ಮೈಸೂರು: ಜಗದೀಶ್ ಶೆಟ್ಟರ್ ಅವರು ಸಜ್ಜನರ ಸಂಗದಲ್ಲಿದ್ದರು. ಈಗ ಬಸವಣ್ಣನವರ ಮಾತು ಮೀರಿ ದುರ್ಜನರ ಸಂಗ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮೈಸೂರಿನಲ್ಲಿ ಮಾತನಾಡಿ, ಬಸವಣ್ಣ ದುರ್ಜನ ಸಂಗ ಮಾಡಬೇಡಿ ಎಂದು ಹೇಳಿದ್ದರು. ಇದನ್ನು ಎಲ್ಲರೂ ನೆನಪಿಟ್ಟುಕೊಳ್ಳಿ. ನಾನು ಶೆಟ್ಟರ್ ಬಲಿಪಶು ಆಗುತ್ತಿದ್ದಾರೆ ಎಂಬ ಪದ ನಾನು ಬಳಸುವುದಿಲ್ಲ. ಆದರೆ ಅವರು ಈಗ ಮಾಡಿರುವ ಸಂಗ ಸರಿಯಿಲ್ಲ ಎಂದರು.
ʻʻಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ಬಹುಮತ ಪಡೆಯುತ್ತದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು ಸಿಎಂ ಬಸವರಾಜ ಬೊಮ್ಮಾಯಿ.
ʻʻಸಿದ್ದರಾಮಯ್ಯ ಮತ್ತು ವಿ. ಸೋಮಣ್ಣ ಅವರು ಮುಖಾಮುಖಿಯಾಗಲಿರುವ ವರುಣ ಕ್ಷೇತ್ರದಲ್ಲಿ ಫೈಟ್ ಬಹಳ ಬಿಗಿಯಾಗಿದೆ. ನಾವು ಕ್ಷೇತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕಾರಣಕ್ಕೆ ನಾವು ಸೋಮಣ್ಣ ಅವರಂತಹ ನಾಯಕನನ್ನು ಅಲ್ಲಿ ಕಣಕ್ಕಿಳಿಸಿದ್ದೇವೆʼʼ ಎಂದು ಹೇಳಿದ ಬೊಮ್ಮಾಯಿ ಅವರು, ʻʻರಾಜ್ಯ ಹಾಗೂ ರಾಷ್ಟ್ರ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಮೋದಿ ಅವರ ಚುನಾವಣಾ ಪ್ರಚಾರದ ದಿನಾಂಕಗಳು ಇನ್ನೂ ನಿಗದಿಯಾಗಿಲ್ಲ.
ಬಹುತೇಕ ನಾಮಪತ್ರ ಪ್ರಕ್ರಿಯೆ ಮುಗಿದ ಮೇಲೆ ದಿನಾಂಕಗಳು ನಿರ್ಧಾರವಾಗುತ್ತದೆʼʼ ಎಂದರು.
ʻʻಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ ಬಹಳ ಇತ್ತು. 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅವರಿಗೆ ಅಭ್ಯರ್ಥಿಗಳೇ ಇರಲಿಲ್ಲ. ಮೊದಲ ಪಟ್ಟಿಯನ್ನು ಮಾತ್ರ ವೀರಾವೇಶದಿಂದ ಬಿಡುಗಡೆ ಮಾಡಿದರು. ಈಗ ಅವರ ಸ್ಥಿತಿ ಗೊತ್ತಾಗುತ್ತಿದೆʼʼ ಎಂದು ಲೇವಡಿ ಮಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿದೆ ಎಂದರು.
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಕಾಯುತ್ತಿರುವುದೇನು?
ʻʻನನ್ನ ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಾನು ಆಗಲೇ ನಾಮಪತ್ರ ಸಲ್ಲಿಸಿದ್ದೇನೆ. ಅದರೆ, ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡದೆ ಯಾವುದಕ್ಕೆ ಕಾಯುತ್ತಿದ್ದಾರೆ ಗೊತ್ತಿಲ್ಲ. ನನ್ನ ಕ್ಷೇತ್ರದ ಜನರ ಮೇಲೆ ನನಗೆ ವಿಶ್ವಾಸ ಇದೆ. ಜನ ನನ್ನನ್ನು ಗೆಲ್ಲಿಸುತ್ತಾರೆʼʼ ಎಂದರು ಸಿಎಂ ಬಸವರಾಜ ಬೊಮ್ಮಾಯಿ.
ಸೋಮಣ್ಣ ನಾಮಪತ್ರಕ್ಕೆ ಸಾಥ್ ನೀಡಿದ ಸಿಎಂ ಬೊಮ್ಮಾಯಿ
ಇಡೀ ರಾಷ್ಟ್ರದ ಗಮನ ಸೆಳೆಯಬಹುದಾದ, ರಾಜ್ಯ ವಿಧಾನಸಭಾ ಚುನಾವಣೆಯ (Karnataka Elections) ಅತ್ಯಂತ ಪ್ರಮುಖ ಅಖಾಡಕ್ಕೆ ಬಿಜೆಪಿ ನಾಯಕ, ಸಚಿವ ವಿ. ಸೋಮಣ್ಣ ಅವರು ಸೋಮವಾರ ಪ್ರವೇಶ ಮಾಡಿದರು. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡುವುದಕ್ಕಾಗಿ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಯಾಗಿರುವ ಸೋಮಣ್ಣ ಅವರು ಸೋಮವಾರ ನಂಜನಗೂಡಿನ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು. ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಥ್ ನೀಡಿ ವಿಕ್ಟರಿ ಸೋಮಣ್ಣ ಎಂದು ಬೆನ್ನು ತಟ್ಟಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ದೊಡ್ಡ ಸಮಾವೇಶ, ರ‍್ಯಾಲಿಗಳೂ ನಡೆದವು. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಂಜನಗೂಡಿನ ಗೋಳೂರು ಗ್ರಾಮದಲ್ಲಿ ಬೃಹತ್ ಬಿಜೆಪಿ ಸಮಾವೇಶ ನಡೆಯಿತು. ಇದರಲ್ಲಿ ಸೋಮಣ್ಣ, ಮುಖ್ಯಮಂತ್ರಿಗಳ ಜತೆ ಮೈಸೂರು ಸಂಸದ ಪ್ರತಾಪ್ ಸಿಂಹ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ : Inside Story: ಶೆಟ್ಟರ್, ಸವದಿಗೆ ಕಾಂಗ್ರೆಸ್ ರೆಡ್ ಕಾರ್ಪೆಟ್; ಲಿಂಗಾಯತರಿಗೆ ಅವಮಾನ ಮಾಡಿದ ಶಾಪ ವಿಮೋಚನೆಯ ಲೆಕ್ಕಾಚಾರ!