Site icon Vistara News

Karnataka Elections : ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ವರುಣ ಕಣಕ್ಕಿಳಿದ ವಿ. ಸೋಮಣ್ಣ, ವಿಕ್ಟರಿ ಸೋಮಣ್ಣ ಎಂದ ಬೊಮ್ಮಾಯಿ

V Somanna Nomination

#image_title

ಮೈಸೂರು: ಇಡೀ ರಾಷ್ಟ್ರದ ಗಮನ ಸೆಳೆಯಬಹುದಾದ, ರಾಜ್ಯ ವಿಧಾನಸಭಾ ಚುನಾವಣೆಯ (Karnataka Elections) ಅತ್ಯಂತ ಪ್ರಮುಖ ಅಖಾಡಕ್ಕೆ ಬಿಜೆಪಿ ನಾಯಕ, ಸಚಿವ ವಿ. ಸೋಮಣ್ಣ ಅವರು ಸೋಮವಾರ ಪ್ರವೇಶ ಮಾಡಿದರು. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡುವುದಕ್ಕಾಗಿ ಹೈಕಮಾಂಡ್‌ ಸೂಚಿಸಿದ ಅಭ್ಯರ್ಥಿಯಾಗಿರುವ ಸೋಮಣ್ಣ ಅವರು ಸೋಮವಾರ ನಂಜನಗೂಡಿನ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು. ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಥ್‌ ನೀಡಿ ವಿಕ್ಟರಿ ಸೋಮಣ್ಣ ಎಂದು ಬೆನ್ನು ತಟ್ಟಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ದೊಡ್ಡ ಸಮಾವೇಶ, ರ‍್ಯಾಲಿಗಳೂ ನಡೆದವು.

ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಂಜನಗೂಡಿನ ಗೋಳೂರು ಗ್ರಾಮದಲ್ಲಿ ಬೃಹತ್‌ ಬಿಜೆಪಿ ಸಮಾವೇಶ ನಡೆಯಿತು. ಇದರಲ್ಲಿ ಸೋಮಣ್ಣ, ಮುಖ್ಯಮಂತ್ರಿಗಳ ಜತೆ ಮೈಸೂರು ಸಂಸದ ಪ್ರತಾಪ್‌ ಸಿಂಹ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಮತ್ತಿತರರು ಭಾಗವಹಿಸಿದ್ದರು.

ಓಡಿ ಹೋಗುವ ವ್ಯಕ್ತಿ ನಾನಲ್ಲ ಎಂದ ಸೋಮಣ್ಣ

ಸಮಾವೇಶದಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು, ʻʻತಾಯಿ ಚಾಮುಂಡಿ ಆಶೀರ್ವಾದದಿಂದ ಇಲ್ಲಿ ಸ್ಪರ್ಧಿಸಿದ್ದೇನೆ. ಪ್ರಧಾನಿಗಳೇ ನಿಮ್ಮನ್ನು ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಸೂಚಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು. ಆಗ ಸ್ವಲ್ಪ ನನಗೆ ದಿಗಿಲಾಗಿತ್ತು. ಆದರೆ, ದೇವರ ಕೃಪೆ ನನ್ನ ಮೇಲಿದೆ ಎನ್ನುವ ನಂಬಿಕೆಯಿಂದ ಕಣಕ್ಕೆ ಇಳಿದೆʼʼ ಎಂದು ಹೇಳಿದರು.

ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದ ದೃಶ್ಯ

ʻʻವರುಣ ಕ್ಷೇತ್ರದ ಜನ ಸ್ವಾಭಿಮಾನಿಗಳು. ಅಭಿವೃದ್ಧಿಗಾಗಿ ನನಗೆ ಇಲ್ಲಿ ಆಶೀರ್ವಾದ ಮಾಡುತ್ತಾರೆʼʼ ಎಂದು ಹೇಳಿದ ಸೋಮಣ್ಣ, ʻʻನಾನು ರಣರಂಗದಿಂದ ಓಡಿ ಹೋಗುವ ವ್ಯಕ್ತಿಯಲ್ಲ. ಯಾವುದಕ್ಕೂ ಹೆದರುವುದಿಲ್ಲ. ಆದರೆ ಸಂಸ್ಕಾರ ಬಿಟ್ಟು ರಾಜಕಾರಣ ಮಾಡುವುದಿಲ್ಲ. 15 ವರ್ಷದಿಂದ ಇವರು ಏನೂ ಮಾಡಲು ಆಗಿಲ್ವೋ ಅದನ್ನೆಲ್ಲಾ ಮುಂದಿನ ಐದು ವರ್ಷದಲ್ಲಿ ಮಾಡುತ್ತೇನೆ. ಅವರಿಗೆ 15 ವರ್ಷ ಕೊಟ್ಟಿದ್ದೀರಿ. ನನಗೆ ಐದು ವರ್ಷ ಅವಕಾಶ ಕೊಡಿ ಸಾಕು.
ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತೇನೆ ನೋಡಿ.ʼʼ ಎಂದು ಮನವಿ ಮಾಡಿದರು.

ಸೋಮಣ್ಣರಿಂದಾಗಿ ವರುಣ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ!

ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ʻʻವರುಣ ಹೆಸರು ಮೈಸೂರು ಜಿಲ್ಲೆ ದಾಟಿ ಹೋಗಿರಲಿಲ್ಲ. ಒಬ್ಬ ವ್ಯಕ್ತಿ, ಒಬ್ಬ ಶಕ್ತಿ ಬಂದ ಮೇಲೆ ರಾಷ್ಟ್ರ ಮಟ್ಟಕ್ಕೆ ಹೋಗಿದೆ. ಅವರೇ ವಿ. ಸೋಮಣ್ಣ. ವಿ.ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ. ಸೋಮಣ್ಣ ನಮ್ಮ ಅಣ್ಣʼʼ ಎಂದರು ಬಸವರಾಜ ಬೊಮ್ಮಾಯಿ.

ʻʻಕಾಂಗ್ರೆಸ್ 70 ವರ್ಷ ದೀನ ದಲಿತರ ವೋಟು ಹಾಕಿಸಿಕೊಂಡಿದೆ. ಸಾಮಾಜಿಕ ನ್ಯಾಯ ಅಂತ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಆದರೆ, ಭಾಷಣದಿಂದ ಹಸಿದ ಹೊಟ್ಟೆಗೆ ಅನ್ನ ಸಿಗುವುದಿಲ್ಲ. ಭಾಷಣದಿಂದ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯ ಸಿಗಲ್ಲʼʼ ಎಂದು ಸಿದ್ದರಾಮಯ್ಯ ಅವರನ್ನು ಬೊಮ್ಮಾಯಿ ಕೆಣಕಿದರು.

ʻʻಅನ್ನ ಭಾಗ್ಯದ 30 ರೂ. ಕೇಂದ್ರ ಸರ್ಕಾರದ್ದು, 3 ರೂ. ರಾಜ್ಯ ಸರ್ಕಾರದ್ದು. ಅಕ್ಕಿ ನರೇಂದ್ರ ಮೋದಿ ಅವರದ್ದು.
ಚೀಲ, ಫೋಟೊ ಮಾತ್ರ ಸಿದ್ದರಾಮಯ್ಯ ಅವರದ್ದು. ನೀವು ಬರೋದಕ್ಕೂ ಮುಂಚೆ ಅಕ್ಕಿ ಇರಲಿಲ್ವ?ʼʼ ಎಂದು ಹೇಳಿದ ಬೊಮ್ಮಾಯಿ, ʻʻಅನ್ನ ಭಾಗ್ಯದ ಅಕ್ಕಿ ಬಡವರ ಮನೆಗೆ ಹೋಗುತ್ತಿಲ್ಲ. ಬ್ಲಾಕ್ ಮಾರ್ಕೆಟ್‌ಗೆ ಹೋಗಿ ಪಾಲಿಸ್ ಆಗಿ ಹೋಟೆಲ್‌ಗೆ ಬರುತ್ತಿದೆʼʼ ಎಂದರು.

ಬಿಜೆಪಿಯಿಂದ ಬೃಹತ್‌ ರ‍್ಯಾಲಿ

ʻʻಸಿದ್ದರಾಮಯ್ಯ ಅವರ ಅವಧಿಯಲ್ಲಿ ಬಿಡಿಎ, ಹೌಸಿಂಗ್ ಬೋರ್ಡ್‌ ಹೀಗೆ ಎಲ್ಲ ಕಡೆ ಭ್ರಷ್ಟಾಚಾರ ನಡೆದಿದೆ. ನಮ್ಮ ಮೇಲೆ 40% ಭ್ರಷ್ಟಾಚಾರ ಅಂತಾರೆ. ಕೆಲಸ ಮಾಡದೆ ಬಿಲ್ ತೆಗೆದುಕೊಂಡಿರುವ ಕೇಸ್‌ಗಳು ಲೋಕಾಯುಕ್ತದಲ್ಲಿವೆʼʼ ಎಂದು ಸಿಎಂ ಹೇಳಿದರು.

ʻʻಸೋಮಣ್ಣ ಅವರು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರ ನೋಡಿ. 100 ಜನ ಬೆಂಗಳೂರಿಗೆ ಹೋಗಿ ನೋಡಿ ಬನ್ನಿ. ವರುಣವನ್ನೂ ಗೋವಿಂದರಾಜ ನಗರದ ಮಾದರಿ ಅಭಿವೃದ್ಧಿ ಮಾಡುತ್ತಾರೆ.
ಇದಕ್ಕಾಗಿ ಸೋಮಣ್ಣ ಗೆಲ್ಲಬೇಕುʼʼ ಎಂದರು.

ತಾಲೂಕು ಆಗಲಿದೆ ವರುಣ

ʻʻನೀವು ನಂಜನಗೂಡಿನಲ್ಲಿ ಯಾಕೆ ನಾಮಪತ್ರ ಸಲ್ಲಿಸುತ್ತಿದ್ದೀರಿ ಅಂದೆ. ವರುಣದಲ್ಲಿ ತಾಲೂಕು ಕಚೇರಿ ಇಲ್ಲ ಅಂದರು. ನಾನು ಎಲಾ ಇವನ ಅಂದೆ. ಮುಂಚೆ ಹೇಳಿದ್ದರೆ ತಾಲೂಕು ಆಗಿ ಘೋಷಣೆ ಮಾಡಿ ಇಲ್ಲಿಗೆ ಬರುತ್ತಿದ್ದೆ. ಈಗಲೂ ಕಾಲ ಮಿಂಚಿಲ್ಲ. ಸೋಮಣ್ಣ ಅವರನ್ನು ಗೆಲ್ಲಿಸಿ. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ.
ವರುಣವನ್ನು ತಾಲೂಕು ಮಾಡುತ್ತೇವೆʼʼ ಎಂದು ಬೊಮ್ಮಾಯಿ ಭರವಸೆ ನೀಡಿದರು.

ವಿ. ಸೋಮಣ್ಣ ಅವರು ನಾಮಪತ್ರ ಸಲ್ಲಿಸಿದ ಕ್ಷಣ

ತೆರೆದ ವಾಹನದಲ್ಲಿ ಮೆರವಣಿಗೆ

ನಂಜನಗೂಡು ಗೋಳೂರು ಗ್ರಾಮದಿಂದ ತಾಲೂಕು ಕಚೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವರುಣ ಬಿಜೆಪಿ ಮುಖಂಡರಾದ ಸದಾನಂದ, ಕಾಪು ಸಿದ್ದಲಿಂಗಸ್ವಾಮಿ ಸೇರಿ ಪ್ರಮುಖರು ಭಾಗಿಯಾದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿದರು. ಬಳಿಕ ನಂಜನಗೂಡು ತಾಲೂಕು ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ : Karnataka Election 2023: ಚಾಮರಾಜನಗರ ಬಂಡಾಯ ಶಮನಗೊಳಿಸಿದ ಬಿ.ಎಲ್‌. ಸಂತೋಷ್‌; ಸೋಮಣ್ಣಗೆ ಬೆಂಬಲ ಘೋಷಿಸಿದ ನಾಗಶ್ರೀ

Exit mobile version