ ರಾಯಭಾಗದ ವಸಂತ (50) ಎಂದು ಮಾಹಿತಿ ನೀಡಿದರು.
ಟೆಂಪೋದಲ್ಲಿ ನಾನಾ ಬಣ್ಣದ ಸುಮಾರು 5000 ಪಾಲಿಸ್ಟರ್ ಫ್ಯಾನ್ಸಿ ಸೀರೆಗಳು ಕಂಡುಬಂದವು. ಒಂದು ಸೀರೆಗೆ ಸುಮಾರು 320 ರೂ. ಎಂದು ಲೆಕ್ಕ ಹಾಕಲಾಗಿದ್ದು, ಒಟ್ಟು 16 ಲಕ್ಷ ಮೌಲ್ಯದ ಸೀರೆಗಳು ಅದರಲ್ಲಿದ್ದವು ಎಂದು ಅಂದಾಜಿಸಲಾಗಿದೆ. ಇವುಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದಿಂದ ತರಲಾಗಿದೆ ಎಂದು ತಿಳಿದುಬಂದಿದೆ.
ಗದಗ: ಎರಡು ಚೆಕ್ ಪೋಸ್ಟ್‌ಗಳಲ್ಲಿ 20 ಲಕ್ಷ ರೂ. ವಶ
ಮುಳಗುಂದ ಚೆಕ್‌ಪೋಸ್ಟ್‌ನಲ್ಲಿ 15 ಲಕ್ಷ ರೂ. ವಶ
ಗದಗ ನಗರದ ಮುಳಗುಂದ ರಸ್ತೆಯಲ್ಲಿನ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ವಶವಾಗಿದೆ. ಶಿಗ್ಗಾವಿ ತಾಲೂಕಿನ ಹುಲಗೂರನಿಂದ ದೇವದುರ್ಗಕ್ಕೆ ಹೊರಟಿದ್ದ ಕಾರನ್ನು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
ರಾಮಗೇರಿ ಚೆಕ್ ಪೋಸ್ಟ್‌ನಲ್ಲಿ 4.55 ಲಕ್ಷ ರೂ. ವಶಕ್ಕೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 4.55 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಕಲಬುರಗಿಯಲ್ಲಿ ದಾಖಲೆ ಇಲ್ಲದ 50 ಲಕ್ಷ ರೂ. ವಶ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಚಿಗರಹಳ್ಳಿ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡುವ ವೇಳೆ ಸ್ಕಾರ್ಪಿಯೋ ಕಾರ್ ನಲಿ 50 ಲಕ್ಷ ರೂ. ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಿಂದ ಕಲಬುರಗಿಗೆ ಬಂದಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಈ ಹಣ ಸಿಕ್ಕಿದೆ. ಹಣ ಸಾಗಿಸುತ್ತಿದ್ದ ಯಾದವ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೇವರ್ಗಿ ಪೊಲೀಸರು ಜೇವರ್ಗಿ ತಹಶಿಲ್ದಾರ್ ನೇತೃತ್ವದಲ್ಲಿ ದಾಳಿ ಮಾಡಿದ್ದರು.
ಇದನ್ನೂ ಓದಿ : HD Kumaraswamy: ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್‌ನಲ್ಲಿ ಟೀಂ ರೆಡಿ ಇದೆ: ಎಚ್.ಡಿ. ಕುಮಾರಸ್ವಾಮಿ