ಚಿತ್ರದುರ್ಗ: ಮುಂದಿನ ಚುನಾವಣೆಯಲ್ಲಿ (Karnataka Elections) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಮನಸು ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಕ್ಷೇತ್ರ ಯಾವುದು ಎನ್ನುವುದು ಬಹುತೇಕ ಫಿಕ್ಸ್ ಆದಂತಾಗಿದೆ. ಅದೇ ಹೊತ್ತಿಗೆ ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಅವಳಿ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರಾ? ಅದಕ್ಕೆ ಹೈಕಮಾಂಡ್ ಅವಕಾಶ ಕೊಡುತ್ತದಾ ಎಂಬ ಪ್ರಶ್ನೆಯೂ ಜತೆಗೆ ಎದ್ದುನಿಂತಿದೆ.
ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಬಯಸಿರುವ ವಿಚಾರವನ್ನು ಸ್ವತಃ ಸಿದ್ದರಾಮಯ್ಯ ಅವರೇ ಪ್ರಕಟಿಸಿದ್ದಾರೆ. ಶುಕ್ರವಾರ ಬಾದಾಮಿ ಕ್ಷೇತ್ರದ ಭೇಟಿಗೆ ಹೋಗುವ ಮಧ್ಯೆ ಚಿತ್ರದುರ್ಗದಲ್ಲಿ ಮಾತನಾಡಿದ ಅವರು ವರುಣಾದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ʻʻನಮ್ಮ ಮನೆಯಲ್ಲಿ ವರುಣಾದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ. ವರುಣಾ ಕ್ಷೇತ್ರದಲ್ಲೇ ಟಿಕೆಟ್ ನೀಡುವಂತೆ ಹೇಳಿದ್ದೇನೆ. ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆಯೂ ನಮ್ಮ ಮನೆಯಲ್ಲಿ ಹೇಳ್ತಿದ್ದಾರೆ. 25 ಕ್ಷೇತ್ರಗಳಲ್ಲಿ ನನಗೆ ಸ್ಪರ್ಧಿಸುವಂತೆ ಆಹ್ವಾನವಿದೆ. ಎಲ್ಲಾ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದೇನೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ಕಳೆದ ಬಾರಿ ಬಾದಾಮಿಯಿಂದ ಗೆದ್ದಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಕೋಲಾರದಿಂದ ಕಣಕ್ಕಿಳಿಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಅಲ್ಲಿನ ಗೆಲುವಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಹೈಕಮಾಂಡ್ ಸಂಶಯ ವ್ಯಕ್ತಪಡಿಸಿದ್ದರಿಂದ ಸಿದ್ದರಾಮಯ್ಯ ಅವರು ಕ್ಷೇತ್ರ ಸಮಸ್ಯೆ ಎದುರಿಸಿದರು. ಪುತ್ರ ಯತೀಂದ್ರ ಅವರು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸಲಹೆ ನೀಡಿತ್ತು.
ಈ ನಡುವೆ, ಸಿದ್ದರಾಮಯ್ಯ ಅವರು ಮನೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಮನೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದರೂ, ಪತ್ನಿ ಪಾರ್ವತಿ ಅವರು ಮಗನ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರ ನಡುವೆ ಸಿದ್ದರಾಮಯ್ಯ ಅವರು ಒಂದು ಸುತ್ತು ಬಾದಾಮಿಯ ರಾಜಕೀಯ ಪರಿಸ್ಥಿತಿಯನ್ನು ಗಮನಿಸಲು ಮುಂದಾಗಿ ಅಲ್ಲಿಗೆ ಟೂರ್ ಪ್ರೊಗ್ರಾಮ್ ಹಾಕಿಕೊಂಡಿದ್ದರು.
ಅಲ್ಲಿಗೆ ತೆರಳುವ ದಾರಿಯಲ್ಲಿ ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಒಂದು ಕ್ಷೇತ್ರವಾಗಿ ವರುಣಾವನ್ನು ಖಚಿತಪಡಿಸಿದ್ದಾರೆ. ಬಾದಾಮಿಯನ್ನು ಎರಡನೇ ಕ್ಷೇತ್ರದ ಆಯ್ಕೆಯಾಗಿ ಇಟ್ಟುಕೊಳ್ಳುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಎರಡರಲ್ಲೂ ಗೆದ್ದರೆ ವರುಣ ಉಪಚುನಾವಣೆಯಲ್ಲಿ ಪುತ್ರ ಯತೀಂದ್ರ ಅವರನ್ನು ಗೆಲ್ಲಿಸಿಕೊಂಡು ಬರುವುದು ಅವರ ಪ್ಲ್ಯಾನ್ ಇರಬಹುದು ಎನ್ನಲಾಗಿದೆ.
ಆದರೆ, ಈ ಎರಡು ಕ್ಷೇತ್ರಗಳ ಸ್ಪರ್ಧೆಗೆ ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಏನು ಹೇಳುತ್ತದೆ ಎನ್ನುವುದು ಈಗಿರುವ ಕುತೂಹಲ. ಇದುವರೆಗೂ ರಾಜಕೀಯ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿದ್ದ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಮನೆಯವರನ್ನು ಆಶ್ರಯಿಸಿದ್ದು ಕೂಡಾ ಆಸಕ್ತಿಕರ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.