Site icon Vistara News

Karnataka Elections : ಕೋಲಾರ ಬಿಟ್ಟು ವರುಣಾಗೆ ಹೋಗಿ ಎಂದು ರಾಹುಲ್‌ ಹೇಳಿಲ್ಲ, ಇದೆಲ್ಲ ಗಾಳಿ ಸುದ್ದಿ ಎಂದ ಸಿದ್ದರಾಮಯ್ಯ

Former CM Siddaramaiah

Former CM Siddaramaiah

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ (Karnataka Elections) ಕೋಲಾರದಲ್ಲಿ ಸ್ಪರ್ಧಿಸದಂತೆ ಇಲ್ಲವೇ ವರುಣಾಕ್ಕೆ ಹೋಗುವಂತೆ ರಾಹುಲ್‌ ಗಾಂಧಿ ಅವರು ತನಗೆ ಯಾವುದೇ ಸಲಹೆ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ನಡೆದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಶನಿವಾಅರ ಬೆಂಗಳೂರಿಗೆ ಆಗಮಿಸಿದ ಬಳಿಕ ಈ ಹೇಳಿಕೆ ನೀಡಿದರು. ದಿಲ್ಲಿಯಲ್ಲಿ ನಡೆದ ಸಭೆಯ ವೇಳೆ ಕೋಲಾರದ ಟಿಕೆಟ್‌ ಫೈನಲ್‌ ಮಾಡಲಾಗಿರಲಿಲ್ಲ. ಕೋಲಾರದ ಟಿಕೆಟ್‌ ಚರ್ಚೆ ನಡೆದಾಗ ರಾಹುಲ್‌ ಗಾಂಧಿ ಅವರು ಕೋಲಾರ ಬಿಟ್ಟು ಸುರಕ್ಷಿತವಾಗಿರುವ ವರುಣಾ ಕ್ಷೇತ್ರದಲ್ಲಿ ನಿಲ್ಲುವಂತೆ ಸಲಹೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಇದನ್ನು ನಿರಾಕರಿಸಿದ್ದಾರೆ.

ʻʻರಾಹುಲ್ ಗಾಂಧಿಯವರು ನನಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಸೂಚನೆ ಕೊಟ್ಟಿದ್ದಾರೆ ಅನ್ನೋದು ಗಾಳಿ ಸುದ್ದಿʼʼ ಎಂದು ಹೇಳಿದ ಅವರು, ವರುಣಾ ಕ್ಷೇತ್ರದಲ್ಲಿ ಯತೀಂದ್ರ ಅವರು ಇದ್ದಾರೆ. ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದೇನೆ. ಹೈಕಮಾಂಡ್‌ ಎರಡು ಕ್ಷೇತ್ರಗಳಲ್ಲಿ ನಿಲ್ಲಿ ಅಂದ್ರೂ ನಿಲ್ತೇನೆ. ಏನಿದ್ದರೂ ಹೈಕಮಾಂಡ್ ನಿರ್ಧಾರದಂತೆ ಮಾಡ್ತೀನಿʼʼ ಎಂದು ಹೇಳಿದರು.

ಭಾನುವಾರದ ಕೋಲಾರ ಪ್ರವಾಸ ರದ್ದು

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಮನೆ ಮಾಡಿದ್ದಾರೆ ಎಂಬುದನ್ನು ತಳ್ಳಿ ಹಾಕಿದರು. ʻʻನಾನು ಕೋಲಾರದಲ್ಲಿ ಮನೆ ಮಾಡಿಲ್ಲ. ಮನೆ ನೋಡಿದ್ದು ನಿಜ ಆದ್ರೆ ಮಾಡಿಲ್ಲʼʼ ಎಂದರು. ಭಾನುವಾರ ಬೆಳಗಾವಿಗೆ ಹೋಗುತ್ತಿರುವುದರಿಂದ ಕೋಲಾರಕ್ಕೆ ಹೋಗಲು ಆಗುತ್ತಿಲ್ಲ. ಹೀಗಾಗಿ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ ಎಂದು ಹೇಳಿದರು.

ನಾನು ಯಾವುದೇ ಕ್ಷೇತ್ರಕ್ಕೆ ಅರ್ಜಿ ಹಾಕಿಲ್ಲ. ಹೈಕಮಾಂಡ್‌ ಹೇಳಿದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಹಿಂದೆ ಕೋಲಾರದಲ್ಲಿ ದೊಡ್ಡ ರ‍್ಯಾಲಿಯನ್ನು ನಡೆಸಿದ್ದ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಕಳೆದ ಬಾರಿ ಗೆದ್ದ ಬಾದಾಮಿ ಕ್ಷೇತ್ರ ದೂರವಾಗುವುದರಿಂದ ಈ ಬಾರಿ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೂಡಾ ಹೇಳಿದ್ದರು.

ಎಲ್ಲಿ ಹೇಳಿದರೂ ನಿಲ್ತೇನೆ ಎಂದ ಸಿದ್ದರಾಮಯ್ಯ

ʻʻಬಾದಾಮಿ, ಕೋಲಾರ, ವರುಣಾ ಎಲ್ಲಿ ಹೇಳ್ತಾರೋ ಅಲ್ಲಿ ನಿಲ್ತೇನೆ. ನನಗೆ ಯಾವುದೇ ರೀತಿಯ ಆತಂಕ ಇಲ್ಲ. ವರುಣಾದಲ್ಲಿ ಯತೀಂದ್ರ ಇದ್ದಾನೆ, ಅವನದು ಒಂದೇ ಹೆಸರು ಇದೆ. ಅದು ಕ್ಲಿಯರ್‌ ಆಗಬೇಕು ಅಲ್ವಾ? ಬಿಜೆಪಿಯಿಂದ ಕೆಲವರು ಬರ್ತಾರೆ ಅವರಿಗೆ ಕೆಲವು ಸೀಟು ಇಡಬೇಕು. ಒಂದು ಹೆಸರು ಇರುವ ಕ್ಷೇತ್ರ ಮಾತ್ರ ಕ್ಲೀಯರ್ ಆಗಿದೆʼʼ ಎಂದು ತಿಳಿಸಿದರು.

ಎರಡು ಕ್ಷೇತ್ರದಲ್ಲಿ ಸ್ಫರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಏನು ಹೇಳುತ್ತೆ ಅಂತ ಗೊತ್ತಿಲ್ಲ. ಎರಡು ಕ್ಷೇತ್ರಗಳಲ್ಲಿ ನಿಲ್ಲಿ ಅಂತ ಹೇಳಿದ್ರೆ ನಿಲ್ತೀನಿ. ಆದರೆ, ಹೈಕಮಾಂಡ್‌ ಎರಡು ಕ್ಷೇತ್ರದಲ್ಲಿ ನಿಲ್ಲಿ ಅಂತ ಹೇಳುವ ಸಾಧ್ಯತೆ ಕಡಿಮೆ ಎಂದರು ಸಿದ್ದರಾಮಯ್ಯ. ʻʻಬಾದಾಮಿಯಿಂದ ನನಗೆ ಒತ್ತಡ ಇದೆ, ಕೋಲಾರ ನಾಯಕರಿಂದ ಕೂಡಾ ಒತ್ತಡ ಇದೆʼʼ ಎಂದು ತಿಳಿಸಿದರು.

ಇದನ್ನೂ ಓದಿ : Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸ್ಪಷ್ಟ ಸಲಹೆ

Exit mobile version